– ನೀವೇನ್ಮಾಡ್ತಿದ್ದೀರೋ ಅದನ್ನ ಇಲ್ಲಿಗೇ ನಿಲ್ಲಿಸಿ ಎಂದು ಗಲಾಟೆ
– ಭಾರತೀಯರ ಮೇಲೆ ಅಮೆರಿಕ ಮಹಿಳೆಯ ಆವಾಜ್
ಆಶ್ವತ್ಥ್ ಸಂಪಾಜೆ
ಬೆಂಗಳೂರು: ಭಾರತೀಯರ ಮೇಲೆ ಅಮೆರಿಕದಲ್ಲಿ ಜನಾಂಗೀಯ ನಿಂದನೆ ಹೊಸದೇನಲ್ಲ. ಈಗ ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಸತ್ಯನಾರಾಯಣ ಪೂಜೆಗೆ ರಂಗೋಲಿ ಹಾಕಿದ್ದು ಯಾಕೆ ಎಂದು ಅಮೆರಿಕದ ಮಹಿಳೆಯೊಬ್ಬಳು ಭಾರತೀಯರ ಮೇಲೆ ಆವಾಜ್ ಹಾಕಿದ್ದಾಳೆ.
Advertisement
ಇಲಿನಾಯ್ಸ್ ಓಕ್‍ಬ್ರೂಕ್ ಎಂಬಲ್ಲಿ ಭಾರತೀಯರೊಬ್ಬರು ಮಾರ್ಚ್ 12ರಂದು ಸತ್ಯನಾರಾಯಣ ಪೂಜೆಯನ್ನು ಆಯೋಜಿಸಿದ್ದರು. ಈ ಪೂಜೆಗಾಗಿ ಮನೆಯ ಮುಂದೆ ದೊಡ್ಡ ರಂಗೋಲಿ ಹಾಕಿದ್ದರು. ಈ ರಂಗೋಲಿ ಹಾಕಿದ್ದನ್ನು ನೋಡಿ ಕಾರಿನಲ್ಲಿ ಬಂದ ಮಹಿಳೆ ಮನೆಯ ಬಾಗಿಲನ್ನು ಬಡಿದು ರಂಗೋಲಿ ಹಾಕಿದ್ದು ಯಾಕೆ ಎಂದು ಪ್ರಶ್ನಿಸಿದ್ದಾಳೆ. ಅಷ್ಟೇ ಅಲ್ಲದೇ ನೀವು ಇಲ್ಲಿ ಏನು ಮಾಡುತ್ತಿದ್ದೀರಿ ಅದನ್ನು ನಿಲ್ಲಿಸಿ ಎಂದು ಆವಾಜ್ ಹಾಕಿದ್ದಾಳೆ.
Advertisement
ಈಕೆಯ ಪ್ರಶ್ನೆಗಳಿಗೆ ಶಾಂತವಾಗಿ ಉತ್ತರಿಸಿದ ಮನೆಯ ಯಜಮಾನ ಬಾಗಿಲನ್ನು ಮುಚ್ಚಿ 911 ನಂಬರ್‍ಗೆ ಕರೆ ಮಾಡಿದ್ದಾರೆ. ಪೊಲೀಸರು ಬರುವವರೆಗೆ ಈಕೆ ಅವರ ಮನೆಯ ಹೊರಗಡೆ ಕಾರನ್ನು ಪಾರ್ಕ್ ಮಾಡಿದ್ದಾಳೆ. ಪೊಲೀಸರು ಬಂದು ವಿಚಾರಣೆ ನಡೆಸಿದ ಬಳಿಕ ಆಕೆ ಅಲ್ಲಿಂದ ತೆರಳಿದ್ದಾಳೆ.
Advertisement
ಈ ಘಟನೆಯ ಬಗ್ಗೆ ಮೈಸೂರು ಮೂಲದ ಅಮೆರಿಕದಲ್ಲಿ ವೈದ್ಯರಾಗಿರುವ ಉಷಾ ಕೋಲ್ಪೆ ಅವರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿ, 25 ವರ್ಷ ನಾನು ಅಮೆರಿಕದಲ್ಲಿ ಇದ್ದೇನೆ. ಇದುವರೆಗೆ ನನಗೆ ಈ ರೀತಿಯ ಶಾಕಿಂಗ್ ಅನುಭವ ಆಗಿಲ್ಲ ಎಂದು ಬರೆದುಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಷಾ ಕೋಲ್ಪೆ, ಪೊಲೀಸರು ಈಗ ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆಕೆ ಮಾನಸಿಕ ಅಸ್ವಸ್ಥೆ ಎನ್ನುವ ವಿಚಾರ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ ಎಂದು ತಿಳಿಸಿದ್ದಾರೆ. ಉಷಾ ಅವರ ಈ ಫೇಸ್ ಬುಕ್ ಪೋಸ್ಟ್ ಗೆ ಬಹಳಷ್ಟು ಜನ ಕಮೆಂಟ್ ಹಾಕಿದ್ದು, ಪೊಲೀಸರು ಯಾಕೆ ಅವಳನ್ನು ಕೂಡಲೇ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಫೆ.22ರಂದು ಕ್ಯಾನ್ಸಾಸಾದ ಬಾರ್‍ನಲ್ಲಿ ಅಮೆರಿಕದ ನಿವೃತ್ತ ಯೋಧನೊಬ್ಬ, ದೇಶ ಬಿಟ್ಟು ತೊಲಗಿ ಎಂದು ಚೀರಾಡಿ ಟೆಕ್ಕಿ ಶ್ರೀನಿವಾಸ ಕುಚಿಬೋಟ್ಲಾ ಅವರನ್ನು ಹತ್ಯೆ ಮಾಡಿದ್ದ. ಇದಾದ ನಂತರ ಮಾರ್ಚ್ 4ರಂದು ವ್ಯಾಪಾರಿ ಹರ್ಣೀಶ್ ಪಟೇಲ್ ಅವರನ್ನು ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದ.