– ನಂದಿಗಿರಿಧಾಮದ ಪ್ರವಾಸಿಗರಿಗೆ ಬೀಳಿಲಿದೆ ಜಿಎಸ್‍ಟಿ ಬರೆ-ಹೊರೆ
ಚಿಕ್ಕಬಳ್ಳಾಪುರ: ಪ್ರೇಮಿಗಳ ಪಾಲಿನ ಸ್ವರ್ಗತಾಣ, ಪ್ರೇಮಧಾಮ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಇನ್ನು ಮುಂದೆ ಪ್ರವಾಸಿಗರ ಪಾಲಿಗೆ ದುಬಾರಿಯಾಗಲಿದೆ.
ಹೌದು.. ಈಗಾಗಲೇ ಸದ್ದಿಲ್ಲದೇ ಸರ್ಕಾರ ನಂದಿಗಿರಿಧಾಮದ ಪ್ರವೇಶ ಶುಲ್ಕ ಏರಿಕೆಗೆ ಮುಂದಾಗಿದ್ದು, ಇನ್ನೂ ಕೆಲವೇ ತಿಂಗಳಲ್ಲಿ ಪ್ರವಾಸಿಗರಿಗೆ ಬರೆ ಬೀಳಲಿದೆ. ತೋಟಗಾರಿಕಾ ಇಲಾಖಾ ಅಧೀನದ ನಂದಿಗಿರಿಧಾಮದಲ್ಲಿ ಇರುವ ಪ್ರವೇಶ ದರ ದುಬಾರಿ ಅಂತ ಪ್ರವಾಸಿಗರು ಹೇಳುತ್ತಿದ್ದರು. ಈಗ ಜಿಎಸ್‍ಟಿ ನೆಪವೊಡ್ಡಿರುವ ತೋಟಗಾರಿಕಾ ಇಲಾಖೆ ಪ್ರವೇಶ ದರ ಹೆಚ್ಚಳ ಮಾಡಲು ಮುಂದಾಗಿದೆ.
Advertisement
Advertisement
ಹಿಂದಿನ ಹಾಗೂ ಮುಂದಿನ ಪ್ರವೇಶ ದರ:
ಸದ್ಯಕ್ಕೆ ನಂದಿಗಿರಿಧಾಮಕ್ಕೆ ತಲಾ ಒಬ್ಬರ ಪ್ರವೇಶಕ್ಕೆ 10 ರೂ. ಶುಲ್ಕವಿದೆ. ಆದರೆ ಈ ಶುಲ್ಕ 10 ರಿಂದ 20 ರೂ. ಗೆ ಏರಿಕೆಯಾಗಲಿದೆ. ಒಂದು ದ್ವಿಚಕ್ರವಾಹನಕ್ಕೆ 20 ರೂ. ಇದ್ದು, ಈಗ 30 ರೂ. ಆಗಲಿದೆ. ಹೀಗಾಗಿ ಒಂದು ಬೈಕ್ ಹಾಗೂ ಓರ್ವ ವ್ಯಕ್ತಿಗೆ ನೂತನ ದರ 50 ರೂಪಾಯಿಯಾಗಿದೆ. ಒಂದು ಬೈಕ್ ಹಾಗೂ ಇಬ್ಬರಿಗೆ 70 ರೂಪಾಯಿ ಆಗಲಿದೆ. ಇನ್ನೂ ದ್ವಿಚಕ್ರ ವಾಹನದ ದರ ಪಟ್ಟಿ ಇದಾದರೇ ಕಾರುಗಳ ದರಪಟ್ಟಿಯೂ ಸಖತ್ ಏರಿಕೆ ಆಗಿದೆ.
