ಚೆನ್ನೈ: ಸುರಕ್ಷತಾ ನಿಯಮಗಳನ್ನು ಪಾಲಿಸುವ ಕುರಿತು ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣಾ ಜಾಗೃತಿಯಲ್ಲಿ ವಿದ್ಯಾರ್ಥಿನಿಯೊರ್ವಳು ಕಟ್ಟಡದಿಂದ ಜಿಗಿಯುವಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದ್ದು, ಕಟ್ಟಡದಿಂದ ವಿದ್ಯಾರ್ಥಿನಿ ಜಿಗಿಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಲೋಕೇಶ್ವರಿ (19) ಮೃತಪಟ್ಟ ವಿದ್ಯಾರ್ಥಿನಿ. ಈಕೆ ಕೊಯಮತ್ತೂರಿನ ಕೊಲೈ ಮಗಲ್ ಕಲಾ ಮತ್ತು ವಿಜ್ಞಾನ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸುರಕ್ಷತಾ ನಿಯಮಗಳನ್ನು ಪಾಲಿಸುವ ವಿಪತ್ತು ನಿರ್ವಹಣಾ ಜಾಗೃತಿಯಲ್ಲಿ ಕಾಲೇಜು ಕಟ್ಟಡದ ಎರಡನೇ ಮಹಡಿಯಿಂದ ಜಿಗಿಯುವಾಗ ಮೊದಲ ಮಹಡಿಯ ಸಜ್ಜಕ್ಕೆ ತಲೆ ಬಡಿದು ತೀವ್ರವಾಗಿ ಗಾಯಗೊಂಡಿದ್ದಳು. ಕಾಲೇಜು ಸಿಬ್ಬಂದಿ ಕೂಡಲೇ ವಿದ್ಯಾರ್ಥಿನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರೂ ಗಂಭೀರವಾಗಿ ತಲೆಗೆ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
Advertisement
ವಿದ್ಯಾರ್ಥಿನಿ ಎರಡನೇ ಮಹಡಿಯಿಂದ ಜಿಗಿಯುವುದಕ್ಕೆ ಹಿಂಜರಿಯುತ್ತಿದ್ದಾಗ ತರಬೇತುದಾರ ಆಕೆಯನ್ನು ತಳ್ಳಿದ್ದರಿಂದ ಈ ದುರಂತ ಸಂಭವಿಸಿದೆ. ತರಬೇತುದಾರ ತಳ್ಳಿದಾಗ ಆತಂಕಗೊಂಡ ವಿದ್ಯಾರ್ಥಿನಿ ಮುಂದಕ್ಕೆ ಜಿಗಿಯದ ಪರಿಣಾಮ ತಲೆ ಸಜ್ಜಕ್ಕೆ ಬಡಿದು ಸಾವನ್ನಪ್ಪಿದ್ದಾಳೆ. ಘಟನೆ ಸಂಬಂಧ ವಿಡಿಯೋದಲ್ಲಿ ವಿದ್ಯಾರ್ಥಿನಿಯನ್ನು ಬಲವಂತವಾಗಿ ತಳ್ಳಿದ್ದು ತಿಳಿದುಬಂದಿದ್ದು, ತರಬೇತು ನೀಡುತ್ತಿದ್ದ ಆರ್ಮುಗಂನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಏನಿದು ಘಟನೆ?
ಗುರುವಾರ ಕೊಲೈ ಮಗಲ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸುವ ವಿಪತ್ತು ನಿರ್ವಹಣಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆದಿರುವ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ತರಬೇತಿಯಲ್ಲಿ ಸುಮಾರು ಇಪ್ಪತ್ತು ವಿದ್ಯಾರ್ಥಿಗಳಿಗೆ ಎಮರ್ಜೆನ್ಸಿ ವಿಂಡೋ ಮೂಲಕ ಜಿಗಿಯುವ ಪ್ರಾತ್ಯಕ್ಷಿಕೆ ನಡೆದಿತ್ತು.
Advertisement
ಜಾಗೃತಿ ಪ್ರಾತ್ಯಕ್ಷಿಕೆಯಲ್ಲಿ ಕಟ್ಟಡದ ಕೆಳಗೆ ನೆಟ್ ಹಿಡಿದ ಹಲವು ವಿದ್ಯಾರ್ಥಿಗಳು ನಿಂತಿದ್ದರು. ಈ ವೇಳೆ ಭಾಗವಹಿಸಿದ್ದ ಲೋಕೇಶ್ವರಿ ಎರಡನೇ ಮಹಡಿಯಿಂದ ಜಿಗಿಯುವುದಕ್ಕೆ ಹಿಂಜರಿದಿದ್ದಾಳೆ. ಈ ವೇಳೆ ತರಬೇತುದಾರ ಬಲವಂತವಾಗಿ ಆಕೆಯನ್ನು ತಳ್ಳಿದ್ದರ ಪರಿಣಾಮ ಸರಿಯಾದ ರೀತಿಯಲ್ಲಿ ಜಿಗಿಯದ ಕಾರಣ ಆಕೆಯ ತಲೆ ಮೊದಲ ಮಹಡಿಯ ಸಜ್ಜಕ್ಕೆ ಬಡಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ದೃಶ್ಯವನ್ನು ಸ್ಥಳದಲ್ಲೇ ಇದ್ದ ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾನೆ. ವಿದ್ಯಾರ್ಥಿ ಕಟ್ಟಡದಿಂದ ಜಿಗಿಯುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.