ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪನವರಿಗೆ ವಯಸ್ಸು 75 ಪ್ಲಸ್ ಆಗಿದ್ದು, ಹೀಗಾಗಿ ಇವರ ಯಾವುದೇ ಮಾತುಗಳನ್ನು ಸಂಸದೆ ಶೋಭಾ ಕರಂದ್ಲಾಜೆ ಕೇಳುತ್ತಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಹರಿಹಾಯ್ದು, ಅವರು ತಮ್ಮ ಕ್ಷೇತ್ರವನ್ನೇ ಮರೆತಿದ್ದಾರೆ. ಸಂಸದೆಯಾಗಿ 5 ವರ್ಷಗಳಿಂದ ಈ ಭಾಗಗಳಲ್ಲಿ ಯಾವುದೇ ಕೆಲಸಗಳು ಮಾಡಿಲ್ಲ. ಯಾರಾದರೂ ಮೃತಪಟ್ಟರೆ ಆಗ ಕ್ಷೇತ್ರಕ್ಕೆ ಬರುತ್ತಾರೆ. ಪುನರ್ ವಸತಿ ಕೇಂದ್ರದಲ್ಲಿ ಜನ ಹಾಗೂ ಸರ್ಕಾರ ಕೊಟ್ಟ ಆಹಾರವನ್ನು ಸಂತ್ರಸ್ತರಿಗೆ ಬಡಿಸಿ ಪೋಸು ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.
ಶೋಭ ಕರಂದ್ಲಾಜೆ ಒಬ್ಬ ಕೀಳುಮಟ್ಟದ ರಾಜಕಾರಣಿಯಾಗಿದ್ದಾರೆ. ಭಾವನಾತ್ಮಕ ವಿಚಾರಗಳನ್ನು ಕೆರಳಿಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿಯ ಎಲ್ಲ ನಾಯಕರು ಬರಿ ಸುಳ್ಳು ಹೇಳುವುದನ್ನೇ ರೂಢಿ ಮಾಡಿಕೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರು ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದಿಂದ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಯಾವಾಗಲೂ ಬೇರೆ ಬೇರೆ ಕ್ಷೇತ್ರಗಳ ಮೂಲಕ ಸ್ಪರ್ಧೆ ಮಾಡುತ್ತಲೇ ಬಂದಿದ್ದಾರೆ. ಸದ್ಯ ಅವರು ಯಡಿಯೂರಪ್ಪನವರ ಮಾತನ್ನು ಕೇಳುವುದಿಲ್ಲ, ಏಕೆಂದರೆ ಯಡಿಯೂರಪ್ಪನವರ ವಯಸ್ಸು 75 ದಾಟಿದೆ ಎಂದು ವ್ಯಂಗ್ಯವಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv