ಮಂಗಳೂರು: ಕಲ್ಲಡ್ಕದ ಎರಡು ಶಾಲೆಗಳಿಗೆ ರಾಜ್ಯ ಸರಕಾರ ಅನುದಾನ ಕಡಿತಗೊಳಿಸಿದಾಗ ಸಂಸದೆ ಶೋಭಾ ಕರಂದ್ಲಾಜೆ ಭಿಕ್ಷೆಯೆತ್ತಿ ಅನ್ನ ನೀಡುವ ಭರವಸೆ ನೀಡಿದ್ದರು.
ಮಂಗಳೂರಿನ ಬಿಜೆಪಿ ಮುಖಂಡ ವೇದವ್ಯಾಸ ಕಾಮತ್ ಮನೆಯಲ್ಲಿ `ಅಕ್ಕಿ ಭಿಕ್ಷೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಅಲ್ಲದೆ ರಾಜ್ಯ ಮಹಿಳಾ ಮೋರ್ಚ ಘಟಕದ ಮೂಲಕ ಪ್ರತಿ ಸಂಕ್ರಾಂತಿಯಂದು ರಾಜ್ಯಾದ್ಯಂತ ಅಕ್ಕಿ ಭಿಕ್ಷೆ ಅಭಿಯಾನ ನಡೆಸುವ ಮೂಲಕ ಕಲ್ಲಡ್ಕದ ಎರಡು ಶಾಲೆಗಳಿಗೆ ಬಿಸಿಯೂಟದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು.
Advertisement
Advertisement
ಅ. 1ರಂದು ಯೋಜನೆಗೆ ಚಾಲನೆ ನೀಡಿದ್ದು ಬಿಟ್ಟರೆ ಶೋಭಾ ಕರಂದ್ಲಾಜೆ ಸೇರಿ ಬಿಜೆಪಿ ಮುಖಂಡರು ಮಾತು ಮರೆತಿದ್ದಾರೆ. ಅದಾಕ್ಕಾಗಿ ಒಂದು ತಿಂಗಳ ಬಳಿಕ ದಕ್ಷಿಣ ಕನ್ನಡ ಮಹಿಳಾ ಮೋರ್ಚ ದವರು ಕಲ್ಲಡ್ಕ ಶಾಲೆಗೆ 11 ಕ್ವಿಂಟಾಲ್ ಅಕ್ಕಿ ನೀಡಿದ್ದಾರೆ. ಶಾಲೆಯಲ್ಲಿ ಪ್ರತಿದಿನ 3500 ಕ್ಕೂ ಹೆಚ್ಚು ಮಕ್ಕಳಿಗೆ ಬಿಸಿಯೂಟ ನೀಡುತ್ತಿದ್ದು, ಮಹಿಳಾ ಮೋರ್ಚ ನೀಡಿದ ಅಕ್ಕಿ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.
Advertisement
ಶಾಲೆಯ ಮುಖ್ಯಸ್ಥರಾದ ಆರ್ ಎಸ್ ಎಸ್ ಮುಖಂಡ ಪ್ರಭಾಕರ ಭಟ್ ಮಾತ್ರ ಭಿಕ್ಷೆ ಎತ್ತಿಯಾದರೂ ಬಿಸಿಯೂಟ ನೀಡುತ್ತೀವಿ ಎಂದಿದ್ದರು. ಹಾಗಾದರೆ ಶೋಭಾ ಕರಂದ್ಲಾಜೆ ಅಕ್ಕಿ ಭಿಕ್ಷೆ ಹೆಸರಲ್ಲಿ ಜೋಳಿಗೆ ತೋರಿಸಿ ನಾಟಕವಾಡಿದರೇ ಎನ್ನುವ ಪ್ರಶ್ನೆ ಇದೀಗ ಅಲ್ಲಿನ ಜನರನ್ನು ಕಾಡುತ್ತಿದೆ.