-ಯುವ ಪ್ರತಿಭೆ ಹಾಡಿಗೆ ಆನಂದ್ ಮಹೀಂದ್ರ ಫಿದಾ
ಮುಂಬೈ: ಶೂ ಪಾಲಿಶ್ ಮಾಡಿಕೊಂಡು ಜೀವನ ನಡೆಸುತ್ತಿದ್ದ ಪಂಜಾಬ್‍ನ ಭಟಿಂಡಾದ ಯುವಕ ಸನ್ನಿ ಹಿಂದೂಸ್ತಾನಿ ಈಗ ‘ಇಂಡಿಯನ್ ಐಡಲ್’ ಆಗಿ ಹೊರಹೊಮ್ಮಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಇಂಡಿಯನ್ ಐಡಲ್ 11ನೇ ಆವೃತ್ತಿ’ ಸ್ಪರ್ಧೆಯಲ್ಲಿ ಸನ್ನಿ ಗೆದ್ದು ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಸನ್ನಿ ಅವರ ಮಧುರ ಧ್ವನಿ, ಪ್ರತಿಭೆಗೆ ಮಹೀಂದ್ರ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರ ಫಿದಾ ಆಗಿದ್ದು, ಸನ್ನಿ ಹಾಡಿದ ಹಾಡನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಶೂ ಪಾಲಿಶ್ ಮಾಡಿ ಜೀವನ ನಡೆಸುತ್ತಿದ್ದ ಸನ್ನಿ ಸಂಗೀತ ಶಿಕ್ಷಕರ ಮೂಲಕ ಕಲಿತವರಲ್ಲ. ಹೀಗಿದ್ದರೂ ಸನ್ನಿಗೆ ಹಾಡುವುದು ಎಂದರೆ ಅಚ್ಚುಮೆಚ್ಚು. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಛಲ ಸನ್ನಿಯಲ್ಲಿತ್ತು. ಆದರೆ ಸನ್ನಿ ಅವರಿಗೆ ಬಡತನ ಕಾಡುತ್ತಿತ್ತು. ಕಡುಬಡತನದ ನಡುವೆಯೂ ಸನ್ನಿ ತಮ್ಮ ಛಲ ಬಿಡದೇ ಹಾಡಿ ಈಗ ಇಂಡಿಯನ್ ಐಡಲ್ ಆಗಿದ್ದಾರೆ.
ಸನ್ನಿ ತಂದೆ ಬೂಟ್ ಪಾಲಿಶ್ ಮಾಡಿ ಸಂಸಾರ ನಡೆಸುತ್ತಿದ್ದರು. ಅವರು ಕೂಡ ಉತ್ತಮ ಹಾಡುಗಾರರಾಗಿದ್ದರು. ಸಂಗೀತ ಕಲಿಯದಿದ್ದರೂ ಆಗಾಗ ಮದುವೆ ಮನೆಗಳಲ್ಲಿ ಹಾಡಿ ಸ್ವಲ್ಪ ಹಣ ಗಳಿಸುತ್ತಿದ್ದರು. ಇತ್ತ ಸನ್ನಿ ತಾಯಿ ಬೀದಿ ಬೀದಿಯನ್ನು ಸುತ್ತಿ ಆಕಾಶ ಬುಟ್ಟಿಗಳನ್ನು ಮಾರಾಟ ಮಾಡಿಕೊಂಡು ದುಡಿಯುತ್ತಿದ್ದರು. ಆದರೆ ಕಾಶ್ಮೀರ ಪ್ರವಾಹದ ಸಂದರ್ಭದಲ್ಲಿ ಸನ್ನಿ ತಮ್ಮ ತಂದೆಯನ್ನು ಕಳೆದುಕೊಂಡರು. ತಂದೆ ಮೃತಪಟ್ಟ ಬಳಿಕ ಸನ್ನಿ ಕೂಡ ಬೂಟ್ ಪಾಲಿಶ್ ಮಾಡುತ್ತಾ ಕುಟುಂಬಕ್ಕೆ ಆಸರೆಯಾದರು. ಆದರೆ ಕಡುಬಡತನದಲ್ಲಿ ಸಂಗೀತದ ಮೇಲಿದ್ದ ಅವರ ಪ್ರೀತಿ, ಒಲವು ಕಿಂಚಿತ್ತು ಕಡಿಮೆ ಆಗಿರಲಿಲ್ಲ. ಪ್ರತಿಭೆ, ಛಲವಿದ್ದರೆ ಎಷ್ಟೇ ಕಷ್ಟವಾದರೂ ಸಾಧನೆ ಮಾಡಬಹುದು ಎನ್ನುವುದನ್ನ ಸನ್ನಿ ಸಾಭೀತು ಮಾಡಿದ್ದಾರೆ. ಅದೆಷ್ಟೋ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದಾರೆ.
ಸನ್ನಿ ಇಂಡಿಯನ್ ಐಡಲ್ ಟ್ರೋಫಿ ಜೊತೆಗೆ 25 ಲಕ್ಷ ರೂ. ನಗದು, 1 ಕಾರನ್ನು ಬಹುಮಾನವಾಗಿ ಗಳಿಸಿದ್ದಲ್ಲದೇ, ಟಿ ಸಿರೀಸ್ ಸಂಸ್ಥೆಯಲ್ಲಿ ಹಾಡುವ ಕಾಂಟ್ರಾಕ್ಟ್ ಕೂಡ ಪಡೆದುಕೊಂಡಿದ್ದಾರೆ. ಸನ್ನಿ ಪ್ರತಿಭೆಗೆ ಇಡೀ ಭಾರತವೇ ಮನಸೋತಿದೆ. ಇತ್ತ ಆನಂದ್ ಮಹೀಂದ್ರ ಕೂಡ ಸನ್ನಿ ಹಾಡಿಗೆ ಫಿದಾ ಆಗಿ ಅವರ ಹಾಡಿನ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ನಟ ಕುನಾಲ್ ಖೇಮು, ಅಜಯ್ ದೇವಗನ್, ನಟಿ ಕಾಜೋಲ್ ಹಾಗೂ ಕಾರ್ಯಕ್ರಮದ ಜಡ್ಜ್ ಹಿಮೇಶ್ ರೇಶ್ಮಿಯಾ ಸೇರಿದಂತೆ ಅನೇಕರು ಸನ್ನಿ ಧ್ವನಿಗೆ ಮನಸೋತಿದ್ದಾರೆ.