ಉಡುಪಿ: ಮುಸಲ್ಮಾನರು ಹಲಾಲ್ ಮಾಂಸ ತಿನ್ನುವುದಕ್ಕೆ ನಮ್ಮದೇನು ವಿರೋಧ ಇಲ್ಲ. ಆದರೆ ಎಲ್ಲರಿಗೂ ಹಲಾಲ್ ತಿನ್ನಿಸಬೇಕು ಎಂಬ ಭಾವನೆ ಸರಿಯಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲಾಲ್ ಒಂದು ಧರ್ಮದ ವಿಚಾರ. ನಾವು ಹಲಾಲ್ ಇಲ್ಲದೇ ತಿನ್ನುತ್ತಾ ಬೆಳೆದವರು ಎಂದ ಅವರು, ಹಿಂದೂಗಳು ಹಲಾಲ್ ತಿನ್ನಬೇಕು ಎಂಬುದು ಸರಿಯಲ್ಲ. ಜೊತೆಗೆ ಎಲ್ಲರೂ ಹಲಾಲ್ ಸರ್ಟಿಫಿಕೇಟ್ ಪಡೆಯಬೇಕೆಂಬ ನಿರ್ದೇಶನ ಜಾಸ್ತಿಯಾಗುತ್ತಿದೆ. ಇದು ಸರಿಯಲ್ಲ. ಈ ಬಗ್ಗೆ ಕೋರ್ಟ್‍ನಲ್ಲಿ ಕೇಸುಗಳು ಇವೆ. ಸರ್ಕಾರ ಎಲ್ಲರ ಭಾವನೆಯ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಹಿಂದುತ್ವದ ಅಸ್ತ್ರ ಬಳಸಿ ಬಿಜೆಪಿ 150 ಸೀಟುಗೆಲ್ಲಲಿದೆ ಎಂಬ ಕಾಂಗ್ರೆಸ್, ಜೆಡಿಎಸ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್-ಜೆಡಿಎಸ್‍ನವರು ಜನರನ್ನು ವೋಟ್ ಬ್ಯಾಂಕ್ ಎಂದುಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೆ ಮತದ ಆಧಾರದಲ್ಲಿ ದೇಶವನ್ನು ವಿಭಜನೆ ಮಾಡಿದ್ದಾರೆ. ದೇಶದ ಜನ ಎರಡು ಪಕ್ಷಗಳಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಎಲ್ಲಿ ಎಂಬುದನ್ನು ಟಾರ್ಚ್ ಲೈಟ್ ಹಾಕಿ ಹುಡುಕುವ ಪರಿಸ್ಥಿತಿ ಇದೆ. ಕಾಂಗ್ರೆಸ್ ತನ್ನ ಮಾನಸಿಕತೆಯನ್ನು ಈಗಲಾದರೂ ಬದಲಾಯಿಸಿಕೊಳ್ಳಬೇಕು ಎಂದರು.
ಬಿಜೆಪಿ ಜನರ ಭಾವನೆ ಜೊತೆ ನಿಲ್ಲುವ ಪಾರ್ಟಿಯಾಗಿದೆ. ಜನ ಅಪೇಕ್ಷೆ ಪಡುವುದನ್ನು, ಇಷ್ಟಪಡುವುದನ್ನು ಜಾರಿಗೆ ತರುತ್ತದೆ. ಸಂಘರ್ಷ ಆಗದಂತೆ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ಬಿಜೆಪಿ ಚಿಂತನೆಯಾಗಿದೆ. ಮೋದಿ ಪ್ರಧಾನಿಯಾದ ಮೇಲೆ ಕೋಮು ಗಲಭೆ ನಡೆದಿಲ್ಲ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಮುಸಲ್ಮಾನರು ಹಲಾಲ್ ಮಾಡುವುದಾದರೆ ಮಾಡಲಿ: ಈಶ್ವರಪ್ಪ
ಕಾಂಗ್ರೆಸ್ ಆಡಳಿತದಲ್ಲಿ ನಡೆದ ಕೋಮುಗಲಭೆಯಲ್ಲಿ ಪ್ರಾಣತ್ಯಾಗ ಮಾಡಿ ಹಲವರು ವಿಧವೆಯರಾದರು. ಆದರೆ ಬಿಜೆಪಿ ಸರ್ಕಾರವು ರಾಜ್ಯ ಮತ್ತು ದೇಶದಲ್ಲಿ ಒಡೆದು ಆಳುವ ನೀತಿಯನ್ನು ಮಾಡುತ್ತಿಲ್ಲ. ಸಿದ್ದರಾಮಯ್ಯ ಶಾದಿ ಭಾಗ್ಯ, ಟಿಪ್ಪು ಜಯಂತಿ, ಮಕ್ಕಳಿಗೆ ಟೂರ್ ಮಾಡಿದರು. ಅದೇ ಮಾನಸಿಕತೆ ರಾಜ್ಯದ ಮುಂದೆ ಹೇರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಮತ್ತು ಜನತಾದಳಗೆ ವೋಟ್ ಮಾತ್ರ ಕಾಣುತ್ತಿದೆ ಬಿಜೆಪಿಗೆ ಜನ ಕಾಣುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಲಾಲ್ ಕಟ್ ಮಾಂಸ ಖರೀದಿ ಉತ್ತೇಜಿಸಲು ಅಭಿಯಾನ: ದೇವನೂರ ಮಹಾದೇವ ನೇತೃತ್ವ