ಸರ್ಕಾರ ಉಚಿತವಾಗಿ ಬೋರ್‌ವೆಲ್‌ ಕೊರೆಸುತ್ತೆ ಅಂದುಕೊಂಡವ್ರಿಗೆ ಶಾಕಿಂಗ್ ನ್ಯೂಸ್

Public TV
1 Min Read
GANGA KALYAN

ಬೆಂಗಳೂರು: ಎಸ್‍ಸಿ-ಎಸ್‍ಟಿಗಳಿಗಾಗಿಯೇ ಇರುವ ಸರ್ಕಾರದ ಗಂಗಾಕಲ್ಯಾಣ ಯೋಜನೆಯಲ್ಲಿ ಭಾರೀ ಗೋಲ್ಮಾಲ್ ನಡೆದಿದೆ.

ಎಸ್‍ಸಿ ಎಸ್‍ಟಿಗಳಿಗಾಗಿ, ಉಚಿತವಾಗಿ ಬೋರ್‌ವೆಲ್‌ ಕೊರೆದು ಕೇಸಿಂಗ್ ಪೈಪ್ ಹಾಕಿ, ಮೋಟಾರ್ ಹಾಗೂ ಕೇಬಲ್ ನೀಡುವ ಯೋಜನೆ ಇದಾಗಿದೆ. ಆದ್ರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಕಲ್ಯಾಣ ಆಗ್ತಿದೆಯೇ ಹೊರತು, ಬಡ ರೈತನದ್ದಲ್ಲ.

ಗುತ್ತಿಗೆದಾರರು ಫಲಾನುಭವಿಗಳ ಜಮೀನಿನಲ್ಲಿ ಉಚಿತವಾಗಿ ಬೋರ್‌ವೆಲ್‌ ಕೊರೆಯುವುದಾಗಿ ಹೇಳಿ ಹಣ ಪೀಕಿದ್ದಾರೆ. ಹಣ ನೀಡದಿದ್ದರೆ ಪೂರ್ತಿ ಕೊರೆಯದೇ ಹಾಗೆ ಹೋಗ್ತೀವಿ ಅಂತ ಬೆದರಿಸಿದ್ದಾರೆ. ಹೀಗಾಗಿ ಬೇರೆ ವಿಧಿ ಇಲ್ಲದೇ ಫಲಾನುಭವಿಗಳು ತಮ್ಮ ಕಿವಿ ಓಲೆ, ಕುರಿ ಮಾರಿ ಹಣ ಕೊಟ್ಟಿರುವುದಲ್ಲದೆ, ಸಾಲ ಮಾಡಿ ದುಡ್ಡು ಕೊಟ್ಟಿದ್ದಾರೆ.

GANGA KALYAN 3

ಮೊದಲು ಗುತ್ತಿಗೆದಾರರು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡದೇ ಭೂಗರ್ಭ ಶಾಸ್ತ್ರಜ್ಞರು ನೀಡುವ `ವಾಟರ್ ಸರ್ವೇ ರಿಪೋರ್ಟ್’ ಕುಂತಲ್ಲೇ ರೆಡಿ ಮಾಡಿದ್ದಾರೆ. ದಿನವೊಂದಕ್ಕೆ ಒಬ್ಬ ಜಿಯಾಲಜಿಸ್ಟ್ 3-4 ಸರ್ವೇ ಮಾಡಿ `ವಾಟರ್ ಸರ್ವೇ ರಿಪೋರ್ಟ್’ ರೆಡಿ ಮಾಡಬಹುದು. ಆದ್ರೆ ಇಲ್ಲಿ ಒಂದೇ ದಿನದಲ್ಲಿ 20-30 ರಿಪೋರ್ಟ್ ರೆಡಿ ಮಾಡಿರೋದು ಆರ್ ಟಿಐ ಅರ್ಜಿಯಿಂದ ಬಯಲಾಗಿದೆ.

GANGA KALYAN 1

ಒಂದು ಜಿಲ್ಲೆಯಲ್ಲಿ ಏನಿಲ್ಲವೆಂದ್ರೂ 2000 ಬೋರ್‌ವೆಲ್‌ ಕೊರೆಸಲಾಗಿದೆ. ಹಾಗಿದ್ರೆ ರಾಜ್ಯದ ಎಲ್ಲಾ ಜಿಲ್ಲೆಗಳ ಗಂಗಾ ಕಲ್ಯಾಣ ಯೋಜನೆಯಲ್ಲಿ ಆಗಿರುವ ಗೋಲ್ಮಾಲ್ ಎಷ್ಟು ಅಂತ ಊಹಿಸಿಕೊಳ್ಳಿ. ಅಕ್ರಮದ ದಾಖಲೆ ಸಂಗ್ರಹಿಸಿರುವ ಸಾಮಾಜಿಕ ಕಾರ್ಯಕರ್ತ ಅನಿಲ್ ಕೊರ್ಟ್ ಮೊರೆ ಹೋಗೋದಾಗಿ ಹೇಳಿದ್ದಾರೆ. ಸಮಾಜ ಕಲ್ಯಾಣ ಇಲಾಖೆಗೆ ನೂತನ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಬಂದಿದ್ದಾರೆ, ಎಸ್‍ಟಿ-ಎಸ್‍ಟಿಗಾಗಿ ಮೀಸಲಿದ್ದ ಯೋಜನೆಯಲ್ಲಿ ದುಡ್ಡು ತಿಂದಿರುವವರ ವಿರುದ್ಧ ಕ್ರಮಕೈಗೊಳ್ತಾರಾ ಎಂಬುದನ್ನು ಕಾದುನೋಡಬೇಕಾಗಿದೆ.

Share This Article