ನೀವು ಬೇಕಾದ್ರೆ ಗುಂಡಿಟ್ಟು ಕೊಲ್ಲಬಹುದು. ಆದ್ರೆ ಸೇನಾ ಮಾಹಿತಿ ನೀಡಲ್ಲ: ಉಗ್ರರ ಗುಂಡೇಟಿಗೆ ಬಲಿಯಾದ ಯೋಧನ ಕೊನೆಯ ಮಾತು

Public TV
1 Min Read
Mukhtar Ahmad Malik 1

ಶ್ರೀನಗರ: “ನೀವು ಬೇಕಿದ್ದರೆ ನನ್ನನ್ನು ಗುಂಡಿಕ್ಕಿ ಕೊಂದು ಬಿಡಿ. ಆದರೆ ನಾನು ಯಾವುದೇ ಕಾರಣಕ್ಕೂ ಸೇನೆಯ ಮಾಹಿತಿಯನ್ನು ಬಹಿರಂಗ ಪಡಿಸುವುದಿಲ್ಲ”. ಇದು ಉಗ್ರರ ಗುಂಡೇಟಿಗೆ ಬಲಿಯಾದ ಲ್ಯಾನ್ಸ್ ನಾಯಕ್ ಮುಕ್ತಾರ್ ಅಹ್ಮದ್ ಮಲ್ಲಿಕ್ ಅವರ ಕೊನೆಯ ಮಾತು.

ಮುಕ್ತಾರ್ ಅವರ ಮಗ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ಸೇನಾ ಆಸ್ಪತ್ರೆಗೆ ದಾಖಲಾಗಿದ್ದರು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಗ ನಾಲ್ಕು ದಿನದ ಬಳಿಕ ಸೆಪ್ಟೆಂಬರ್ 15 ರಂದು ಮೃತಪಟ್ಟಿದ್ದರು.

Mukhtar Ahmad Malik terror

ಮಗ ಮೃತಪಟ್ಟ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಕ್ತಾರ್ ಅಹ್ಮದ್ ಕುಲ್ಗಾಂಗೆ ಬಂದಿದ್ದರು. ಸೋಮವಾರ ಕುಟುಂಬದ ಸದಸ್ಯರು ಅಂತ್ಯಸಂಸ್ಕಾರದ ಸಿದ್ಧತೆ ನಡೆಸುತ್ತಿದ್ದಾಗ ಪತ್ರಕರ್ತರ ವೇಷವನ್ನು ಧರಿಸಿ ಮೂವರು ಉಗ್ರರು ಮನೆಯನ್ನು ಪ್ರವೇಶಿಸಿದ್ದಾರೆ.

ಮಗನ ಅಂತ್ಯಸಂಸ್ಕಾರ ನಡೆಸುತ್ತಿದ್ದಾಗ ಉಗ್ರರು ತಮ್ಮ ನಿಜ ರೂಪವನ್ನು ತೋರಿಸಿ ಸೇನೆಗೆ ಸಂಬಂಧಿಸಿದ ಪ್ರಶ್ನೆ ಕೇಳಿ ಮಾಹಿತಿ ನೀಡುವಂತೆ ಮಲ್ಲಿಕ್ ಅವರನ್ನು ಬಲವಂತ ಪಡಿಸಿದ್ದಾರೆ. ಆದರೆ ಮಲ್ಲಿಕ್ ಅವರು, ನೀವು ಬೇಕಾದರೆ ನನ್ನನ್ನು ಗುಂಡಿಟ್ಟು ಹತ್ಯೆ ಮಾಡಬಹುದು. ಆದರೆ ನಾನು ಯಾವುದೇ ಕಾರಣಕ್ಕೂ ಸೇನೆಯ ಮಾಹಿತಿಯನ್ನು ನೀಡುವುದಿಲ್ಲ ಎಂದು ಖಂಡತುಂಡವಾಗಿ ಹೇಳಿದ್ದಾರೆ. ನಿರೀಕ್ಷೆ ಮಾಡದ ಉತ್ತರ ಬಂದ ಹಿನ್ನೆಲೆಯಲ್ಲಿ ಮೂವರು ಉಗ್ರರು ಮಲ್ಲಿಕ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದರು.

Mukhtar Ahmad Malik

ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಮರ್ ಮಜೀದ್, ಓವೈಸಿ ರಾಜಾ, ಜಾವೀದ್ ಭಟ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು ಅವರ ಶೋಧ ಕಾರ್ಯ ಆರಂಭಗೊಂಡಿದೆ.

ಭಾರತೀಯ ಸೇನೆ ಉಗ್ರರ ಕಾರ್ಯಯೋಜನೆಗಳನ್ನು ವಿಫಲ ಮಾಡುತ್ತಿರುವ ಹಿನ್ನೆಲೆಯಲ್ಲಿ ಉಗ್ರರು ಈಗ ಕಾಶ್ಮೀರದ ಸೈನಿಕರ ಕುಟುಂಬಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಕಾಶ್ಮೀರದ ಸೈನಿಕರನ್ನು ಹತ್ಯೆ ಮಾಡಲು ಮುಂದಾಗುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article