ಶಿವ ಭಕ್ತಿ ಪ್ರಿಯ. ಭಕ್ತರಿಗೆ ಅತಿ ಬೇಗನೆ ಒಲಿಯುವ ದೇವ. ನಿಷ್ಕಲ್ಮಶ, ಶುದ್ಧ, ಮುಗ್ದ ಮನಸ್ಸಿನಿಂದ ಏನು ಬೇಡಿಕೊಂಡರೂ ಭಕ್ತರಿಗಾಗಿ ದಯಪಾಲಿಸುವ ಕರುಣಾಮಯಿ ಹರ. ಶಿವ ಭಕ್ತರಿಂದ ಭಕ್ತಿಯ ಹೊರತು ಬೇರೇನನ್ನೂ ಕೇಳುವುದಿಲ್ಲ. ಭಕ್ತಿಯಿಂದ ತನ್ನನ್ನು ಜಪಿಸುವ, ಆರಾಧಿಸುವ ಭಕ್ತರನ್ನು ಎಂದಿಗೂ ಕೈಬಿಡುವುದಿಲ್ಲ. ಇದನ್ನು ನಾವು ಮಹಾದೇವನ ಕುರಿತ ಹಲವಾರು ಪುರಾಣ ಕಥೆಗಳಲ್ಲಿ ಓದಿದ್ದೇವೆ. ಭಕ್ತರಲ್ಲಿ ಎಂದಿಗೂ ಭೇದವೆಣಿಸದ ಶಂಕರ. ಆದ್ದರಿಂದಲೇ ಅಸುರರು ಸಹ ಶಿವನನ್ನು ಧ್ಯಾನಿಸಿ ವರಗಳನ್ನು ಪಡೆದರು. ಶಿವನಿಗೆ ಅಚ್ಚುಮೆಚ್ಚಿನ ಭಕ್ತರು ಯಾರು? ಅವರಿಗಾಗಿ ಶಿವ ಏನನ್ನು ಮಾಡಿದ ಎಂಬುದನ್ನು ತಿಳಿಯೋಣ ಬನ್ನಿ.
ಬೇಡರ ಕಣ್ಣಪ್ಪ
ಈ ಶಿವಭಕ್ತನ ಹೆಸರು ಕಣ್ಣಪ್ಪ. ಬೇಡರ ಕುಲದವನಾದ್ದರಿಂದ ಬೇಡರ ಕಣ್ಣಪ್ಪ ಎಂದು ಹೆಸರಾಗಿರುತ್ತಾನೆ. ಭಕ್ತಿ, ಪೂಜೆ, ಪಾಪ, ಪುಣ್ಯದ ಬಗ್ಗೆ ಏನೂ ಗೊತ್ತಿಲ್ಲದ ಕಣ್ಣಪ್ಪನ ಕನಸಿನಲ್ಲಿ ಆಗಾಗ್ಗೆ ಶಿವ ಕಾಣಿಸಿಕೊಳ್ಳುತ್ತಿರುತ್ತಾರೆ. ಪ್ರಾಣಿ-ಪಕ್ಷಗಳನ್ನು ಬೇಟೆಯಾಡಿ ಜೀವನ ಸಾಗಿಸುವ ಕುಲದವ ಕಣ್ಣಪ್ಪ. ಎಂದಿನಂತೆ ಒಮ್ಮೆ ಬೇಟೆಗೆ ಹೋಗಿದ್ದಾಗ ಏನೂ ಸಿಗದೇ ಕತ್ತಲಾಗಿಬಿಡುತ್ತದೆ. ಪ್ರಾಣಿಗಳ ಭಯದಿಂದ ಆ ರಾತ್ರಿ ಬಿಲ್ವಪತ್ರೆ ಮರವನ್ನು ಏರಿ ಕುಳಿತುಕೊಳ್ಳುತ್ತಾನೆ. ನಿದ್ರೆ ಬಾರದಿರಲಿ ಎಂದು ಒಂದೊಂದೇ ಬಿಲ್ವಪತ್ರೆ ಎಲೆಯನ್ನು ಕಿತ್ತು ನೆಲದ ಮೇಲೆ ಇಡುತ್ತಿರುತ್ತಾನೆ. ಅಲ್ಲೇ ಮರದ ಕೆಳಗಿದ್ದ ಶಿವಲಿಂಗದ ಮೇಲೆ ಬಿಲ್ವಪತ್ರೆ ಬೀಳುತ್ತದೆ. ಬೆಳಗ್ಗೆ ಕೆಳಗಿಳಿದು ನೋಡಿದಾಗ ಕಣ್ಣಪ್ಪನಿಗೆ ಶಿವಲಿಂಗ ಕಾಣುತ್ತದೆ. ತನ್ನ ಕನಸಿನಲ್ಲಿ ಬರುತ್ತಿದ್ದ ಲಿಂಗ ಇದೇ ಎಂದು ತಿಳಿದು ಅಲ್ಲಿಂದ ಪ್ರತಿದಿನ ಪೂಜೆಗೈಯ್ಯಲು ಪ್ರಾರಂಭಿಸುತ್ತಾನೆ. ಲಿಂಗದ ಜೊತೆ ಮಾತಾಡುತ್ತಾನೆ. ಭಕ್ತಿಯಿಂದ ಶಿವಲಿಂಗವನ್ನು ಅಪ್ಪಿಕೊಳ್ಳುತ್ತಾನೆ. ಅದೇ ಲಿಂಗಕ್ಕೆ ನಿತ್ಯ ಅರ್ಚಕ ಕೂಡ ಪೂಜೆ ಮಾಡುತ್ತಿರುತ್ತಾನೆ. ಅರ್ಚಕ ಲಿಂಗವನ್ನು ಶುಚಿಗೊಳಿಸಿ ಹೂವುಗಳಿಂದ ಅಲಂಕರಿಸಿ ಹಣ್ಣು, ಬಗೆಬಗೆಯ ಭಕ್ಷ್ಯವನ್ನು ಲಿಂಗಕ್ಕೆ ಅರ್ಪಿಸುತ್ತಿರುತ್ತಾನೆ. ಆದರೆ, ಕಣ್ಣಪ್ಪ ತಾನು ಬೇಟೆಯಾಡಿದ ಪ್ರಾಣಿಗಳ ಮಾಂಸವನ್ನೇ ಶಿವನಿಗೆ ನೈವೇದ್ಯವಾಗಿ ಇಡುತ್ತಾನೆ. ಇದನ್ನು ಗಮನಿಸಿದ ಅರ್ಚಕ ಸಿಟ್ಟುಗೊಂಡು ಕಣ್ಣಪ್ಪನಿಗೆ ಶಿಕ್ಷೆ ವಿಧಿಸುತ್ತಾನೆ. ತನ್ನ ಪ್ರಿಯ ಭಕ್ತನನ್ನು ಶಿಕ್ಷಿಸುತ್ತಿರುವುದನ್ನು ಕಂಡು ಶಿವಲಿಂಗದ ಕಣ್ಣಿನಿಂದ ನೀರು ಬರಲು ಪ್ರಾರಂಭಿಸುತ್ತದೆ. ಶಿವ ಅಳುತ್ತಿದ್ದಾನೆಂದು ಕಣ್ಣಪ್ಪ ಸಂತೈಸುತ್ತಾನೆ. ಆದರೆ ಕಣ್ಣಲ್ಲಿ ನೀರು ನಿಲ್ಲುವುದಿಲ್ಲ. ಕೊನೆಗೆ ದಿಕ್ಕು ತೋಚದೆ ಕಣ್ಣಪ್ಪ ತನ್ನ ಎರಡೂ ಕಣ್ಣುಗಳನ್ನು ಕಿತ್ತು ಲಿಂಗದ ಮುಂದಿಡುತ್ತಾನೆ. ಆಗ ಲಿಂಗದ ಕಣ್ಣಲ್ಲಿ ನೀರು ನಿಂತು ಶಿವ-ಪಾರ್ವತಿ ಪ್ರತ್ಯಕ್ಷರಾಗಿ ಪ್ರಿಯಭಕ್ತನಿಗೆ ಕಣ್ಣು ಮರಳಿ ಬರುವಂತೆ ಮಾಡುತ್ತಾರೆ. ಇದನ್ನೂ ಓದಿ: ಕಾಡು ಮಲ್ಲೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ – ಮುಂಜಾನೆಯಿಂದಲೇ ಶಿವಲಿಂಗಕ್ಕೆ ರುದ್ರಾಭಿಷೇಕ
Advertisement
Advertisement
ಮಾರ್ಕಂಡೇಯ
ಒಂದಾನೊಂದು ಕಾಲದಲ್ಲಿ ಮೃಕಂಡು ಎಂಬ ಮುನಿವರ್ಯನಿದ್ದ. ಆತನಿಗೆ ಮದುವೆಯಾಗಿ ಬಹಳ ವರ್ಷಗಳು ಕಳೆದರೂ ಮಕ್ಕಳಾಗಿರಲ್ಲ. ದುಃಖಿತನಾದ ಮೃಕಂಡು ಪರಮೇಶ್ವರನ ಕುರಿತು ಘೋರ ತಪಸ್ಸು ಮಾಡುತ್ತಾನೆ. ಅವನ ತಪಸ್ಸಿಗೆ ಮೆಚ್ಚಿ ಈಶ್ವರ ಪ್ರತ್ಯಕ್ಷನಾಗಿ, ‘ನಿನಗೆ ಮಂದಬುದ್ದಿಯ ನೂರು ವರ್ಷ ಬಾಳುವ ಮಗ ಬೇಕೋ? ಹದಿನಾರೇ ವರ್ಷ ಬಾಳುವ ಅಲ್ಪಾಯುಷಿ ಸುಜ್ಞಾನಿ ಮಗ ಬೇಕೋ?’ ಎಂದು ಕೇಳುತ್ತಾನೆ. ಅದಕ್ಕೆ ಮೃಕಂಡು ಸುಜ್ಞಾನಿ ಮಗನನ್ನೇ ಕೊಡು ಎಂದು ಕೇಳಿಕೊಳ್ಳುತ್ತಾನೆ. ಶಿವನ ವರದಿಂದ ಮೃಕಂಡು ದಂಪತಿಗೆ ಮಾರ್ಕಂಡೇಯ ಜನಿಸುತ್ತಾನೆ. ಅಲ್ಪಾಯುಷಿಯಾದ ಬಾಲಭಕ್ತ ಶಿವನನ್ನು ಸದಾ ಪೂಜಿಸುತ್ತಾನೆ. ಶಿವನನ್ನು ಬಿಟ್ಟಿರಲಾರಂಥ ಭಕ್ತನಾಗಿರುತ್ತಾನೆ. ಮಾರ್ಕಂಡೇಯನ ಆಯಸ್ಸು ಮುಗಿದಾಗ, ಪಾಶ ಹಾಕಿ ಕರೆದುಕೊಂಡು ಹೋಗಲು ಯಮ ಬರುತ್ತಾನೆ. ಶಿವಲಿಂಗವನ್ನು ಬಿಟ್ಟು ನಾನು ಎಲ್ಲಿಗೂ ಬರುವುದಿಲ್ಲ ಎಂದು ಮಾರ್ಕಂಡೇಯ ಹಠ ಹಿಡಿಯುತ್ತಾನೆ. ಕೊನೆಗೆ ಯಮಧರ್ಮ ಸಿಟ್ಟಿನಿಂದ ಯಮಪಾಶ ಹಾಕಲು ಬರುತ್ತಾನೆ. ಆಗ ಶಿವ ಪ್ರತ್ಯಕ್ಷನಾಗಿ ಯಮನನ್ನು ತಡೆಯುತ್ತಾನೆ. ಮಾರ್ಕಂಡೇಯನ ಭಕ್ತಿಗೆ ಮೆಚ್ಚಿ, ನೀನು ಚಿರಂಜೀವಿಯಾಗಿ ಬಾಳು ಎಂದು ವರ ನೀಡುತ್ತಾನೆ. ಬಳಿಕ ಮಾರ್ಕಂಡೇಯ ತಂದೆ-ತಾಯಿ ಬಳಿಗೆ ಹೋಗಿ ನೂರ್ಕಾಲ ಬಾಳುತ್ತಾನೆ.
