Connect with us

Cricket

ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗೋ ಆಸೆ ವ್ಯಕ್ತಪಡಿಸಿದ ಅಖ್ತರ್

Published

on

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಭಾರತ ಕ್ರಿಕೆಟ್ ತಂಡದ ಕೋಚ್ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಲೈವ್ ಸಂದರ್ಶನವೊಂದರಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿರುವ ಅಖ್ತರ್, ಅವಕಾಶ ಲಭಿಸಿದರೆ ತಾವು ಟೀಂ ಇಂಡಿಯಾ ಬೌಲಿಂಗ್ ಕೋಚ್ ಸಿದ್ಧ. ಹೆಚ್ಚು ಅಕ್ರಮಣಕಾರಿ, ವೇಗದ ಬೌಲಿಂಗ್ ಮಾಡುವ ಆಟಗಾರರನ್ನು ನನ್ನ ಮಾರ್ಗದರ್ಶನದಲ್ಲಿ ರೂಪಿಸುವ ಸಾಮರ್ಥ್ಯವಿದೆ. ಇದುವರೆಗೂ ನಾನು ಅನುಭವದ ಮೂಲಕ ಪಡೆದಿರುವ ಜ್ಞಾನವನ್ನು ಮತ್ತಷ್ಟು ಮಂದಿಗೆ ಹರಡುವುದು ನನ್ನ ಜವಾಬ್ದಾರಿ ಎಂದು ವಿವರಿಸಿದ್ದಾರೆ.

ಕೇವಲ ಟೀಂ ಇಂಡಿಯಾ ಬೌಲಿಂಗ್ ಕೋಚ್ ಮಾತ್ರವಲ್ಲದೇ, ಐಪಿಎಲ್‍ನಲ್ಲಿ ಕೆಕೆಆರ್ ತಂಡದ ಕೋಚ್ ಆಗುವುದಕ್ಕೂ ಸಿದ್ಧ ಎಂದಿದ್ದಾರೆ. ಅಂದಹಾಗೆ ಅಖ್ತರ್, ಐಪಿಎಲ್ ಮೊದಲ ಆವೃತ್ತಿಯಲ್ಲಿ ಕೆಕೆಆರ್ ತಂಡದ ಪರ ಆಡಿದ್ದರು. ಇದೇ ವೇಳೆ ತಮ್ಮ ಬಯೋಪಿಕ್ ಸಿನಿಮಾ ಕುರಿತು ಮಾತನಾಡಿರುವ ಅಖ್ತರ್, ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಬಯೋಪಿಕ್‍ನಲ್ಲಿ ನಟಿಸಿದರೆ ಇಷ್ಟ. ತಮ್ಮ ಜೀವನದ ಬಹುದೊಡ್ಡ ಆಸೆಯೂ ಕೂಡ ಹೌದು ಎಂದು ಅಖ್ತರ್ ಹೇಳಿದ್ದಾರೆ.

ಪಾಕಿಸ್ತಾನದ ಪರ 46 ಟೆಸ್ಟ್ ಪಂದ್ಯಗಳಲ್ಲಿ 176 ವಿಕೆಟ್, 163 ಏಕದಿನ ಪಂದ್ಯಗಳಲ್ಲಿ 247 ವಿಕೆಟ್, 15 ಟಿ20 ಪಂದ್ಯಗಳಲ್ಲಿ 19 ವಿಕೆಟ್ ಗಳಿಸಿದ್ದಾರೆ. ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿ 224 ಪಂದ್ಯಗಳಿಂದ 444 ವಿಕೆಟ್ ಗಳನ್ನು ಅಖ್ತರ್ ಪಡೆದಿದ್ದಾರೆ. 2003ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಅಖ್ತರ್ ಅತ್ಯಂತ ವೇಗದ ಬೌಲಿಂಗ್ ಮಾಡಿದ ದಾಖಲೆ ನಿರ್ಮಿಸಿದ್ದರು. ಅಭಿಮಾನಿಗಳು ಅಖ್ತರ್ ಅವರನ್ನು ‘ರಾವಲ್ಪಿಂಡಿ ಎಕ್ಸ್ ಪ್ರೆಸ್’ ಎಂದೇ ಕರೆಯುತ್ತಾರೆ.

ಸಚಿನ್ ಅವರೊಂದಿಗೆ ಇದ್ದ ಸ್ನೇಹದ ಕುರಿತು ಮಾತನಾಡಿರುವ ಅಖ್ತರ್, ನಾನು ಸಚಿನ್ ಅವರನ್ನು ನೋಡಿದ್ದೆ. ಆದರೆ ಅವರಿಗೆ ಇರುವ ಜನಪ್ರಿಯತೆ ಅರಿವು ನನಗಿರಲಿಲ್ಲ. ಅವರು ನನ್ನ ಉತ್ತಮ ಸ್ನೇಹಿತ. 1998ರಲ್ಲಿ ನಾನು ಚೆನ್ನೈನಲ್ಲಿದ್ದ ಸಂದರ್ಭದಲ್ಲಿ ಅವರನ್ನು ಅಭಿಮಾನಿಗಳು ‘ಕ್ರಿಕೆಟ್ ದೇವರು’ ಎಂದು ಕರೆಯುತ್ತಾರೆ ಎಂದು ತಿಳಿಯಿತು. ಆ ಟೂರ್ನಿಯ ಸಂದರ್ಭದಲ್ಲಿ ನಾನು ಸಾಧ್ಯವಾದಷ್ಟು ವೇಗವಾಗಿ ಬೌಲಿಂಗ್ ಮಾಡಿದ್ದೆ. ನನ್ನ ಬೌಲಿಂಗ್ ವೇಗವನ್ನು ಭಾರತೀಯರು ಮೆಚ್ಚಿದ್ದರು. ಆದ್ದರಿಂದಲೇ ನನಗೆ ಅಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂದು ಅಖ್ತರ್ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *