ಗಂಡಸು ಎಂಪಿಗಳಿಗೆ ಶೋಭಾ ಕರಂದ್ಲಾಜೆ ಚಾಲೆಂಜ್

Public TV
2 Min Read
SHOBHA

ಉಡುಪಿ: ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ಆಯ್ಕೆಯಾದ ಎಲ್ಲಾ ಗಂಡಸು ಎಂಪಿಗಳಿಗೆ ಶೋಭಾ ಕರಂದ್ಲಾಜೆ ಚಾಲೆಂಜ್ ಹಾಕಿದ್ದಾರೆ. ನೀವು ಇಷ್ಟು ವರ್ಷದಲ್ಲಿ ಏನು ಮಾಡಿದ್ದೀರಿ ಲಿಸ್ಟ್ ಕೊಡಿ, ನನ್ನ ಅಭಿವೃದ್ಧಿ ಕಾರ್ಯಗಳ ಪಟ್ಟಿ ಕೊಡುತ್ತೇನೆ ಎಂದು ಸವಾಲು ಹಾಕಿದ್ದು, ಚರ್ಚೆಗೆ ಬರಲಿ ಅಂತ ಆಹ್ವಾನ ನೀಡಿದ್ದಾರೆ.

ಗೋ ಬ್ಯಾಕ್ ಶೋಭಾ ಅಭಿಯಾನ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕ್ಷೇತ್ರದ ಈ ಹಿಂದಿನ ಗಂಡಸು ಸಂಸದರಿಗೆ ನಾನು ಚಾಲೆಂಜ್ ಮಾಡುತ್ತೇನೆ. ನನಗೆ ಹಣಬಲ, ಜಾತಿ ಬಲ ಇಲ್ಲದೇ ಇರಬಹುದು. ಬಾಹುಬಲ ಇಲ್ಲ, ಬೆಂಬಲ ಕೊಡುವವರು ಇಲ್ಲದಿರಬಹುದು. ಆದರೆ ಎಲ್ಲರಿಗಿಂತ ಹೆಚ್ಚು ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಟಿಕೆಟ್ ಕೇಳುವ ಯಾರೋ ಒಬ್ಬರು ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ:‘ಶೋಭಕ್ಕನ ಮನೆಗೆ ಕಳ್ಸಿ, ಮೋದಿಯನ್ನ ಉಳಿಸಿ’- ಎಲೆಕ್ಷನ್ ಹೊತ್ತಲ್ಲಿ ಬಿಜೆಪಿಯಿಂದ್ಲೇ ಅಭಿಯಾನ

Jayaprakash Shobha

ಇಷ್ಟು ವರ್ಷ ಗಂಡಸು ಎಂಪಿಗಳು ಕ್ಷೇತ್ರದಲ್ಲಿ ಏನು ಮಾಡಿದ್ದೀರಿ? ಒಬ್ಬ ಮಹಿಳೆಯಾಗಿ ನಾನು ರಾಜ್ಯಾದ್ಯಂತ ಓಡಾಡಿಕೊಂಡು ಇಷ್ಟೆಲ್ಲಾ ಮಾಡಿದ್ದೇನೆ. ನಿಮ್ಮ ಕೈಯಲ್ಲಿ ಆಗದ ಕೆಲಸ ನಾನು ಮಾಡಿದ್ದೇನೆ. ಟಿಕೆಟ್ ನ ಆಸೆಗಾಗಿ ನಾನು ಇಷ್ಟೆಲ್ಲ ಮಾಡಿದ್ದಲ್ಲ. 10-20 ಹುಡುಗರ ಗುಂಪು ಕಟ್ಟಿಕೊಂಡು ಅಪಪ್ರಚಾರ ನಡೆಯುತ್ತಿದೆ. ನಾನು ಹೆದರುವ ಪ್ರಶ್ನೆಯೇ ಇಲ್ಲ ಎಂದರು. ಇದನ್ನೂ ಓದಿ:ಬಿಎಸ್‍ವೈ ಸೇರಿದಂತೆ ಬಿಜೆಪಿ ಹೈಕಮಾಂಡ್‍ಗೆ ತಲೆನೋವಾದ ಕೇಸ್