Advertisement
Advertisement
ರಾವಣ
ಲಂಕಾದ ರಾಜ ರಾವಣ. ಈ ರಾಜನಿಗೆ ಹತ್ತು ತಲೆ. ರಾಮಾಯಣದ ರಾಮನಿಗೆ ಎದುರಾಳಿ. ಆದರೂ, ರಾವಣ ಶಿವನ ಪರಮಭಕ್ತ. ಶಿವ ತಾಂಡವ ಸ್ತೋತ್ರದಿಂದ ರಾವಣನ ಭಕ್ತಿ ಅಮರವಾಗಿದೆ. ದಂತಕಥೆ ಪ್ರಕಾರ, ಲಂಕಾಸುರ ರಾವಣ ತನ್ನ ಶಕ್ತಿ ಪ್ರದರ್ಶಿಸಲು ಶಿವನ ವಾಸಸ್ಥಾನವಾದ ಕೈಲಾಸ ಪರ್ವತವನ್ನೇ ಮೇಲೆತ್ತಲು ಪ್ರಯತ್ನಿಸುತ್ತಾನೆ. ಪರ್ವತ ಮೇಲೆತ್ತಲು ಬಿಡಬಾರದೆಂದು ಶಿವ ತನ್ನ ಕಾಲ್ಬೆರಳಿನಿಂದ ಪರ್ವತವನ್ನು ಕಳೆಗೆ ಒತ್ತುತ್ತಾನೆ. ಪರಿಣಾಮ ಪರ್ವತದ ಕೆಳಗೆ ರಾವಣ ಸಿಲುಕಿಕೊಳ್ಳುತ್ತಾನೆ. ಶಿವನಲ್ಲಿ ಕ್ಷಮೆಯಾಚಿಸಲು ರಾವಣ ಘೋರ ತಪಸ್ಸು ಮಾಡುತ್ತಾನೆ. ಶಿವನನ್ನು ಮೆಚ್ಚಿಸಲು ತಾಂಡವ ಸ್ತೋತ್ರವನ್ನು ರಚಿಸುತ್ತಾನೆ. ರಾವಣನ ಭಕ್ತಿಗೆ ಮೆಚ್ಚಿ ಶಿವ ಕ್ಷಮಿಸುತ್ತಾನೆ. ಜೊತೆಗೆ ಆಕಾಶ ಖಡ್ಗವನ್ನು ರಾವಣನಿಗೆ ನೀಡುತ್ತಾನೆ. ಇದನ್ನೂ ಓದಿ: ಅಮೆರಿಕ | ಲಿವರ್‌ಮೋರ್‌ನ ಶಿವ-ವಿಷ್ಣು ದೇವಾಲಯದಲ್ಲಿ ನಿತ್ಯ ಆರಾಧನೆ
ನಂದನಾರ್
ಭಗವಾನ್ ಶಿವನ ಮೇಲೆ ಆಳವಾದ ಭಕ್ತಿ ಹೊಂದಿದ್ದ ಸಂತ ನಂದನಾರ್. ಚಿಕ್ಕವಯಸ್ಸಿನಲ್ಲಿಯೇ ತಂದೆ-ತಾಯಿ ಕಳೆದುಕೊಂಡು ಅನಾಥನಾಗಿದ್ದ ನಂದನಾರ್ ಜೀತ ಮಾಡಿಕೊಂಡಿದ್ದರು. ಶಿವನ ಸ್ತೋತ್ರಗಳನ್ನು ಹಾಡುತ್ತಾ ಬೆಳೆದರು. ಜಮೀನ್ದಾರರ ಬಳಿ ಜೀತಕ್ಕಿದ್ದ ನಂದನಾರ್, ಶಿವನ ದೇವಾಲಯಕ್ಕೆ ಭೇಟಿ ನೀಡುವ ಆಸೆ ವ್ಯಕ್ತಪಡಿಸಿದರು. ಆದರೆ, ಜಮೀನ್ದಾರರು ಅದಕ್ಕೆ ಅವಕಾಶ ನೀಡಲಿಲ್ಲ. ಕೆಲಸ ಮಾಡುವಂತೆ ಹೇಳುತ್ತಿದ್ದರು. ಒಮ್ಮೆ ಹೇಗೋ ಜಮೀನ್ದಾರರನ್ನು ಒಪ್ಪಿಸುವಲ್ಲಿ ನಂದನಾರ್ ಯಶಸ್ವಿಯಾದರು. ದೇವಾಲಯಕ್ಕೆ ಹೋದಾಗ, ಅಸ್ಪೃಶ್ಯ ಎಂಬ ಕಾರಣಕ್ಕೆ ಒಳಗಡೆ ಬಿಡಲಿಲ್ಲ. ಅವರ ಪ್ರವೇಶಕ್ಕೆ ನಂದಿ ವಿಗ್ರಹವೂ ಅಡ್ಡಲಾಗಿತ್ತು. ಇದರಿಂದ ದುಃಖಿತರಾದ ನಂದನಾರ್, ಶಿವನ ಕುರಿತು ಹಾಡುಗಳನ್ನು ಹೇಳಲು ಪ್ರಾರಂಭಿಸಿದರು. ಅಚ್ಚರಿ ಎಂಬಂತೆ ನಂದಿ ವಿಗ್ರಹ ದಾರಿ ಬಿಟ್ಟು ಪಕ್ಕಕ್ಕೆ ಸರಿಯಿತು. ಇದು ನೆರೆದಿದ್ದವರಿಗೆ ಅಚ್ಚರಿ ಮೂಡಿಸಿತು. ನಂದನಾರ್ ಅವರು ಶಿವ ದೇವಾಲಯ ಪ್ರವೇಶಿಸಿ ಭಕ್ತಿ ಸಮರ್ಪಿಸಿದರು.
ಮಾಣಿಕವಾಸಾಗರ
ಮಾಣಿಕವಾಸಾಗರ ಪ್ರಸಿದ್ಧ ತಮಿಳು ಕವಿ ಮತ್ತು ಸಂತ. ಶಿವನ ಕುರಿತು ಭಕ್ತಿ ಸ್ತುತಿಗೀತೆಗಳನ್ನು ರಚಿಸಿದ ಸಂತ ಇವರು. ಮಾಣಿಕವಾಸಾಗರ್ ಅವರು 9ನೇ ಶತಮಾನದವರು. ರಾಜ ಅರಿಮಾರ್ಟಾನಾ ಪಾಂಡ್ಯ ಸಾಮ್ರಾಜ್ಯದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಆದಾಗ್ಯೂ, ಆಧ್ಯಾತ್ಮಿಕ ಅನುಭವಗಳಿಂದ ಹೆಸರಾಗಿದ್ದರು. ತನ್ನ ಲೌಕಿಕ ಜೀವನವನ್ನು ತ್ಯಜಿಸಿ, ಭಗವಾನ್ ಶಿವನ ಸೇವೆಗೆ ತನ್ನನ್ನು ತಾನು ಸಮರ್ಪಿಸಿಕೊಂಡರು. ಅವರ ಕವಿತೆಗಳನ್ನು ತಮಿಳು ಶೈವ ಸಾಹಿತ್ಯದ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಇದನ್ನೂ ಓದಿ: ಶಿವರಾತ್ರಿ ವಿಶೇಷ: ಹಿಂದೂಗಳ ಆದ್ಯ ತೀರ್ಥಕ್ಷೇತ್ರ – ಮಾರಿಷಸ್‌ನ ಮಂಗಲ ಮಹಾದೇವ ಶಿವಾಲಯ!
