ತೆಲುಗಿನ ನಟ ನರೇಶ್ (Naresh) ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ಒಟ್ಟಾಗಿ ನಟಿಸಿದ್ದ ಮತ್ತೆ ಮದುವೆಗೆ ಬ್ರೇಕ್ ಬಿದ್ದಿದೆ. ಮೊನ್ನೆಯಷ್ಟೇ ಈ ಸಿನಿಮಾ ಪ್ರೈಮ್ ನಲ್ಲಿ ರಿಲೀಸ್ ಆಗಿತ್ತು. ಇದೀಗ ದಿಢೀರ್ ಅಂತ ನಾಪತ್ತೆಯಾಗಿದೆ. ಈ ನಡುವೆಯೇ ನರೇಶ್ ತಮ್ಮ ಆತ್ಮ ರಕ್ಷಣೆಗಾಗಿ ಗನ್ (Gun) ಲೈಸೆನ್ಸ್ ನೀಡುವಂತೆ ಅರ್ಜಿ ಹಾಕಿಕೊಂಡಿದ್ದಾರೆ.
ತನ್ನನ್ನೇ ಗುರಿಯಾಗಿರಿಸಿಕೊಂಡು ಮತ್ತೆ ಮದುವೆ ಸಿನಿಮಾ ಮಾಡಿದ್ದಾರೆ ಎಂದು ನರೇಶ್ ಪತ್ನಿ ರಮ್ಯಾ ರಘುಪತಿ (Ramya Raghupathi) ಕೋರ್ಟ್ ಮೆಟ್ಟಿಲು ಏರಿದ್ದರು. ತನ್ನ ಸಂಸಾರದ ಬಗ್ಗೆ ಅವಹೇಳನ ಮಾಡುವಂತಹ ದೃಶ್ಯಗಳನ್ನು ಅದರಲ್ಲಿ ಹಾಕಿದ್ದಾರೆ ಎಂದು ರಮ್ಯಾ ಮಾತನಾಡಿದ್ದರು. ಈ ಸಿನಿಮಾ ಬಿಡುಗಡೆ ಆಗದಂತೆ ತಡೆಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ಮಾನ್ಯವಾಗಿರಲಿಲ್ಲ.
ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದ್ದಂತೆಯೇ ಮತ್ತೆ ಕೋರ್ಟ್ ಮೆಟ್ಟಿಲು ಏರಿದ್ದ ರಮ್ಯಾ, ಓಟಿಟಿಯಿಂದ ಆ ಸಿನಿಮಾವನ್ನು ತೆಗೆದುಹಾಕುವಂತೆ ಮನವಿ ಮಾಡಿಕೊಂಡಿದ್ದರು. ಇದೀಗ ಓಟಿಟಿಯಲ್ಲಿ ಮತ್ತೆ ಮದುವೆ ಸಿನಿಮಾವನ್ನು ತೆಗೆದುಹಾಕಲಾಗಿದೆ. ಈ ಮೂಲಕ ನರೇಶ್ ಅವರಿಗೆ ಹಿನ್ನೆಡೆಯಾಗಿದೆ. ಇದನ್ನೂ ಓದಿ:ಪ್ಯಾರಿಸ್‌ನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಅದಿತಿ ಪ್ರಭುದೇವ
ಇತ್ತ ಥಿಯೇಟರ್ ನಲ್ಲೂ ಸಿನಿಮಾ ಓಡಲಿಲ್ಲ. ಅಂದುಕೊಂಡಷ್ಟು ಕಾಸೂ ಮಾಡಲಿಲ್ಲ. ಹಲವಾರು ಕೋಟಿ ಖರ್ಚು ಮಾಡಿ ತಯಾರಿಸಿದ್ದ ಸಿನಿಮಾವನ್ನು ಪ್ರೇಕ್ಷಕರು ಒಪ್ಪಿಕೊಳ್ಳಲಿಲ್ಲ. ತೆಲುಗು ಮತ್ತು ಕನ್ನಡದಲ್ಲಿ ಪ್ರತ್ಯೇಕವಾಗಿ ರಿಲೀಸ್ ಮಾಡಿದ್ದರೂ, ಎರಡೂ ಭಾಷೆಗಳ ಪ್ರೇಕ್ಷಕರು ಸಿನಿಮಾ ನೋಡಲಿಲ್ಲ. ಹಾಗಾಗಿ ನರೇಶ್ ಅವರಿಗೆ ಭಾರೀ ಪೆಟ್ಟು ಬಿದ್ದಿತ್ತು.
ಸಿನಿಮಾ ಸೋತ ನೋವು ಒಂದು ಕಡೆಯಾದರೆ, ರಮ್ಯಾ ಅವರು ನಿರಂತರ ಬೆನ್ನುಬಿದ್ದಿದ್ದಾರೆ. ಹಾಗಾಗಿ ತಮಗೆ ಭಯದ ವಾತಾವರಣ ಕಾಡುತ್ತಿದೆ ಎನ್ನುವುದು ನರೇಶ್ ವಾದ. ಹೀಗಾಗಿಯೇ ತಮಗೆ ಜೀವ ಬೆದರಿಕೆಯಿದೆ ಎಂದೂ, ಆತ್ಮರಕ್ಷಣೆಗಾಗಿ ಗನ್ ಪರವಾನಿಗೆ ನೀಡುವಂತೆ ಶ್ರೀಸತ್ಯಸಾಯಿ ಜಿಲ್ಲಾ ಎಸ್ಪಿ ಮಾಧವರೆಡ್ಡಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ತಾವು ನಕ್ಸಲ್ಸ್ ಹಿಟ್ ಲಿಸ್ಟ್ ನಲ್ಲಿ ಇದ್ದೆ ಎನ್ನುವುದನ್ನು ನೆನಪಿಸಿದ್ದಾರೆ.
Web Stories