ಧನಿ ಎತ್ತಿದವರ ಕೊಡುಗೆಯೇನು? ನಾನು 25 ವರ್ಷದಿಂದ ಪಕ್ಷಕ್ಕೆ ಮಣ್ಣು ಹೊತ್ತಿದ್ದೇನೆ. ರಾಜ್ಯದಲ್ಲೆಲ್ಲಾ ಓಡಾಡಿದ್ದೇನೆ. ನೀವು ಬಿಜೆಪಿಗೆ ಏನು ಮಾಡಿದ್ದೀರಿ? ನನ್ನ ಜೊತೆ ಚರ್ಚೆಗೆ ಬನ್ನಿ ಆಮೇಲೆ ಟಿಕೆಟ್ ಕೇಳಿ ಎಂದು ಹೆಸರು ಹೇಳದೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ವಿರುದ್ಧ ಗರಂ ಆದರು.

vlcsnap 2019 02 24 13h22m46s476

ಸಾಧನೆ ವಿವರಿಸಿದ ಶೋಭಾ:
ನನ್ನ ಅವಧಿಯಲ್ಲಿ ಉಡುಪಿಗೆ ಪಾಸ್ ಪೋರ್ಟ್ ಆಫೀಸ್ ತಂದಿದ್ದೇನೆ. ರಾಜ್ಯದ ಏಕೈಕ ಸಖಿ ಸೆಂಟರ್ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿದೆ. ಎರಡು ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಯಾಗಿದೆ. ಜಿಟಿಡಿಸಿ ಕಟ್ಟಡ, ಕೌಶಲ್ಯ ತರಬೇತಿ ಕೇಂದ್ರ, ವಜ್ರದ ಹರಳು ಮತ್ತು ಆಭರಣ ತಯಾರಿಕಾ ತರಬೇತಿ ಸಂಸ್ಥೆ ಉಡುಪಿಯಲ್ಲಿ ನಿರ್ಮಾಣವಾಗಿದೆ. ಇಲ್ಲಿನ ಸರ್ಟಿಫಿಕೇಟ್ ದೇಶಾದ್ಯಂತ ಉಪಯೋಗಕ್ಕೆ ಬರುತ್ತದೆ. ರಾಜ್ಯದಲ್ಲೇ ಅತೀ ಹೆಚ್ಚು ಸಿಆರ್ ಎಫ್ ಫಂಡ್ ನನ್ನ ಕ್ಷೇತ್ರಕ್ಕೆ ಬಂದಿದೆ. 550 ಕೋಟಿ ರೂ. ರಸ್ತೆ ನಿರ್ಮಾಣಕ್ಕೆ ಖರ್ಚಾಗಿದೆ ಎಂದು ಹೇಳಿದರು. ಎರಡು ಜಿಲ್ಲೆಯ ಎಲ್ಲಾ ರಸ್ತೆ ರಾಷ್ಟ್ರೀಯ ಹೆದ್ದಾರಿ ಆಗುತ್ತಿದೆ. ನೀವೇನು ಮಾಡಿದ್ದೀರಿ ಅಂತ ಹೆಸರು ಹೇಳದೇ ಜಯಪ್ರಕಾಶ್ ಹೆಗ್ಡೆಗೆ ಶೋಭಾ ಟಾಂಗ್ ಕೊಟ್ಟರು.

ಯಾರೆಲ್ಲ ಗಂಡಸರು ಎಂಪಿ ಆಗಿದ್ದರು..?
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಈ ಹಿಂದೆ ಕಾಂಗ್ರೆಸ್ ನಿಂದ ಆಸ್ಕರ್ ಫರ್ನಾಂಡೀಸ್ ಸುದೀರ್ಘ ಸಂಸದರಾಗಿದ್ದರು. ಜಯಪ್ರಕಾಶ ಹೆಗ್ಡೆ, ವಿನಯಕುಮಾರ್ ಸೊರಕೆ, ಟಿ.ಎ ಪೈ, ಪಿ.ರಂಗನಾಥ ಶೆಣೈ, ಯು.ಎಸ್ ಮಲ್ಯ, ಸ್ವತಂತ್ರ ಪಾರ್ಟಿಯಿಂದ ಜೆ.ಎಂ ಲೋಬೋ, ಬಿಜೆಪಿಯಿಂದ ಐಎಂ ಜಯರಾಮ ಶೆಟ್ಟಿ, ಸದಾನಂದ ಗೌಡ ಅವರು ಈ ಹಿಂದೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *