ಚಿಕ್ಕಮಗಳೂರು: ಕ್ಷೇತ್ರದಲ್ಲಿ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಎಲ್ಲರೂ ಪಕ್ಷದ ಪರ ಕೆಲಸ ಮಾಡುತ್ತೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರ ಪ್ರವಾಸ ಆರಂಭ ಮಾಡಿರುವ ಶೋಭಾ ಕರಂದ್ಲಾಜೆ ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ಪಕ್ಷದ ಹೈಕಮಾಂಡ್ ಕ್ಷೇತ್ರದಲ್ಲಿ ಓಡಾಡಲು ಸೂಚನೆ ನೀಡಿದೆ. ಆದ್ದರಿಂದ ಚುನಾವಣೆಯಲ್ಲಿ ಪಕ್ಷಕ್ಕೆ ಮತ ನೀಡಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ. ನಾಳೆ ಯಾರಿಗೆ ಟಿಕೆಟ್ ನೀಡಿದರೂ ಕೂಡ ಒಟ್ಟಿಗೆ ಜವಾಬ್ದಾರಿ ನಿರ್ವಹಿಸುತ್ತೇವೆ ಎಂದರು.
ಇದೇ ವೇಳೆ ಟಿಕೆಟ್ ನೀಡುವುದು ಅಂತಿಮವಾಗಿ ಹೈಕಮಾಂಡ್ ಎಂದು ಸ್ಪಷ್ಟಪಡಿಸಿದ ಅವರು, ಈ ಕ್ಷೇತ್ರದಲ್ಲಿ ಪಕ್ಷ ಗೆಲ್ಲುವುದು ಖಚಿತ ಆಗಿರುವುದರಿಂದ ಸಾಕಷ್ಟು ಮಂದಿ ಟಿಕೆಟ್ ಕೇಳುತ್ತಾರೆ. ಆದರೆ ಟಿಕೆಟ್ ಪಡೆಯುವ ರಭಸದಲ್ಲಿ ಪಕ್ಷದ ವಿರುದ್ಧ ಮಾತನಾಡಬಾರದು ಎಂದು ತಿಳಿಸಿದರು.
ಜಯಪ್ರಕಾಶ್ ಹೆಗ್ಡೆ ಅವರು ನಮ್ಮ ಪಕ್ಷದ ನಾಯಕರೇ ಆಗಿದ್ದು, ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ಕೊಟ್ಟರೂ ಪ್ರಚಾರ ಮಾಡಲು ಸಿದ್ಧ. ಆದರೆ ಕಾರ್ಯಕರ್ತರ ಜೊತೆ ಸಭೆ ನಡೆಸುವುದು ತಪ್ಪಲ್ಲ. ಗೆಲ್ಲುವ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುತ್ತದೆ. ಇದಕ್ಕೆ ವಿಶೇಷ ಅರ್ಥ ನೀಡುವ ಅವಶ್ಯಕತೆ ಇಲ್ಲ. ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿರುವ ಚಳುವಳಿ ನಮ್ಮ ಕಾರ್ಯಕರ್ತರು ಮಾಡಿಲ್ಲ. ಟಿಕೆಟ್ ಆಕಾಂಕ್ಷಿಗಳ ಹಿಂಬಾಲಕರು ಗೋ ಬ್ಯಾಕ್ ಚಳವಳಿ ಮಾಡುತ್ತಿದ್ದಾರೆ. ಅಂತಿಮವಾಗಿ ನಾವು ಟಿಕೆಟ್ ಹಂಚಿಕೆ ಕುರಿತು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv