ರಾಷ್ಟ್ರಪತಿ ನಿಮ್ಮ ಜೇಬಿನಲ್ಲಿದ್ದಾರಾ? ಬಿಜೆಪಿ ಹೇಳಿಕೆಗೆ ಶಿವಸೇನೆ ಕೆಂಡಾಮಂಡಲ

Public TV
2 Min Read
UddhavThackeray BJP

ಮುಂಬೈ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆ ಎಂದ ಬಿಜೆಪಿಗೆ ತಿರುಗೇಟು ನೀಡಿರುವ ಶಿವಸೇನೆ, ರಾಷ್ಟ್ರಪತಿ ನಿಮ್ಮ ಜೇಬಿನಲ್ಲಿದ್ದಾರಾ ಎಂದು ಪ್ರಶ್ನೆ ಮಾಡಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡ ಶಿವಸೇನೆ ಮತ್ತು ಬಿಜೆಪಿಗೆ ಬಹುಮತ ಸಿಕ್ಕಿದೆ. ಎರಡೂ ಪಕ್ಷಗಳ ನಡುವಿನ ಹಗ್ಗ-ಜಗ್ಗಾಟದಾಟ ಮತ್ತಷ್ಟು ಕಠಿಣವಾಗುತ್ತಿದೆ. ಎರಡೂ ಪಕ್ಷಗಳ ನಾಯಕರ ಪರಸ್ಪರ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದು, ಮಹಾರಾಷ್ಟ್ರ ರಾಜಕಾರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.

UddhavThackeray Amit Shah 1

ನವೆಂಬರ್ 8ರೊಳಗೆ ಸರ್ಕಾರ ರಚಿಸದಿದ್ದರೆ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆಗಳಿವೆ ಎಂದು ಬಿಜೆಪಿಯ ಸುಧೀರ್ ಮುಂಗಂಟಿವರ್ ಸ್ಫೋಟಕ ಹೇಳಿಕೆ ನೀಡುವ ಮೂಲಕ ಮಹಾರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಎಬ್ಬಿಸಿದ್ದರು. ಇದೀಗ ಸುಧೀರ್ ಹೇಳಿಕೆಗೆ ತಿರುಗೇಟು ನೀಡಿರುವ ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯ ಮುಖಪುಟದಲ್ಲಿ ರಾಷ್ಟ್ರಪತಿ ನಿಮ್ಮ ಜೇಬಿನಲ್ಲಿದ್ದಾರಾ ಎಂದು ಪ್ರಶ್ನಿಸಿದೆ.

ರಾಷ್ಟ್ರಪತಿಗಳ ಸಹಿಯ ರಬ್ಬರ್ ಸ್ಟ್ಯಾಂಪ್ ಮಹಾರಾಷ್ಟ್ರದ ಬಿಜೆಪಿಯ ಕಾರ್ಯಾಲಯದಲ್ಲಿರಬೇಕು. ಒಂದು ವೇಳೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡದಿದ್ದಲ್ಲಿ, ಈ ರಬ್ಬರ್ ಸ್ಟ್ಯಾಂಪ್ ಬಳಸುವ ಮೂಲಕ ರಾಷ್ಟ್ರಪತಿ ಆಡಳಿತದ ತುರ್ತು ಪರಿಸ್ಥಿತಿ ತರಲು ಮುಂದಾಗುತ್ತಿದ್ದಾರೆ. ಬಿಜೆಪಿಯ ಈ ಬೆದರಿಕೆಯನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳುತ್ತಾರೆ ಬರೆದುಕೊಂಡಿದೆ.

UddhavThackeray Amit Shah

ಸುಧೀರ್ ಮುಂಗಂಟಿವರ್ ಅವರು ಈಗಿರುವ ವಿಧಾನಸಭೆ ಅವಧಿಯ ಅಧಿಕಾರಾವಧಿ ನವೆಂಬರ್ 8ಕ್ಕೆ ಕೊನೆಗೊಳ್ಳಲಿದೆ. ನವೆಂಬರ್ 7ರೊಳಗೆ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದೆ ಎಂದಿದ್ದರು.

ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಶಿವಸೇನೆ ಬಿಜೆಪಿಯೇತರ ಸರ್ಕಾರ ರಚನೆಗೆ ಪ್ಲಾನ್ ಮಾಡಿಕೊಂಡಿದೆ. ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಶಿವಸೇನೆಯ ಹಿರಿಯ ಮುಖಂಡ ಸಂಜಯ್ ರಾವತ್ ಭೇಟಿಯಾಗಿ ಹೊಸ ಸಮೀಕರಣ (ಶಿವಸೇನೆ+ಎನ್‍ಸಿಪಿ+ಕಾಂಗ್ರೆಸ್=ಸರ್ಕಾರ) ಮುಂದಿಟ್ಟು ರಹಸ್ಯ ಮಾತುಕತೆ ನಡೆಸಿದ್ದರು. ಇತ್ತ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರು ಸಹ ದೆಹಲಿಗೆ ತೆರಳಿ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಮಾತ್ರ ತಾನೇ ಐದು ವರ್ಷ ಸರ್ಕಾರ ರಚಿಸೋದು, ನಮ್ಮವರೇ ಸಿಎಂ ಸ್ಥಾನ ಅಲಂಕರಿಸೋದು ಎಂದು ಹೇಳುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *