ಹೈದರಾಬಾದ್: ನಗರದ ಪತನಚೇರು ಬಳಿಯ ಕೊಲ್ಲರು ಔಟರ್ ರಿಂಗ್ ರೋಡ್ (ಓಆರ್‍ಆರ್) ಬಳಿ ಒಂದೇ ಕುಟುಂಬದ ಐವರ ಶವಗಳು ಅನುಮಾನಾಸ್ಪದವಾಗಿ ಪತ್ತೆಯಾಗಿವೆ.
ಮೂವರು ಮಹಿಳೆಯರ ಶವಗಳು ಪೊದೆಯಲ್ಲಿ ಪತ್ತೆಯಾಗಿದ್ದು, ಈ ಸ್ಥಳದಿಂದ 2 ಕಿ.ಮೀ. ದೂರದಲ್ಲಿರುವ ಓಆರ್‍ಆರ್ ಬಳಿಯ ಅಂಡರ್ ಪಾಸ್ ಕಾರಿನಲ್ಲಿ ಒಬ್ಬ ವ್ಯಕ್ತಿ ಮತ್ತು ಗಂಡು ಮಗುವಿನ ಮೃತ ದೇಹ ಪತ್ತೆಯಾಗಿವೆ. ಮೃತರು ಪತನಚೇರು ಬಳಿಯ ಅಮೀನ್‍ಪುರ ನಿವಾಸಿ ಪ್ರಭಾಕರ್ ರೆಡ್ಡಿ ಮತ್ತು ಕುಟಂಬಸ್ಥರು ಎಂದು ತಿಳಿದು ಬಂದಿದೆ. ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಇವರೆಲ್ಲರು ಇಂದು ಶವವಾಗಿ ಪತ್ತೆಯಾಗಿದ್ದಾರೆ.
Advertisement
Advertisement
ಮೃತರನ್ನು ಪ್ರಭಾಕರ್ ರೆಡ್ಡಿ, ಲಕ್ಷ್ಮೀ, ಸಿಂಧುಜಾ, ವಂಶಿ ಮತ್ತು ಮಾಧವಿ ಎಂದು ಗುರುತಿಸಲಾಗಿದೆ. ಮೃತರಲ್ಲಿ ಒಬ್ಬರು ಮಧ್ಯವಯಸ್ಕ ಮಹಿಳೆಯಾಗಿದ್ದು, ಇನ್ನಿಬ್ಬರು ಯುವತಿಯರಾಗಿದ್ದಾರೆ. ಇನ್ನು ಕಾರಿನಲ್ಲಿ ಪ್ರಭಾಕರ್ ಮತ್ತು ಒಂದು ಗಂಡು ಮಗು ವಂಶಿ ಎಂಬವರ ಶವಗಳು ಪತ್ತೆಯಾಗಿವೆ.
Advertisement
ಕೇಕ್ ತಿಂದು ವಿಷ ಕುಡಿದ್ರಾ?: ಕಾರು ಪತ್ತೆಯಾದ 10 ಮೀಟರ್ ದೂರದಲ್ಲಿ ಅರ್ಧ ತಿಂದಿರುವ ಕೇಕ್ ಪತ್ತೆಯಾಗಿದೆ. ಇತ್ತ ಕಾರಿನಲ್ಲಿ ಕ್ರಿಮಿನಾಶಕ ಬಾಟಲ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿ ಇಬ್ಬರ ಶವಗಳು ಪತ್ತೆಯಾಗಿದ್ದು ಆದರೆ ಹೊರಗಡೆಯಿಂದ ಕಾರನ್ನು ಲಾಕ್ ಮಾಡಲಾಗಿದೆ.
Advertisement
ಮೃತರು ಎರಡು ದಿನಗಳ ಹಿಂದೆ ವಾಟರ್ ಫಾಲ್ಸ್ ನೋಡಲು ತೆರಳುವುದಾಗಿ ಸಂಬಂಧಿ ಬಳಿ ಹೇಳಿಕೊಂಡಿದ್ದರು. ಸಂಜೆ ವೇಳೆಗೆ ವಾಟರ್ ಫಾಲ್ಸ್ ನೋಡಲು ತೆರಳಿದವರ ಮೊಬೈಲ್ ಗಳು ಸ್ವಿಚ್ ಆಫ್ ಆಗಿತ್ತು. ಇದರಿಂದ ಭಯಗೊಂಡ ಸಂಬಂಧಿ ರವೀಂದ್ರ ರೆಡ್ಡಿ ಎಂಬವರು ನರ್‍ಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂದು ಸ್ವತಃ ರವೀಂದ್ರ ಅವರೇ ಬಂದು ಶವಗಳನ್ನು ಗುರುತಿಸಿದ್ದಾರೆ.
ಹಲವು ಅನುಮಾನ: ಕಾರಿನಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದು, ಆದರೆ ಕಾರ್ ಮಾತ್ರ ಹೊರಗಿನಿಂದ ಲಾಕ್ ಆಗಿದೆ. ಮಹಿಳೆಯರ ಶವಗಳು ಮಾತ್ರ ಕಾರಿನಿಂದ ಎರಡು ಕಿ.ಮೀ. ದೂರದಲ್ಲಿ ಪತ್ತೆಯಾಗಿದೆ. ಇನ್ನೂ ಮಹಿಳೆಯರ ಶವದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಆದರೆ ಒಬ್ಬ ಯುವತಿಯ ಶವ ಚಿಕ್ಕ ಮರವೊಂದಕ್ಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವತಿ ಕೈ ಯಲ್ಲಿ ಮೊಬೈಲ್ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿರಬಹುದಾ ಎನ್ನುವ ಶಂಕೆ ವ್ಯಕ್ತವಾಗಿದೆ.
ಕೊಲೆಯೋ, ಆತ್ಮಹತ್ಯೆಯೋ: ಮೃತರು ಶವ ನೋಡಿದ ಪೊಲೀಸ್ ಅಧಿಕಾರಿಗಳು ಇದೂವರೆಗೂ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ಖಚಿತಪಡಿಸಿಲ್ಲ. ಬೇರೆ ಸ್ಥಳದಲ್ಲಿ ಐವರನ್ನು ಕೊಲೆ ಮಾಡಿ ಈ ರೀತಿಯಾಗಿ ಬೇರೆ ಬೇರೆ ಕಡೆ ಎಸೆಯಲಾಗಿದೆಯೇ ಎಂಬ ಅನುಮಾನಗಳು ಸಹ ಹುಟ್ಟಿಕೊಂಡಿವೆ.
ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಸಂದೀಪ್ ಶಾಂದಿಲ್ಯ, ಹೆಚ್ಚುವರಿ ಎಸ್‍ಪಿ ಜಾನಕಿ ಶೈಲಜಾ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮೃತರ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದು, ಕಾಲ್ ಡಿಟೇಲ್ಸ್ ಪರಿಶೀಲಿಸುತ್ತಿದ್ದಾರೆ. ಐವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.