ಡೆಹ್ರಾಡೂನ್: ಉತ್ತರಾಖಂಡದ (Uttarakhand) ಹಲ್ದ್ವಾನಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮದರಸಾವನ್ನು ಧ್ವಂಸಗೊಳಿಸಿದ (Madrasa Razed) ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ದುಷ್ಕರ್ಮಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
Advertisement
ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರು ಹಲ್ದ್ವಾನಿಯ ಒಂಭುಲ್‌ಪುರದಲ್ಲಿ ಕಂಡಲ್ಲಿ ಗುಂಡು ಹಾರಿಸುವಂತೆ (ಶೂಟ್-ಅಟ್-ಸೈಟ್) ಆದೇಶ ಹೊರಡಿಸಿದ್ದಾರೆ. ಜೊತೆಗೆ ಹಲ್ದ್ವಾನಿಯ ಶಾಲೆಗಳಿಗೆ ಶುಕ್ರವಾರ (ಫೆ.9) ರಜೆ ಘೋಷಿಸಿದ್ದಾರೆ. ಇದನ್ನೂ ಓದಿ: ಯುಪಿಎ 10 ವರ್ಷಗಳಲ್ಲಿ ಆರ್ಥಿಕತೆಯನ್ನು ನಿಷ್ಕ್ರಿಯಗೊಳಿಸಿತ್ತು: ಶ್ವೇತಪತ್ರ ಹೊರಡಿಸಿದ ಮೋದಿ ಸರ್ಕಾರ
Advertisement
Advertisement
ಬಂಭುಲ್ಪುರ ಧಗ ಧಗ:
ಹಲ್ದ್ವಾನಿಯ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಗುರುವಾರ (ಫೆ.8) ಬಂಭುಲ್ಪುರ ಪೊಲೀಸ್ ಠಾಣೆ ಬಳಿ ಅಕ್ರಮವಾಗಿ ನಿರ್ಮಿಸಿದ್ದ ಮದರಸಾವನ್ನು ಬುಲ್ಡೋಜರ್‌ನಿಂದ ಧ್ವಂಸಗೊಳಿಸಿದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯರ ಗುಂಪೊಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದೆ. ವಿದ್ಯುತ್ ಟ್ರಾನ್ಸ್ಫಾರ್ಮರ್‌ಗಳಿಗೂ ಬೆಂಕಿ ಹಚ್ಚಿದೆ. ಈ ವೇಳೆ ಹಲವು ಪೊಲೀಸ್ ಅಧಿಕಾರಿಗಳು ಗಾಯಗೊಂಡರು. ಗಲಭೆಕೋರರ ಗುಂಪು ಬಂಭುಲ್‌ಪುರ ಪೊಲೀಸ್ ಠಾಣೆಯನ್ನು ಸುತ್ತುವರಿದಿದ್ದರಿಂದ ಹಲವಾರು ಪತ್ರಕರ್ತರು ಮತ್ತು ಆಡಳಿತ ಅಧಿಕಾರಿಗಳು ಪೊಲೀಸ್ ಠಾಣೆಯೊಳಗೆ ಸಿಲುಕಿದ್ದರು. ಇದರಿಂದಾಗಿ ಗಲಭೆಕೋರರನ್ನು ಹತ್ತಿಕ್ಕಲು ಸರ್ಕಾರ ಕಂಡಲ್ಲಿ ಗುಂಡು ಹಾರಿಸಲು ಆದೇಶ ಹೊರಡಿಸಿದೆ.
Advertisement
ಸದ್ಯ ಹಲ್ದ್ವಾನಿಗೆ ಹೆಚ್ಚುವರಿ ಭದ್ರತಾ ಪಡೆಗಳನ್ನ ನಿಯೋಜಿಸಲಾಗಿದೆ. ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಸಭೆ ನಡೆಸಿದ ನಂತರ, ಬಂಭುಲ್‌ಪುರದಲ್ಲಿ ಕರ್ಫ್ಯೂ ವಿಧಿಸಿದ್ದು, ಕಂಡಲ್ಲಿ ಗುಂಡು ಹಾರಿಸುವಂತೆ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಯಶಸ್ವಿ; 20 ಸಾವಿರ ಜನ ಭಾಗಿ, 11,000 ಅರ್ಜಿ ಸಲ್ಲಿಕೆ
ಬಳಿಕ ಪರಿಸ್ಥಿತಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಹಲ್ದ್ವಾನಿಯ ಬಂಭುಲ್‌ಪುರ ಪ್ರದೇಶದಲ್ಲಿ, ಅಕ್ರಮವಾಗಿ ಮದರಸಾವನ್ನು ನಿರ್ಮಿಸಲಾಗಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಅತಿಕ್ರಮ ಕಟ್ಟಡಗಳ ತೆರವುಗೊಳಿಸುವ ಅಭಿಯಾನಕ್ಕೆ ತೆರಳಿದ್ದ ಅಧಿಕಾರಿಗಳ ತಂಡ ಮದರಸಾವನ್ನು ಧ್ವಂಸಗೊಳಿಸಿದೆ. ಇದರಿಂದ ಕೆಲ ಸಮಾಜ ವಿರೋಧಿಗಳು ಪೊಲೀಸರೊಂದಿಗೆ ಘರ್ಷಣೆಗಿಳಿದಿದ್ದು, ಕಲ್ಲು ತೂರಿದ್ದಾರೆ. ಈ ವೇಳೆ ಕೆಲ ಅಧಿಕಾರಿಗಳು ಗಾಯಗೊಂಡಿದ್ದಾರೆ. ಸದ್ಯ ಹೆಚ್ಚುವರಿ ಕೇಂದ್ರೀಯ ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜನರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದೇವೆ. ಕರ್ಫ್ಯೂ ಜಾರಿಯಲ್ಲಿದ್ದು, ಗಲಭೆಕೋರರು ಮತ್ತು ಅತಿಕ್ರಮಣಕಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.