ಕಾರೈಕಲ್ ಅಮ್ಮಯ್ಯರ್
ತಮಿಳು ಶೈವ ಧರ್ಮದ ನಾಯನ್ಮಾರ್ ಸಂತರಲ್ಲಿ ಒಬ್ಬರಾದ ಕರೈಕಲ್ ಅಮ್ಮಯ್ಯರ್, ಶಿವನ ಬಗ್ಗೆ ಆಳವಾದ ಭಕ್ತಿಗೆ ಹೆಸರುವಾಸಿಯಾದ ಧರ್ಮನಿಷ್ಠ ತಪಸ್ವಿ. ಕರೈಕಲ್ (ಈಗಿನ ತಮಿಳುನಾಡು)ನಲ್ಲಿ ಜನಿಸಿದ ಅವರ ಮೂಲ ಹೆಸರು ಪುನೀತಾವತಿ. ಶ್ರೀಮಂತ ವ್ಯಾಪಾರಿಯ ಮಗಳು ಪುನಿತಾವತಿ, ಪರಮದತ್ತನನ್ನು ಮದುವೆಯಾಗುತ್ತಾಳೆ. ಒಮ್ಮೆ ಪರಮದತ್ತನು ಶಿವಭಕ್ತನಿಂದ ಎರಡು ಮಾವಿನ ಹಣ್ಣುಗಳನ್ನು ಪಡೆದು ಮನೆಗೆ ಕಳುಹಿಸಿದನು. ಭಗವಾನ್ ಶಿವನು ಬೇರೆ ರೂಪತಾಳಿ ಭಿಕ್ಷೆ ಬೇಡಲು ಬಂದಾಗ, ಪುನಿತಾವತಿ ಆ ಮಾವಿನ ಹಣ್ಣುಗಳಲ್ಲಿ ಒಂದನ್ನು ಕೊಟ್ಟಳು.
ನಂತರ, ಊಟಕ್ಕೆ ಬಂದ ಪತಿ ಪರಮದತ್ತನಿಗೆ ಪುನೀತಾವತಿ ಉಳಿದಿದ್ದ ಒಂದು ಮಾವಿನಹಣ್ಣನ್ನು ಬಡಿಸುತ್ತಾಳೆ. ಪರಮದತ್ತನು, ಮಾವು ತುಂಬಾ ಸಿಹಿಯಾಗಿದೆ. ಇನ್ನೊಂದು ಕೊಡು ಎಂದು ಕೇಳುತ್ತಾನೆ. ಪುನೀತಾವತಿ ಪತಿಯನ್ನು ನಿರಾಸೆಗೊಳಿಸಬಾರದೆಂದು ಶಿವನನ್ನು ಪ್ರಾರ್ಥಿಸುತ್ತಾಳೆ. ಒಂದು ಮಾವಿನಹಣ್ಣಿನ ಕೈಗೆ ಬಂದು ಬೀಳುತ್ತದೆ. ಅದನ್ನು ಪತಿಗೆ ಬಡಿಸುತ್ತಾಳೆ. ಪರಮದತ್ತನು, ಈ ಮಾವು ಕೂಡ ಸಿಹಿಯಾಗಿದೆ ಎಂದು ಹೇಳಿದಾಗ, ಪತಿಗೆ ಸತ್ಯವನ್ನು ಹೇಳುತ್ತಾಳೆ. ಇದನ್ನು ನಂಬದ ಪತಿ ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾನೆ. ಆಗ ಪತಿಯ ಎದುರೇ ತನ್ನ ಪವಾಡವನ್ನು