ಬೆಳಗಾವಿ: ಕ್ಷೇತ್ರದ ಲೋಕಸಭೆ ಚುನಾವಣೆ ವಿಚಾರವಾಗಿ ತಟಸ್ಥವಾಗಿ ಉಳಿಯಲು ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ನಿರ್ಧಾರ ಮಾಡುವ ಮೂಲಕ ಕಾಂಗ್ರೆಸ್‍ಗೆ ಶಾಕ್ ಕೊಟ್ಟಿದ್ದಾರೆ.
ಇಂದು ಗೋಕಾಕ್‍ನಲ್ಲಿ ನಗರ ಸಭೆಯಲ್ಲಿ ಕೆಲ ಸದಸ್ಯರು, ಕಾರ್ಯಕರ್ತರು, ಪಕ್ಷದ ಮುಖಂಡರ ಜೊತೆಗೆ ರಾಜಕೀಯ ಬೆಳವಣಿಗೆಯ ಬಗ್ಗೆ ರಮೇಶ್ ಜಾರಕಿಹೊಳಿ ಚರ್ಚೆ ಮಾಡಿದ್ದಾರೆ. ಸಭೆಯಲ್ಲಿ ರಮೇಶ್ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕಾರ್ಯಕರ್ತರಲ್ಲಿ ಗೊಂದಲ ಮೂಡಿತ್ತು. ಅಷ್ಟೇ ಅಲ್ಲದೇ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರುತ್ತಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದ್ದವು. ಆದರೆ ಸಭೆಯ ಬಳಿಕ ತಮ್ಮ ಪಕ್ಷದ ಅಭ್ಯರ್ಥಿಯ ಪರವೇ ಪ್ರಚಾರ ಮಾಡದಿರಲು ರಮೇಶ್ ಜಾರಕಿಹೊಳಿ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ರಮೇಶ್ ಜಾರಕಿಹೊಳಿ ಅವರು ಐದಾರು ತಿಂಗಳಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳಲು ವಿಫಲವಾಗುತ್ತಿದ್ದರು. ಆದರೆ ಈಗ ಲೋಕಸಭಾ ಚುನಾವಣೆಗಾಗಿ ಪ್ರಚಾರ ಮಾಡಬೇಕಾಗಿದೆ. ಹೀಗಾಗಿ ಕಾರ್ಯಕರ್ತರು ಯಾವ ರೀತಿ, ಎಲ್ಲೆಲ್ಲಿ ಹೇಗೆ ಪ್ರಚಾರ ಮಾಡಬೇಕು ಎಂದು ರಮೇಶ್ ಬಳಿ ಕೇಳುತ್ತಿದ್ದರು. ಈ ವಿಚಾರವಾಗಿ ಇಂದು ಎಲ್ಲ ನಗರಸಭೆ ಸದಸ್ಯರು ಮತ್ತು ಕಾರ್ಯಕರ್ತರನ್ನು ಕರೆಸಿ ತುರ್ತು ಸಭೆ ಮಾಡಿದ್ದಾರೆ. ಸಭೆಯಲ್ಲಿ ಯಾವುದೇ ಪಕ್ಷದ ಪರ ಪ್ರಚಾರ ಮಾಡದೇ ತಟಸ್ಥವಾಗಿ ಉಳಿಯುವಂತೆ ಸೂಚಿಸಿದ್ದಾರೆ.
Advertisement
ಬಜೆಟ್ ಅಧಿವೇಶನದ ಸಮಯದಲ್ಲೇ ರಮೇಶ್ ಜಾರಕಿಹೊಳಿ ವಿಪ್ ಉಲ್ಲಂಘಿಸಿದ್ದರು. ಬಿಜೆಪಿ ಸೇರಲೆಂದೇ ರಮೇಶ್ ಜಾರಕಿಹೊಳಿ ವಿಪ್ ಉಲ್ಲಂಘಿಸಿ ಮುಂಬೈನಲ್ಲಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಜಾರಕಿಹೊಳಿ ಕೈಗೊಂಡ ನಿರ್ಧಾರದಿಂದ ಮತ್ತಷ್ಟು ಅನುಮಾನ ಎದ್ದಿದೆ. ಜಾರಕಿಹೊಳಿ ಬಿಜೆಪಿ ಸೇರುತ್ತಾರಾ ಎನ್ನುವ ಪ್ರಶ್ನೆಗೆ ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಉತ್ತರ ಸಿಗುವ ಸಾಧ್ಯತೆಯಿದೆ.