ಉಡುಪಿ: ಮೈತ್ರಿ ಸರ್ಕಾರದ ಆಂತರಿಕ ಗೊಂದಲ ಶಾಸಕರ ರಾಜೀನಾಮೆಯ ಮೂಲಕ ಬಹಿರಂಗವಾಗಿದೆ. ಸಿಎಂರನ್ನು ಒಪ್ಪಿಕೊಳ್ಳಲು ಸಿದ್ದರಾಮಯ್ಯ ತಯಾರಿಲ್ಲ. ಹೀಗಾಗಿ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರನ್ನು ಎತ್ತಿಕಟ್ಟಿ ಆಂತರಿಕ ಜಗಳ ಹೆಚ್ಚು ಮಾಡಿದ್ದಾರೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ರಾಜ್ಯ ರಾಜಕೀಯದ ಬೆಳವಣಿಗೆ ಬಗ್ಗೆ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಅವರು, ಆನಂದ್ ಸಿಂಗ್ ರಾಜೀನಾಮೆ ಕೊಟ್ಟಾಗಲೇ ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕಿತ್ತು. ಗೊಂದಲ ನಿವಾರಣೆಗೆ ಡಿಕೆಶಿ ಎಂಟ್ರಿ ಬಹಳ ಲೇಟಾಯ್ತು. ಸ್ಪೀಕರ್ ಕಚೇರಿಗೆ ಈಗ ಹೋಗಿ ಸಮಾಧಾನ ಮಾಡಿದರೆ ಪ್ರಯೋಜನ ಇಲ್ಲ ಎಂದರು. ಅಲ್ಲದೆ ಸಿಎಂ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಲೋಕೋಪಯೋಗಿ ಸಚಿವ ರೇವಣ್ಣ ಅವರಿಂದ ಮೈತ್ರಿಯಲ್ಲಿ ಬಿರುಕಾಯ್ತು ಎಂದು ಹೇಳಿದರು.
Advertisement
Advertisement
ಬೇರೆ ಪಕ್ಷದ ಸದಸ್ಯರಲ್ಲದವರು ಬಿಜೆಪಿಗೆ ಬರಬಹುದು, ರಾಜೀನಾಮೆ ಸ್ವೀಕಾರವಾದ ಮೇಲೆ ಯಾರೂ ಬೇಕಾದರು ಬಿಜೆಪಿಗೆ ಸೇರಬಹುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಹ್ವಾನ ನೀಡಿದರು. ಬಳಿಕ ಮೋದಿಯ ಯೋಜನೆ ಅನುಷ್ಠಾನಕ್ಕೆ ತರುವ ಸರ್ಕಾರ ರಾಜ್ಯದಲ್ಲಿ ಬರಬೇಕು, 15 ಜನ ರಾಜೀನಾಮೆ ಕೊಟ್ಟರೆ ಸರ್ಕಾರಕ್ಕೆ ಬಹುಮತ ಇಲ್ಲ. ಹೀಗಾಗಿ ರಾಜ್ಯದ ಬೆಳವಣಿಗೆಯನ್ನು ರಾಜ್ಯಪಾಲರು ಗಮನಿಸಬೇಕು ಎಂದರು. ಇದೇ ವೇಳೆ ರಾಜೀನಾಮೆ ಕೊಟ್ಟವರು ಬಿಜೆಪಿ ಸಂಪರ್ಕದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಸಿಎಂ ರಾಜ್ಯದಲ್ಲಿ ಬರಗಾಲ ಇದ್ದಾಗಲೇ ಅಮೆರಿಕ ಪ್ರವಾಸದಲ್ಲಿದ್ದಾರೆ. ಈ ಹಿಂದೆ ಉಡುಪಿಯ ರೆಸಾರ್ಟಿನಲ್ಲಿ ಸಿಎಂ ಮಸಾಜ್ ಮಾಡಿಸಿದರು. ಗ್ರಾಮ ವಾಸ್ತವ್ಯದ ನಾಟಕವಾಡಿ ಅಮೆರಿಕಕ್ಕೆ ಹೋದರು. ಆದರೆ ಸಿಎಂ ವಾಪಾಸ್ಸಾಗುವಾಗ ಕಾಂಗ್ರೆಸ್ ಯಾವ ನಾಟಕ ಆಡುತ್ತದೋ ನೋಡಬೇಕು ಎಂದು ಕರಂದ್ಲಾಜೆ ಹೇಳಿದರು.