ಪುನೀತಾವತಿ ಸಾಭೀತುಪಡಿಸುತ್ತಾಳೆ. ಇದರಿಂದ ಆಶ್ಚರ್ಯಗೊಂಡ ಪರಮದತ್ತ, ನೀನು ದೈವಿಕ ಅಂಶದವಳು. ನಿನ್ನ ಜೊತೆ ಬಾಳುವ ಅರ್ಹತೆ ನನಗಿಲ್ಲ ಎಂದು ಮನೆಬಿಟ್ಟು ಹೊರಟು ಹೋಗುತ್ತಾನೆ. ವಾಪಸ್ ಬರದೇ ಪಾಂಡ್ಯ ಸಾಮ್ರಾಜ್ಯದಲ್ಲಿ ಹೊಸ ಕುಟುಂಬದೊಂದಿಗೆ ಜೀವನ ಸಾಗಿಸುತ್ತಾನೆ. ವರ್ಷಗಳ ನಂತರ ಈ ವಿಚಾರವನ್ನು ಅರಿತ ಪುನೀತಾವತಿ, ಹೊಸ ದಂಪತಿಗಳಿಗೆ ಆಶೀರ್ವಾದ ಮಾಡುತ್ತಾರೆ. ಕೊನೆಗೆ ಲೌಕಿಕ ಜೀವನವನ್ನು ತ್ಯಜಿಸಿ ತನ್ನನ್ನು ತಾನು ಶಿವಭಕ್ತಿಯಲ್ಲಿ ಸಮರ್ಪಿಸಿಕೊಳ್ಳುತ್ತಾಳೆ. ಭಕ್ತಿ ಸ್ತುತಿಗಳನ್ನು ರಚಿಸುತ್ತಾಳೆ. ಶಿವನ ವಾಸಸ್ಥಾನವಾದ ಕೈಲಾಸ ಪರ್ವತಕ್ಕೆ ತೀರ್ಥಯಾತ್ರೆಗೆ ಹೋಗುತ್ತಾಳೆ. ಪುನೀತಾವತಿಯ ಸಮರ್ಪಣೆಯಿಂದ ಸಂತಸಗೊಂಡ ಭಗವಂತ ಆಕೆಯನ್ನು “ಅಮ್ಮೈಯೆ” (ಅಂದರೆ ತಾಯಿ) ಎಂದು ಕರೆಯುತ್ತಾರೆ.
ಭಗವಾನ್ ಶಿವನ ಭಕ್ತರ ಈ ಕಥೆಗಳು ಶುದ್ಧ ಭಕ್ತಿ ಮತ್ತು ಅಚಲ ನಂಬಿಕೆಯು ಎಲ್ಲಾ ಮಿತಿಗಳನ್ನು ಮೀರಿದೆ. ದೇವರಿಂದ ಮಿತಿಯಿಲ್ಲದ ಅನುಗ್ರಹವನ್ನು ಭಕ್ತರು ಗಳಿಸುತ್ತಾರೆಂಬುದಕ್ಕೆ ಈ ಕಥೆಗಳು ನಿದರ್ಶನ. ನಿಜವಾದ ಆಧ್ಯಾತ್ಮಿಕ ಪ್ರೀತಿಯ ಮತ್ತು ಭಕ್ತಿ ಸಮರ್ಪಣೆಯ ಹಾದಿಯಲ್ಲಿ ನಡೆಯಲು ಅವರು ಪ್ರೇರಕ ಶಕ್ತಿಯಾಗಿದ್ದಾರೆ. ಇದನ್ನೂ ಓದಿ: ಮಹಾ ಶಿವರಾತ್ರಿ: ಆಡಂಬರವಿಲ್ಲ, ಅಲಂಕಾರ ಪ್ರಿಯನಲ್ಲ.. ಭಕ್ತಿಯಿಂದ ಭಜಿಸಿ ಶಿವನ