LatestNational

ಶೋಭಾ ಡೇ ವ್ಯಂಗ್ಯ ಟ್ವೀಟ್ ನಂತರ ಮಧ್ಯಪ್ರದೇಶದ ಈ ಪೊಲೀಸ್ ಲೈಫೇ ಬದಲಾಯ್ತು

ನವದೆಹಲಿ: ಮಧ್ಯಪ್ರದೇಶದ ಪೊಲೀಸ್ ಇನ್ಸ್ ಪೆಕ್ಟರೊಬ್ಬರ ಫೋಟೋ ಹಾಕಿ ಅಂಕಣಗಾರ್ತಿ ಶೋಭಾ ಡೇ ಮಾಡಿದ್ದ ಟ್ವೀಟ್‍ನಿಂದ ಪರೋಕ್ಷವಾಗಿ ಇದೀಗ ಆ ಅಧಿಕಾರಿಯ ಲೈಫೇ ಬದಲಾಗಿದೆ.

180 ಕೆಜಿ ತೂಕವಿದ್ದ ಮಧ್ಯಪ್ರದೇಶದ ಇನ್ಸ್ ಪೆಕ್ಟರ್ ದೌಲತ್‍ರಾಮ್ ಅವರ ಫೋಟೋ ಹಾಕಿ ಶೋಭಾ ಡೇ, ಮುಂಬೈನ ಮುನ್ಸಿಪಲ್ ಚುನಾವಣೆ ದಿನದಂದು “ಇಂದು ಮುಂಬೈನಲ್ಲಿ ಭಾರೀ ಬಂದೋಬಸ್ತ್” ಎಂಬ ವ್ಯಂಗ್ಯಾತ್ಮಕ ಟ್ವೀಟ್ ಮಾಡಿದ್ದರು. ಇದಕ್ಕೆ ಮುಂಬೈ ಪೊಲೀಸರು ಪ್ರತಿಕ್ರಿಯಿಸಿ, ಇವರು ಮುಂಬೈ ಪೊಲೀಸ್ ಸಿಬ್ಬಂದಿಯಲ್ಲ ಎಂದು ಶೋಭಾಗೆ ಉತ್ತರ ನೀಡಿದ್ದರು. ಅಲ್ಲದೆ ಇದು ಹಳೆಯ ಫೋಟೋ ಎಂದು ಹೇಳಿ ಇತರೆ ಟ್ವಿಟ್ಟರ್ ಬಳಕೆದಾರರು ಕೂಡ ಶೋಭಾಗೆ ಬೆವರಿಳಿಸಿದ್ದರು. ಶೋಭಾರ ಈ ಟ್ವೀಟ್‍ನಿಂದ ದೌಲತ್‍ರಾಮ್ ಅವರೂ ನೊಂದುಕೊಂಡಿದ್ದರು. 1993ರಲ್ಲಿ ಪಿತ್ತಕೋಶದ ಸರ್ಜರಿ ಮಾಡಿಸಿಕೊಂಡ ನಂತರ ತೂಕ ಹೆಚ್ಚಾಯ್ತು ಎಂದು ಅವರು ಹೇಳಿದ್ದರು. ಆದ್ರೆ ಈ ಎಲ್ಲಾ ವಿವಾದದ ಮಧ್ಯೆ ಡಾ ಮುಫಾಝಲ್ ಲಕ್ಡಾವಾಲಾ ಎಂಬವರು ದೌಲತ್‍ರಾಮ್ ಅವರನ್ನು ಟ್ವಿಟ್ಟರ್ ಮೂಲಕ ಸಂಪರ್ಕಿಸಿ ಸಹಾಯ ಹಸ್ತ ಚಾಚಿದ್ದಾರೆ.

ಪ್ರೀತಿಯ ಗೆಳೆಯ, ನಿಮಗೆ ವೈದ್ಯಕೀಯ ಚಿಕಿತ್ಸೆ ಬೇಕಿದ್ದರೆ ನಾನಿದ್ದೇನೆ. ಬಾರಿಯಾಟ್ರಿಕ್ ಸರ್ಜರಿಯಿಂದ ನಿಮಗೆ ಸಹಾಯವಾಗಬಹುದು. ದಯವಿಟ್ಟು ನನ್ನ ಮೇಲೆ ಭರವಸೆ ಇಡಿ. ಎಂದು ಲಕ್ಡಾವಾಲಾ ಟ್ವೀಟ್ ಮಾಡಿದ್ದರು.

ದೌಲತ್‍ರಾಮ್ ಅವರ ಬಗ್ಗೆ ಕೇಳಿದಾಗ, ಟ್ವೀಟ್‍ವೊಂದರಿಂದ ಅವರ ಬಗ್ಗೆ ಸುದ್ದಿಯಾಗುತ್ತಿರುವುದು ಗೊತ್ತಾಯಿತು. ಒಬ್ಬರ ಆರೋಗ್ಯ ವೃದ್ಧಿಸುತ್ತದೆ, ಅವರ ಜೀವ ಉಳಿಯುತ್ತದೆ ಎಂದಾಗ ಅಂತಹವರಿಗೆ ಸಹಾಯ ಮಾಡುವುದು ವೈದ್ಯನಾದ ನನ್ನ ಕರ್ತವ್ಯ. ದೌಲತ್‍ರಾಮ್ ಅವರ ಬಗ್ಗೆ ಕೇಳಿದಾಗ ನಾನು ಅವರಿಗೆ ಸಹಾಯ ಮಾಡಬಹುದು ಎನ್ನಿಸಿತು. ಆದ್ದರಿಂದ ಅವರನ್ನು ಸಂಪರ್ಕಿಸಿದೆ ಎಂದು ಡಾ ಲಕ್ಡಾವಾಲಾ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ವೈದ್ಯರು ಸಹಾಯ ಹಸ್ತ ಚಾಚಿದ ನಂತರ ದೌಲತ್ ರಾಮ್ ಅವರು ತಮ್ಮ ಕೆಲವು ಸ್ನೇಹಿತರ ಸಲಹೆ ಪಡೆದು ಚಿಕಿತ್ಸೆ ಪಡೆಯಲು ನಿರ್ಧರಿಸಿದ್ರು. ದೌಲತ್‍ರಾಮ್ ಸರ್ಜರಿಗೆ ಒಪ್ಪಿದ ನಂತರ ಡಾ ಲಕ್ಡಾವಾಲಾ ಹಿರಿಯ ಪೊಲೀಸ್ ಅಧಿಕಾರಿಗಳಾದ ಎಸ್‍ಪಿ ಮನೋಜ್ ಸಿಂಗ್ ಹಾಗೂ ಎಸಿಪಿ ರಾಜೇಶ್ ಸಾಗರ್ ಅವರೊಂದಿಗೆ ಮಾತನಾಡಿ ದೌಲತ್‍ರಾಮ್ ಅವರನ್ನು ಮುಂಬೈನ ಸೈಫೀ ಆಸ್ಪತ್ರೆಗೆ ಕರೆತಂದರು.

ಸದ್ಯಕ್ಕೆ ದೌಲತ್‍ರಾಮ್ ಅವರನ್ನು ಹಲವು ರೀತಿಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆಗಳ ಮೂಲಕ ದೌಲತ್‍ರಾಮ್ ಅವರು ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಿ, ಬಾರಿಯಾಟಿಕ್ ಸರ್ಜರಿ ಅವರಿಗೆ ಸಹಾಯವಾಗಬಲ್ಲುದೇ ಇಲ್ಲವೇ ಎಂಬ ಬಗ್ಗೆ ವೈದ್ಯರು ನಿರ್ಧರಿಸಲಿದ್ದಾರೆ. ದೌಲತ್‍ರಾಮ್ ಅವರ ವರದಿಯನ್ನು ವೈದ್ಯರ ತಂಡ ಪರಿಶೀಲಿಸಿದ ನಂತರ ಸರ್ಜರಿಯ ಬಗ್ಗೆ ನಿರ್ಧರಿಸಲಿದ್ದಾರೆ.

ಶೋಭಾ ಡೇ ವ್ಯಂಗ್ಯ ಟ್ವೀಟ್ ನಂತರ ಮಧ್ಯಪ್ರದೇಶದ ಈ ಪೊಲೀಸ್ ಲೈಫೇ ಬದಲಾಯ್ತು

ನಾನು ಮತ್ತು ನನ್ನ ತಂಡ ದೌಲತ್‍ರಾಮ್ ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವ ಭರವಸೆ ನೀಡುತ್ತೇವೆ. ಅವರು ಶೀಘ್ರವೇ ಗುಣಮುಖರಾಗಲಿ ಎಂದು ಆಶಿಸುತ್ತೇವೆ ಎಂದು ಡಾ ಲಕ್ಡಾವಾಲಾ ಹೇಳಿದ್ದಾರೆ.

ಅಂದಹಾಗೆ ಲಕ್ಡಾವಾಲಾ ಅವರು ಈಜಿಪ್ಟ್‍ನಿಂದ ಮುಂಬೈಗೆ ಚಿಕಿತ್ಸೆಗೆಂದು ಬಂದಿರುವ 500 ಕೆಜಿ ತೂಕವಿರುವ ವಿಶ್ವದ ದಢೂತಿ ಮಹಿಳೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾಗಿದ್ದಾರೆ.

ಇದನ್ನೂ ಓದಿ: ತಮಾಷೆ ಮಾಡಲು ಹೋಗಿ ಮುಂಬೈ ಪೊಲೀಸರಿಂದಲೇ ಶೋಭಾ ಡೇ ಟ್ರಾಲ್!

Related Articles

Leave a Reply

Your email address will not be published. Required fields are marked *