ಮೈಸೂರು: ರಾಷ್ಟ್ರದಲ್ಲಿರುವುದು ನಕಲಿ ಕಾಂಗ್ರೆಸ್. ಉಗ್ರಪ್ಪ ಬಿಡುಗಡೆ ಮಾಡಿರುವ ಆಡಿಯೋ ಸಿಡಿ ನಕಲಿ. ಇದು ಫೇಕ್ ಕಾಂಗ್ರೆಸ್, ಫೇಕ್ ಸಿಡಿ ಎಲ್ಲದು ಫೇಕ್ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಸ್ವತಃ ಪಕ್ಷದ ನೈಜ ಬಣ್ಣ ಬಯಲು ಮಾಡಿದ್ದಾರೆ. ತಮ್ಮ ಪತ್ನಿಗೆ ಯಾವುದೇ ಆಮಿಷ ಬಂದಿಲ್ಲ ಎಂದು ಅವರೇ ಹೇಳಿದ್ದಾರೆ. ಉಗ್ರಪ್ಪ ಅವರು ರಾಹುಲ್‍ಗಾಂಧಿ ಸೂಚನೆ ಮೇರೆಗೆ ಈ ನಕಲಿ ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ವಿಜಯಪುರದಲ್ಲಿ ವಿವಿ ಪ್ಯಾಟ್ ಸಿಕ್ಕಿರುವುದು ಸಹ ಸಾಕಷ್ಟು ಅನುಮಾನ ಮೂಡಿಸಿದೆ. ಈ ಬಗ್ಗೆ ತಾವು ಯಾವುದೇ ಅಭಿಪ್ರಾಯ ತಿಳಿಸಲು ಸಾಧ್ಯವಿಲ್ಲ. ಸೂಕ್ತ ತನಿಖೆ ಆಗಬೇಕೆಂದು ಆಗ್ರಹಿಸಿದರು.
ಹಾಸನದ ಶಾಸಕ ಪ್ರೀತಮ್ ಗೌಡರಂತ ನಾಯಕರನ್ನು ಹುಡುಕಿ ನಾವು ಪಕ್ಷ ಸಂಘಟನೆ ಮಾಡುತ್ತೇವೆ. ಬಿಎಸ್‍ವೈ ಎಂದು ಒಬ್ಬರೇ ಆಗುವುದಿಲ್ಲ. ಇಂದಿನಿಂದಲೇ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಈ ಸರ್ಕಾರ ಜಾಸ್ತಿ ದಿನ ಇರುವುದಿಲ್ಲ. ಅವರ ಪಾಪಕ್ಕೆ ಅವರೇ ಬೆಲೆ ಕಟ್ಟುತ್ತಾರೆ. ಮುಖ್ಯಮಂತ್ರಿ ಆಗಿದ್ದವರು ಅವರ ತವರು ಕ್ಷೇತ್ರದಲ್ಲಿ 36 ಸಾವಿರ ಮತದಿಂದ ಸೋಲುತ್ತಾರೆ ಅಂದರೆ ಕಾಂಗ್ರೆಸ್ ಸ್ಥಿತಿ ಏನಾಗುತ್ತಿದೆ. ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡಿದೆ. ಇಬ್ಬರನ್ನು ರಾಜ್ಯದ ಜನ ತಿರಸ್ಕಾರ ಮಾಡಿದ್ದಾರೆ ಎಂದು ಹೇಳಿದರು.