ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಅವರ ನೆನಪಿನಾರ್ಥಕವಾಗಿ ಇಂದು ಅಭಿಮಾನಿಗಳಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಣ್ಣ, ಸಹಕರಿಸಿದ ಅಭಿಮಾನಿಗಳು, ಸರ್ಕಾರ, ಪೊಲೀಸರಿಗೆ ಕುಟುಂಬಸ್ಥರ ಪರವಾಗಿ ಧನ್ಯವಾದವನ್ನು ಹೇಳಿದ್ದಾರೆ. ತಾವೆಲ್ಲರೂ ಬಂದು ಅಪ್ಪು ಆಸೆಯನ್ನು ಈಡೇರಿಸಿದ್ದೀರಿ. ಆದರೆ ಒಂದು ದುಃಖವೆಂದರೆ ಈ ರೀತಿ ಮಾಡಬೇಕಾಯಿತಲ್ಲ ಎನ್ನುವ ಬೇಸರ ನಮಗೆ ಇದೆ. ನನ್ನ ತಮ್ಮನಿಗೆ ಹೋಗುವಂತಹ ವಯಸ್ಸು ಆಗಿರಲಿಲ್ಲ. 46 ವರ್ಷಕ್ಕೆ ನನ್ನ ತಮ್ಮ ದೇವರಿಗೆ ತುಂಬಾ ಇಷ್ಟ ಆಗಿಬಿಟ್ಟ ಅನ್ನಿಸುತ್ತದೆ. ಆದರೆ ದೇವರು ಅವನನ್ನು ಕರೆದುಕೊಂಡು ಬಿಟ್ಟ. ತಂದೆ-ತಾಯಿ, ಜೊತೆಲಿ ಇರಲಿ ಎಂದು ಕರೆದುಕೊಂಡು ಬಿಟ್ಟಿದ್ದಾನೆ ಎಂದು ಹೇಳುತ್ತಾ ಭಾವುಕರಾಗಿದ್ದಾರೆ. ಇದನ್ನೂ ಓದಿ: ಅನ್ನ ಸಂತರ್ಪಣೆ ವೇಳೆ ಪುನೀತ್ ನೆನೆದು ಕಣ್ಣೀರಿಟ್ಟ ಅಶ್ವಿನಿ
ಎಲ್ಲರಿಗೂ ನೋವು ಆಗಿರುತ್ತದೆ. ಹೀಗೆ ಊಟ ಮಾಡಬೇಕಲ್ಲಾ ಎಂದು, ಆದರೂ ತಾವು ಎಲ್ಲರೂ ಬಂದು ಈ ಅನ್ನಸಂತರ್ಪಣೆಯಲ್ಲಿ ಸಹಕರಿಸಿದ್ದೀರಿ. ನಿಮ್ಮ ಆಶೀರ್ವಾದ ನಮಗೆ ಬೇಕು. ಈ ಪ್ರೀತಿ ವಿಶ್ವಾಸ ಯಾವಾಗಲೂ ನಮ್ಮ ಮನಸ್ಸಿನಲ್ಲಿ ಇರುತ್ತದೆ. ನಾನು ಜೋಗಿ ಪಾತ್ರ ಮಾಡಿದಂತೆ ತಮ್ಮೆಲ್ಲರ ಪ್ರೀತಿಯನ್ನು ಜೋಳಿಗೆಯಲ್ಲಿ ಇಟ್ಟುಕೊಂಡು ಪೂಜಿಸುತ್ತೇನೆ. ನಿಮ್ಮ ಸಹಕಾರಕ್ಕೆ ಧನ್ಯವಾದ ಎಂದು ಶಿವಣ್ಣ ಭಾವುಕರಾಗಿಯೇ ಹೇಳಿದ್ದಾರೆ. ಇದನ್ನೂ ಓದಿ: ಖುದ್ದು ರಕ್ತದಾನ ಮಾಡಿ ಮಾದರಿಯಾದ ನಟ ಶಿವರಾಜ್ ಕುಮಾರ್
ಸದ್ಯ 27 ಸಾವಿರ ಜನರು ಬಂದು ಊಟ ಮಾಡಿ ಹೋಗಿದ್ದಾರೆ. ಹೊರಗಡೆ ನಾಲ್ಕು ಸಾವಿರ ಜನ ಇದ್ದಾರೆ. ಅವರಿಗೆ ಊಟದ ವ್ಯವಸ್ಥೆ ಇರುತ್ತದೆ. ಖಾಲಿ ಆಗಿರೋ ಖಾದ್ಯಗಳನ್ನ ಮತ್ತೆ ಮಾಡಿಕೊಳ್ಳಲಾಗಿದೆ. ಹೊರಗಡೆ ಇರೋ ಜನ ಬಂದು ಊಟ ಮಾಡಿ ಹೋದರೆ ಒಟ್ಟು 32 ಸಾವಿರ ಜನ ಊಟ ಮಾಡಿದಂತೆ ಆಗುತ್ತದೆ. ಗ್ರೌಂಡನಲ್ಲಿ ಇರುವ ಎಲ್ಲಾರಿಗೂ ಕಡೆ ತನಕ ಊಟ ಬಡಿಸಲಾಗುತ್ತದೆ. ಇಲ್ಲಿ ತನಕ ಏಳು ಏಳು ರೌಂಡ್ ಊಟ ಬಡಿಸಲಾಗಿದೆ.