ಶಿವಮೊಗ್ಗ: ಸಂಸದೆ ಶೋಭಾ ಕರಂದ್ಲಾಜೆ ಸಹೋದರ ಲಕ್ಷ್ಮಣ್ ಗೌಡ ಖರೀದಿಸಿದ ಎಸ್ಟೇಟ್ ದಾಖಲೆ ನಾಪತ್ತೆಯಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಕೊಡಗಿನ ಭಾಗಮಂಡಲದ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ 166 ಎಕರೆ ಎಸ್ಟೇಟ್ ಖರೀದಿಸಿದ್ದ ದಾಖಲೆ ನಾಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮಡಿಕೇರಿ ರಿಜಿಸ್ಟ್ರಾರ್ ಎಸ್ಟೇಟ್ ಖರೀದಿ ದಾಖಲೆಗಳು ನಾಶವಾಗಿರಬಹುದು ಎಂದು ಹೇಳಿದ್ದಾರೆ. ಇದೀಗ ಆರ್‍ಟಿಐ ಕಾರ್ಯಕರ್ತರಿಂದ ದಾಖಲೆ ನಾಪತ್ತೆ ಹಗರಣ ಬಟಾ ಬಯಲಾಗಿದೆ.
Advertisement
Advertisement
ಕೊಡುಗು ಜಿಲ್ಲೆ ಭಾಗಮಂಡಲ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ಶೋಭಾ ಕರಂದ್ಲಾಜೆ ಸಹೋದರ ಲಕ್ಷ್ಮಣ್ ಗೌಡ 166 ಎಕರೆ ಭೂಮಿ ಖರೀದಿಸಿದ್ದರು. ಈ ಭೂಮಿಯನ್ನು ಅಬ್ದುಲ್ ರೆಹಮಾನ್ ಅವರಿಂದ ಕಪಿಲ ಮಂಜುಶ್ರೀ ಅಪೆರೆಲ್ಸ್ ಎಂಬ ಸಂಸ್ಥೆಯ ಪರವಾಗಿ ಲಕ್ಷ್ಮಣ್ ಗೌಡ ಮತ್ತು ಸೆಬಾಸ್ಟಿಯನ್ ಎಂಬವರು 5 ಕೋಟಿ 10 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದರು. ಈ ಖರೀದಿಯ ನೋಂದಣಿ ಪತ್ರ ಹಾಗೂ ನೋಂದಣಿಗೆ ಪೂರಕವಾಗಿ ಸಲ್ಲಿಸಲಾದ ದಾಖಲೆಗಳನ್ನು ಆರ್‍ಟಿಐ ಮೂಲಕ ಕೇಳಲಾಗಿತ್ತು. ಆದರೆ ನೋಂದಣಿ ಪತ್ರವನ್ನು ಮಾತ್ರ ನೀಡಿರುವ ರಿಜಿಸ್ಟ್ರಾರ್, ಪೂರಕ ದಾಖಲೆಗಳನ್ನು ನೀಡಿರಲಿಲ್ಲ. ಮತ್ತೆ ಪೂರಕ ದಾಖಲೆಗಳಿಗೆ ಕೋರಿಕೆ ಸಲ್ಲಿಸಿದಾಗ ತೀರಾ ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ.
Advertisement
Advertisement
ಕಚೇರಿಯ ಎಲ್ಲಾ ಸಿಬ್ಬಂದಿ ವರ್ಗದೊಂದಿಗೆ ಕಚೇರಿ ಕರ್ತವ್ಯದ ವೇಳೆ ಪ್ರತಿದಿನ ದಾಖಲೆಗಳನ್ನು ಹುಡುಕಲಾಗಿತ್ತು. ಕಚೇರಿಯ ಸಮಸ್ತ ದಾಖಲೆಗಳನ್ನು ಹುಡುಕಲು ಹೆಚ್ಚಿನ ಸಮಯ ವ್ಯಯವಾಗಿದೆ. ಕಚೇರಿಯ ಸಂಪೂರ್ಣ ದಾಖಲೆಗಳನ್ನು ಹುಡುಕಲಾಗಿ ಸದರಿ ದಾಸ್ತಾವೇಜಿನೊಂದಿಗೆ ನೀಡಲಾಗಿರುವ ಪೂರಕ ದಾಖಲೆಗಳು ಅವಧಿ ಮೀರಿದ್ದೆಂದು ನಾಶಪಡಿಸಲಾಗಿದೆ. ಈ ಸಂದರ್ಭದಲ್ಲೇ ಮೇಲ್ಕಂಡ ದಿನಾಂಕ 17.08.2008ರಂದು ನೋಂದಣಿಯಾದ ಕ್ರಯಪತ್ರದ ಜೊತೆ ನೀಡಲಾದ ಲಗತ್ತುಗಳು ಹಾಗೂ ದಾಖಲೆಗಳನ್ನೂ ನಾಶಪಡಿಸಿರುವ ಸಂಭವ ಇರುತ್ತದೆ ಎಂದು ಕೊಡಗು ಜಿಲ್ಲೆಯ ಹಿರಿಯ ಉಪ ನೋಂದಣಾಧಿಕಾರಿ ತಿಳಿಸಿದ್ದಾರೆ.
2007ರಲ್ಲಿ ನೋಂದಣಿಯಾಗಿರುವ ಕಪಿಲ ಮಂಜುಶ್ರೀ ಅಪಾರೆಲ್ಸ್ ಕಂಪನಿಯ ನಿರ್ದೇಶಕ ಲಕ್ಷ್ಮಣ ಗೌಡ ಕರಾಂದ್ಲಾಜೆ ಅವರ ಸಹೋದರ. 2007ರಲ್ಲಿ ನೋಂದಣಿಯಾಗಿರುವ ಮಂಜುಶ್ರೀ ಅಪಾರೆಲ್ಸ್ ಕಂಪನಿಗೆ ಒಂದೇ ವರ್ಷದಲ್ಲಿ 5 ಕೋಟಿ 10 ಲಕ್ಷ ರೂಪಾಯಿ ಲೋನ್ ದೊರಕಿದೆ. ಇಷ್ಟು ಪ್ರಮಾಣದ ಲೋನ್ ದೊರಕುವಲ್ಲಿ ಕರಂದ್ಲಾಜೆ ಅವರ ಪಾತ್ರವೂ ಇದೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು ಆರ್.ಟಿ ನಗರದಲ್ಲಿರುವ ಫೆಡರಲ್ ಬ್ಯಾಂಕ್‍ನಿಂದ ಭೂಮಿ ಮಾರಾಟ ಮಾಡಿದ ಅಬ್ದುಲ್ ರೆಹಮಾನ್ ಅವರಿಗೆ ಖಾತೆಗೆ ನೇರವಾಗಿ ಈ ಹಣ ಸಂದಾಯವಾಗಿದೆ. ಮಂಜುಶ್ರೀ ಅಪಾರೆಲ್ಸ್ ಕಂಪನಿಯ ಧ್ಯೇಯೋದ್ದೇಶಗಳೇನು? ಕಂಪನಿಯ ನಿರ್ದೇಶಕರು ಯಾರು? ಯಾವ ಉದ್ದೇಶಕ್ಕಾಗಿ ಭೂಮಿ ಖರೀದಿ ಮಾಡಲಾಗುತ್ತಿದೆ? ಎಂಬ ಪ್ರಶ್ನೆಗಳು ಈಗ ಕಾಡುತ್ತಿವೆ.
ವಿವರಗಳು ಪೂರಕ ದಾಖಲೆಗಳಲ್ಲಿ ಇರುತ್ತವೆ. ಆದರೆ ಈಗ ಈ ದಾಖಲೆಗಳನ್ನು ನಾಶ ಮಾಡಲಾಗಿದೆ ಎನ್ನುವ ಮೂಲಕ ಮಡಕೇರಿ ರಿಜಿಸ್ಟ್ರಾರ್ ಕರ್ತವ್ಯ ಲೋಪವೆಸಗಿದ್ದಾರೆ. ಮಹತ್ವದ ದಾಖಲೆಗಳನ್ನು ಸೂಕ್ತ ನಿರ್ದೇಶನ, ನಿಯಮ ಪಾಲನೆ ಮಾಡದೆ ನಾಶವಾಗಿರಬಹುದು ಎಂಬ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.
ಇದು ಜಿಲ್ಲಾ ಮಟ್ಟದ ಅಧಿಕಾರಿಯ ಅತೀ ಬೇಜವಾಬ್ದಾರಿ ಹೇಳಿಕೆಯಾಗಿದ್ದು, ಅಷ್ಟಕ್ಕೂ ಈ ದಾಖಲೆಗಳಲ್ಲಿ ಇರುವ ಕಂಪನಿ ಹಾಗೂ ವ್ಯಕ್ತಿಗಳು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ನೇರವಾಗಿ ಸಂಬಂಧಿಸಿವೆ. ಕಪಿಲ ಮಂಜುಶ್ರೀ ಅಪಾರೆಲ್ಸ್ ಕಂಪನಿಯ ನಿರ್ದೇಶಕ ಲಕ್ಷ್ಮಣ ಗೌಡ ಖರೀದಿಸಿರುವ 166 ಎಕರೆ ಪ್ರದೇಶದಲ್ಲಿ 20 ಎಕರೆ ಮಾತ್ರ ಕಾಫಿ ಬೆಳೆಯಲು ಅನುಮತಿಯನ್ನು ನೀಡಲಾದೆ. ಇನ್ನುಳಿದ 146 ಎಕರೆ ಪ್ರದೇಶವು ಅರಣ್ಯ ಭೂಮಿಯಾಗಿದೆ. ಈ ಪ್ರದೇಶದಲ್ಲಿ ಕೋಟ್ಯಾಂತರ ರೂ. ಬೆಲೆ ಬಾಳುವ ಮರಳು ಇದೆ. ಪ್ರತಿ ಎಕರೆ 15ರಿಂದ 20ಲಕ್ಷ ಬೆಲೆ ಬಾಳುತ್ತದೆ. ಆದರೆ ಇವರಿಗೆ ಕೇವಲ 2 ರಿಂದ 3 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಇದರ ಹಿಂದೆ ಬೇರೆಯಾವುದೇ ಉದ್ದೇಶವಿದೆ. ಅಲ್ಲದೇ ಪ್ರಭಾವಿ ರಾಜಕಾರಣಿಗಳನ್ನು ರಕ್ಷಿಸುವ ಹಾಗೂ ಅವರ ಪ್ರಭಾವಕ್ಕೆ ಮಣಿದಿದ್ದಾರೆ ಎಂದು ಆರ್‍ಟಿಐ ಕಾರ್ಯಕರ್ತ ಹಾಗೂ ವಕೀಲ ವಿನೋದ್ ಆರೋಪ ಮಾಡಿದ್ದಾರೆ.