ಬೆಂಗಳೂರು: ಕಾಂಗ್ರೆಸ್ ಜನರ ದಾರಿ ತಪ್ಪಿಸುತ್ತಿದೆ. ಯಾವ ಆಧಾರದಲ್ಲಿ ನಾವು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ ಅಂತಾ ಹೇಳುತ್ತಿದ್ದೀರಿ? ಲೂಟಿ ಮಾಡುವುದಕ್ಕೆ ಬಿಬಿಎಂಪಿ ಯಲ್ಲಿ ಜೆಡಿಎಸ್ ಕಾಂಗ್ರೆಸ್ ಒಟ್ಟಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜೆಡಿಎಸ್ ಬಿಜೆಪಿ ಜೊತೆ ಹೋಗುತ್ತಿದೆ ಅಂತಾ ಹೇಳಿ ಅಲ್ಪಸಂಖ್ಯಾತರ ಓಲೈಕೆಗೆ ಸಿಎಂ ಮುಂದಾಗಿದ್ದಾರೆ. ಇದು ಭಯ ಹುಟ್ಟಿಸುವ ಪ್ರಯತ್ನ. ಬಿಬಿಎಂಪಿ ಯಲ್ಲಿ ಜೆಡಿಎಸ್ ಕಾಂಗ್ರೆಸ್ ಒಟ್ಟಿಗೆ ಇದ್ದು, ಒಟ್ಟಿಗೆ ಬೆಂಗಳೂರು ಹಾಳು ಮಾಡುತ್ತಿದ್ದಾರೆ. ಅಪವಿತ್ರ ಮೈತ್ರಿ ಮಾಡಿಕೊಂಡ ನೀವು ನಮಗೆ ನೈತಿಕತೆ ಪಾಠ ಮಾಡಬೇಕಾಗಿಲ್ಲ ಎಂದು ಕಿಡಿಕಾರಿದರು.
Advertisement
ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದಾರೆ ಅಂತಾ ಕಾಂಗ್ರೆಸ್ ಹೇಳುತ್ತಿದೆ. ಅಲ್ಪಸಂಖ್ಯಾತರು ಅರ್ಥ ಮಾಡಿಕೊಳ್ಳಬೇಕು. ಎಸ್‍ಡಿಪಿಐ ಜೊತೆ ಎರಡು ತಿಂಗಳ ಹಿಂದೆಯೇ ಹೊಂದಾಣಿಕೆ ಆಗಿದೆ. ಕೊಲೆ ರಾಜಕಾರಣ ಮಾಡಿದ ಎಸ್‍ಡಿಪಿಐ ಜೊತೆ ಕಾಂಗ್ರೆಸ್ ಹೋಗುತ್ತಿದೆ. ಎಸ್‍ಡಿಪಿಐ ಅಭ್ಯರ್ಥಿಗಳು ಕಾಂಗ್ರೆಸ್ ಗಾಗಿ ನಾಮಪತ್ರ ವಾಪಸ್ ಪಡೆಯುತ್ತಿದ್ದಾರೆ ಅದರ ಅರ್ಥವೇನು? ಎಸ್‍ಡಿಪಿಐ ಜೊತೆ ಏನು ಸಂಬಂಧ ಇದೆ? ಈ ವಿಚಾರವನ್ನು ಬಹಿರಂಗ ಮಾಡಿ ಎಂದು ಸಿಎಂಗೆ ಸವಾಲು ಹಾಕಿದರು.
Advertisement
ಅಮಿತ್ ಶಾ ಕುಮಾರಸ್ವಾಮಿ ಭೇಟಿ ಆರೋಪ ಕುರಿತು ಪ್ರತಿಕ್ರಿಯಿಸಿ 13ನೇ ತಾರೀಖು ಅಮಿತ್ ಶಾ ಕುಮಾರಸ್ವಾಮಿ ಭೇಟಿ ಮಾಡಿಲ್ಲ. ಆ ದಿನ ಅಮಿತ್ ಶಾ ಗೆ ಪೊಲೀಸರು ರಕ್ಷಣೆ ಕೂಡ ಕೊಟ್ಟಿದ್ದರು. ಕುಮಾರಸ್ವಾಮಿ ಅಮಿತ್ ಶಾ ಭೇಟಿ ಮಾಡಿದ್ದಾರೆ ಎನ್ನಲಾದ ದಿನಾಂಕದಂದು ಶಾ ಕಾರ್ಯಕ್ರಮದ ವಿವರ ಬಿಡುಗಡೆ ಮಾಡಿದ ಅವರು ಗುಪ್ತಚರ ಇಲಾಖೆ ನಿಮ್ಮ ದಾರಿ ತಪ್ಪಿಸಿದೆಯಾ, ಪೊಲೀಸರ ಜೊತೆ ಕೇಳಿ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
Advertisement
ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಸಿಎಂ ವಿಲವಿಲನೆ ಒದ್ದಾಡುತ್ತಿದ್ದಾರೆ. ಸಿಎಂಗೆ ಎರಡು ಕ್ಷೇತ್ರದಲ್ಲಿ ಸೋಲುತ್ತೇನೆ ಎಂದು ಭಾವಿಸಿ ಕೀಳು ಮಟ್ಟದ ರಾಜಕೀಯ ಶುರು ಮಾಡಿದ್ದಾರೆ. ಸಿಎಂ ರಕ್ತನೇ ಜನತಾದಳದ ರಕ್ತ. ಯಾವುದೋ ಕಾರಣಕ್ಕೆ ಕಾಂಗ್ರೆಸ್ ಬಂದಿದ್ದಾರೆ. ಬಿಜೆಪಿಗೆ ಈ ಬಾರಿ ಬಹುಮತ ಬರಲಿದೆ. ಯಾವುದೇ ಪಕ್ಷದ ಜೊತೆ ನಾವು ಹೋಗಲ್ಲ, ಯಾವ ಪಕ್ಷದ ಅಗತ್ಯತೆಯೂ ಬಿಜೆಪಿಗೆ ಇಲ್ಲ ಎಂದು ಅವರು ಹೇಳಿದರು.