ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivraj Kumar) ಭಾರತೀಯ ಸಿನಿಮಾ ರಂಗದಲ್ಲೇ ಹೆಚ್ಚು ಬ್ಯುಸಿ ಇರುವಂತಹ ನಟ. ಒಂದು ಅಂದಾಜಿನ ಪ್ರಕಾರ ಇನ್ನೂ ಹತ್ತು ವರ್ಷಕ್ಕೆ ಆಗುವಷ್ಟು ಸಿನಿಮಾಗಳನ್ನು ಶಿವಣ್ಣ ಒಪ್ಪಿಕೊಂಡಿದ್ದಾರೆ ಎನ್ನುವುದು ಗಾಂಧಿನಗರದ ಮಾತು. ನಿರಂತರವಾಗಿ ಕನ್ನಡ ಸಿನಿಮಾಗಳನ್ನೇ ಮಾಡುತ್ತಾ ಬಂದಿರುವ ಅವರು, ಇದೀಗ ಪರಭಾಷೆಯಲ್ಲೂ ಬ್ಯುಸಿಯಾಗುತ್ತಿದ್ದಾರೆ. ಎರಡು ತಮಿಳು (Tamil) ಮತ್ತು ಒಂದು ತೆಲುಗು ಚಿತ್ರವನ್ನು ಅವರು ಒಪ್ಪಿಕೊಂಡಿದ್ದಾರೆ.
ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ ಹೊಸ ಸಿನಿಮಾದಲ್ಲಿ ಈಗಾಗಲೇ ಶಿವರಾಜ್ ಕುಮಾರ್ ನಟಿಸಿ ಬಂದಿದ್ದು, ಮತ್ತೋರ್ವ ತಮಿಳು ನಟ ಧನುಷ್ (Dhanush) ಅವರ ಚಿತ್ರಕ್ಕೂ ಅವರು ಸಹಿ ಮಾಡಿದ್ದಾರೆ. ಎರಡೂ ಸಿನಿಮಾದಲ್ಲೂ ಅವರು ಪ್ರಮುಖ ಪಾತ್ರವನ್ನೇ ನಿರ್ವಹಿಸುತ್ತಿದ್ದಾರೆ. ಈ ನಡುವೆ ತೆಲುಗು ಸಿನಿಮಾವನ್ನು ಒಪ್ಪಿಕೊಂಡಿರುವುದಾಗಿ ಸ್ವತಃ ಶಿವರಾಜ್ ಕುಮಾರ್ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: `ತೂತು ಮಡಿಕೆ’ ನಂತರ ಮತ್ತೆ ಆ್ಯಕ್ಷನ್ ಕಟ್ ಹೇಳೋಕೆ ಚಂದ್ರ ಕೀರ್ತಿ ರೆಡಿ
ಈ ವಯಸ್ಸಲ್ಲೂ ಶಿವರಾಜ್ ಕುಮಾರ್ ನಿರಂತರವಾಗಿ ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ಯುವ ನಟರಿಗೆ ಮಾದರಿ ಆಗುತ್ತಿದ್ದಾರೆ. ಅಲ್ಲದೇ, ಅವರು ಒಪ್ಪಿಕೊಂಡ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನೇ ನಿರ್ವಹಿಸುತ್ತಿದ್ದಾರೆ. ಈ ಕಾರಣದಿಂದಾಗಿಯೇ ಇನ್ನೂ ಹಲವು ವರ್ಷಗಳ ಕಾಲ ಶಿವರಾಜ್ ಕುಮಾರ್ ಬುಕ್ ಆಗಿದ್ದಾರೆ. ಈಗಾಗಲೇ 125ನೇ ಸಿನಿಮಾವನ್ನು ಪೂರೈಸಿರುವ ಶಿವರಾಜ್ ಕುಮಾರ್, ಅತೀ ವೇಗದಲ್ಲೇ ಸೆಂಚ್ಯುರಿ ಕೂಡ ಹೊಡೆದಿದ್ದರು.
ಸಿನಿಮಾಗಳಲ್ಲಿ ನಟನೆಯ ಜೊತೆ ಜೊತೆಗೆ ತಮ್ಮದೇ ನಿರ್ಮಾಣ ಸಂಸ್ಥೆಯನ್ನೂ ಶುರು ಮಾಡಿದ್ದಾರೆ. ಈ ಸಂಸ್ಥೆಯ ಮೂಲಕ ವರ್ಷಕ್ಕೆ ಹಲವು ಸಿನಿಮಾಗಳನ್ನು ತಯಾರಿಸುವ ಗುರಿಯನ್ನೂ ಹೊಂದಿದ್ದಾರೆ. ಕೇವಲ ಸಿನಿಮಾಗಳನ್ನು ಮಾತ್ರವಲ್ಲ, ವೆಬ್ ಸೀರಿಸ್ ಅನ್ನು ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಈ ಸಂಸ್ಥೆಯನ್ನು ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ನಿರ್ವಹಿಸಲಿದ್ದಾರೆ.