ಭುವನೇಶ್ವರ್: ಇಲ್ಲಿನ ನಯಾಗರ್ ಜಿಲ್ಲೆಯ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬನನ್ನು ಬೇರೆ ಗ್ರಾಮದ ಜನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಪ್ರಮೋದ್ ಪರಿದ್ ಎಂದು ಗುರುತಿಸಲಾಗಿದ್ದು, ಈತ ಬೊಡಪದ ಗ್ರಾಮದವನಾಗಿದ್ದಾನೆ. ಮಾತಿಗೆ ಮಾತು ಬೆಳೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ಏನಿದು ಘಟನೆ?
ಬಾಲುಗಾನ್ ಗ್ರಾಮದಲ್ಲಿ ಮೃತ ಪ್ರಮೋದ್, ಗುಂಪಿನ ಜೊತೆ ಮಾತನಾಡುತ್ತಾ ಮದ್ಯಪಾನ ಮಾಡಿದ್ದಾನೆ. ಹೀಗೆ ಮಾತನಾಡುತ್ತಿರುವಾಗ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಗುಂಪು ಹಾಗೂ ಪ್ರಮೋದ್ ಮಧ್ಯೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದ ಪರಿಣಾಮ ಗುಂಪು, ಪ್ರಮೋದ್ ಮೇಲೆ ಹಲ್ಲೆ ನಡೆಸಿದೆ. ಅಲ್ಲದೆ ಕಬ್ಬಿಣದ ರಾಡನ್ನು ಪ್ರಮೋದ್ ಮೂಗಿಗೆ ತೂರಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಕುಟುಂಬಸ್ಥರು ಪ್ರಮೋದ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಅದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯ ಪ್ರಮೋದ್ ಮೃತದೇಹವನ್ನು ಮರಣೊತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ನಯಾಗರ್ ಎಸ್‍ಡಿಪಿಒ ನಿಹಾರ್ ರಂಜನ್ ಪಧಿ ತಿಳಿಸಿದ್ದಾರೆ.