Advertisement
ಅಂದಹಾಗೆ 4 ಪ್ಲಸ್ 1 ಸೀಟ್ ಕೆಪಾಸಿಟಿ ನಾಲ್ಕು ಚಕ್ರ ವಾಹನಗಳಿಗೆ ಈ ಮೊದಲು 100 ರೂ. ಶುಲ್ಕವಿತ್ತು. ಈಗ ನೂತನ ದರ ಬಸ್ ನಿಲ್ದಾಣದ ಪಾರ್ಕಿಂಗ್ ಬಳಿಗೆ 125 ರೂ. ನಿಗದಿಯಾದ್ರೇ ಗಿರಿಧಾಮದ ಒಳಭಾಗದ ಮೇಲ್ಭಾಗಕ್ಕೆ 175 ರೂ. ನಿಗದಿಪಡಿಸಲಾಗಿದೆ. ಇನ್ನೂ 4 ಪ್ಲಸ್ 1 ಸೀಟ್ ಗಿಂತ ಹೆಚ್ಚು ಕೆಪಾಸಿಟಿಯ ವಾಹನಗಳಿಗೆ ಈ ಮೊದಲು 150 ರೂ. ಇದ್ದು, ಈಗಲೂ ಅದೇ ದರ ಮುಂದುವರೆಯಲಿದೆ. ಆದ್ರೆ ನಂದಿಗಿರಿಧಾಮದ ಒಳಭಾಗದ ಮೇಲ್ಬಾಗದ ಪ್ರವೇಶಕ್ಕೆ 175 ರೂ. ನಿಗದಿ ಮಾಡಲಾಗಿದೆ. ಇದಲ್ಲದೆ ತ್ರಿಚಕ್ರ ವಾಹನ ಆಟೋಗಳಿಗೆ ಈ ಮೊದಲು ಇದ್ದ 60 ರೂ. ಯಿಂದ 70 ರೂ.ಗೆ ಏರಿಕೆಯಾಗಿದ್ದು, ನಂದಿಗಿರಿಧಾಮದ ಮೇಲ್ಭಾಗಕ್ಕೆ 80 ರೂ. ನಿಗದಿ ಪಡಿಸಲಾಗಿದೆ.
Advertisement
ಯಾಕೆ ಪ್ರವೇಶ ದರ ಏರಿಕೆ?
ಜಿಎಸ್‍ಟಿ ಜಾರಿಯಾದ ನಂತರ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುತ್ತಿರುವ ಕಾರಣ ಸರ್ಕಾರ ಈ ನಿರ್ಧಾರಕ್ಕೆ ಬರಲಾಗಿದೆ ಅಂತ ಸ್ವತಃ ತೋಟಗಾರಿಕಾ ಸಚಿವ ಎಂ.ಸಿ ಮನಗೂಳಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ನಂದಿಗಿರಿಧಾಮಕ್ಕೆ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ಎಕೋ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ್ದ ಸಚಿವರು ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದರು.
ಎಂದಿನಿಂದ ನೂತನ ದರ ಜಾರಿ?
ನಂದಿಗಿರಿಧಾಮದ ಪ್ರವೇಶ ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ಟೆಂಡರ್ ಮೂಲಕ ಪ್ರಕ್ರಿಯೆಗಳನ್ನ ನಡೆಸಿ ಎರಡು ವರ್ಷಗಳಿಗೊಮ್ಮೆ ಟೆಂಡರ್ ಕೆರೆದು ಪ್ರವೇಶ ಶುಲ್ಕ ವಸೂಲಿ ಮಾಡಲಾಗುತ್ತದೆ. ಈ ಹಿಂದೆ ಎರಡು ವರ್ಷಗಳ ಅವಧಿಗೆ ಶ್ರೀ ವೈಷ್ಣವಿ ಎಂಟರ್ ಪ್ರೈಸಸ್ ರವರು 3.24 ಕೋಟಿಗೆ ಟೆಂಡರ್ ಪಡೆದುಕೊಂಡಿದ್ದರು. ಆದರೆ ಟೆಂಡರ್ ಪಡೆದವರು ಸರ್ಕಾರ ನಿಗದಿ ಮಾಡಿದ ದರದಂತೆಯೇ ಪ್ರವೇಶ ಶುಲ್ಕ ವಸೂಲಿ ಮಾಡಬೇಕು. 2 ತಿಂಗಳಲ್ಲಿ ಹಳೆಯ ಟೆಂಟರ್ ಅವಧಿ ಮುಗಿಯಲಿದ್ದು, ಈಗಾಗಲೇ ನೂತನ ಟೆಂಡರ್ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಹೀಗಾಗಿ ನೂತನವಾಗಿ ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಹೊಸ ದರ ಚಾಲ್ತಿಗೆ ಬರಲಿದೆ. ಅಂದಾಜು ಎರಡೂವರೆ ತಿಂಗಳ ನಂತರ ಈ ನೂತನ ದರ ಜಾರಿಗೆ ಬರಲಿದೆ ಅಂತ ನಂದಿಗಿರಿಧಾಮದ ವಿಶೇಷ ಅಧಿಕಾರಿ ರಮೇಶ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv