ಯಾವ ಕಾನೂನಿನಡಿಯಲ್ಲಿ ಅನರ್ಹ ಮಾಡಿದ್ರಿ: ಶೋಭಾ ಕರಂದ್ಲಾಜೆ ಪ್ರಶ್ನೆ

Public TV
2 Min Read
Shobha Speaker

-ಸ್ಪೀಕರ್ ಅವರದ್ದು ಭಂಡ ನಿರ್ಧಾರ

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್‍ನ 14 ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿ ಆದೇಶಿಸಿದ್ದಾರೆ. ಸ್ಪೀಕರ್ ನಿರ್ಣಯದ ಕುರಿತು ಅಸಮಾಧಾನ ಹೊರ ಹಾಕಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಯಾವ ಕಾನೂನಿನಡಿಯಲ್ಲಿ ಸ್ಪೀಕರ್ ಆದೇಶ ನೀಡಿದ್ದಾರೆ ಎಂಬುದನ್ನು ನಾಡಿನ ಜನತೆಗೆ ತಿಳಿಸಬೇಕೆಂದು ಆಗ್ರಹಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಕರ್ನಾಟಕದಲ್ಲಿ ಇಂದು ಪ್ರಜಾತಂತ್ರ ಮತ್ತು ಸಂವಿಧಾನದ ಕಗ್ಗೊಲೆಯಾಗಿದೆ. ಕರ್ನಾಟಕ ಸ್ಪೀಕರ್ ತುಂಬಾ ಬುದ್ಧಿವಂತರು ಮತ್ತು ಅನುಭವಿಗಳು ಎನ್ನುವ ಗೌರವ ನಮಗೆಲ್ಲರಿಗಿತ್ತು. ಇಂದು ಸ್ಪೀಕರ್ ರಮೇಶ್ ಸಂವಿಧಾನದ ವಿರೋಧಿ ನಿರ್ಣಯವನ್ನು ಪ್ರಕಟಿಸುವ ಮೂಲಕ ಕರ್ನಾಟಕ ವಿಧಾನಸಭೆಯ ಗೌರವವನ್ನು ಮಣ್ಣು ಪಾಲು ಮಾಡಿದ್ದಾರೆ ಎಂದು ಕಿಡಿಕಾರಿದರು.

Shobha

ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋದಾಗ ಕೆಲವರು ರಾಜೀನಾಮೆಯನ್ನು ಕ್ರಮಬದ್ಧವಾಗಿ ಸಲ್ಲಿಸಿಲ್ಲ ಎಂದು ಹೇಳಿದ್ದರು. ತದನಂತರ ಸುಪ್ರೀಂಕೋರ್ಟ್ ಅದೇಶದನ್ವಯ ಎಲ್ಲ ಶಾಸಕರು ಕ್ರಮಬದ್ಧವಾಗಿ ರಾಜೀನಾಮೆಯನ್ನು ಸಲ್ಲಿಸಿದ್ದರೂ ಅಂಗೀಕಾರ ಮಾಡಿಲ್ಲ ಯಾಕೆ ಎಂದು ಗುಡುಗಿದರು.

ಶಾಸಕರ ಅನರ್ಹತೆಯ ವಿಚಾರವಾಗಿ ಸ್ಪೀಕರ್ ಅವರಿಗೆ ಶೋಭಾ ಕರಂದ್ಲಾಜೆ ಕೆಲವು ಪ್ರಶ್ನೆಗಳಿಗೆ ಉತ್ತರ ಕೇಳಿದ್ದಾರೆ.
1. ಅಂದು ಶಾಸಕರು ರಾಜೀನಾಮೆ ಕಾನೂನಬದ್ಧವಾಗಿದ್ದರೆ, ಇವತ್ತು ಅನರ್ಹ ಮಾಡಿದ್ಯಾಕೆ?
2. ಯಾವ ಕಾನೂನಿನ ಅಡಿಯಲ್ಲಿ ಶಾಸಕರನ್ನು ಅನರ್ಹಗೊಳಿಸಲಾಗಿದೆ?
3. ಯಾವ ಮತ್ತು ಯಾರ ಆದೇಶದಡಿಯಲ್ಲಿ ಅನರ್ಹ ಮಾಡಲಾಗಿದೆ?
4. ಯಾರ ಒತ್ತಡದಲ್ಲಿ ಶಾಸಕರನ್ನು ಅನರ್ಹಗೊಳಿಸಿದ್ದೀರಿ ಎಂಬುದರ ಬಗ್ಗೆ ವಿವರಣೆಯನ್ನು ನೀಡಬೇಕು?

ಸ್ಪೀಕರ್ ರಮೇಶ್ ಕುಮಾರ್ ಎಲ್ಲರ ರಾಜೀನಾಮೆಯನ್ನು ಅಂಗೀಕರಿಸುತ್ತಾರೆ ಎಂಬ ನಂಬಿಕೆ ಇತ್ತು. ದೇಶದ ಇತಿಹಾಸದಲ್ಲಿ ಯಾವ ಸ್ಪೀಕರ್ ಈ ರೀತಿಯ ಭಂಡ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ. ಕರ್ನಾಟಕದಲ್ಲಿ ಸ್ಪೀಕರ್ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಏಜೆಂಟ್ ರೀತಿಯಲ್ಲಿ ವರ್ತನೆ ಮಾಡಿದ್ದಾರೆ. ಸ್ಪೀಕರ್ ಆದೇಶ ಪ್ರಜಾತಂತ್ರ ಮತ್ತು ಸಂವಿಧಾನ ವಿರೋಧಿಯಾಗಿದ್ದು, ಅನರ್ಹಗೊಂಡಿರುವ ಎಲ್ಲ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ನಮಗೆಲ್ಲರಿಗೂ ನ್ಯಾಯ ಸಿಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.

Speaker Ramesh Kumar 1

ಅನರ್ಹಗೊಂಡಿರುವ ಶಾಸಕರ ಪಟ್ಟಿ:
ಕಾಂಗ್ರೆಸ್ಸಿನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ರಾಣೆಬೆನ್ನೂರು ಶಾಸಕ ಆರ್ ಶಂಕರ್ ಅವರನ್ನು ರಮೇಶ್ ಕುಮಾರ್ ಜುಲೈ 25 ರಂದು ಸುದ್ದಿಗೋಷ್ಠಿ ಕರೆದು ಅನರ್ಹಗೊಳಿಸಿದ್ದರು. ಇಂದು ಕಾಂಗ್ರೆಸ್ಸಿನ ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಕಾಗವಾಡದ ಶ್ರೀಮಂತ್ ಪಾಟೀಲ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್. ಜೆಡಿಎಸ್ ಶಾಸಕರಾದ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡರನ್ನು ಅನರ್ಹಗೊಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *