ಇತ್ತೀಚಿನ ದಿನಗಳಲ್ಲಿ ಮನುಷ್ಯ ಮನುಷ್ಯನ ಜೊತೆ ಬೆರೆಯುವುದಕ್ಕಿಂತ ಹೆಚ್ಚಾಗಿ ಪ್ರಾಣಿಗಳ ಜೊತೆಯಲ್ಲೇ ಬೆರೆಯುತ್ತಿದ್ದಾನೆ. ಅದರಲ್ಲೂ ನಾಯಿಗಳ ನಡುವೆ ಹೆಚ್ಚು ಬಾಂಧವ್ಯ ಹೊಂದುತ್ತಿದ್ದಾರೆ. ಇಷ್ಟವಾದ ನಾಯಿಗೆ ಲಕ್ಷ ಕೊಡುವುದಕ್ಕೂ ಹಿಂದೆ ಮುಂದೆ ನೋಡಲ್ಲ. ನಾಯಿಯೊಂದನ್ನು ತಂದು, ಮುದ್ದಾದ ಹೆಸರನ್ನಿಟ್ಟು ಸಿಕ್ಕ ಸಮಯವನ್ನು ಅದರೊಟ್ಟಿಗೆ ಕಳೆಯುತ್ತಾರೆ. ಇದೀಗ ಚಂದನವನದಲ್ಲಿ ಅದೇ ಪ್ರೀತಿಯನ್ನು ಆಧಾರವಾಗಿಟ್ಟುಕೊಂಡು ಸಿನಿಮಾವೊಂದು ಸಿದ್ಧವಾಗಿದೆ. ಬಹಳ ವರ್ಷಗಳ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಮನುಷ್ಯ ಹಾಗು ಸಾಕು ಪ್ರಾಣಿ ಸಂಬಂಧ ಅನಾವರಣಗೊಳ್ಳುತ್ತಿದೆ. ಅದೇ ‘ನಾನು ಮತ್ತು ಗುಂಡ’.
ಸಿನಿಮಾ ತನ್ನ ಫಸ್ಟ್ ಲುಕ್, ಟೀಸರ್ ನಿಂದಲೇ ಸಾಕಷ್ಟು ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಶ್ವಾನವನ್ನೇ ಮುಖ್ಯ ಪಾತ್ರದಾರಿಯನ್ನಾಗಿಸಿಕೊಂಡು ಹೆಣೆದಿರುವ ಕಥೆಯಿದಾಗಿದೆ. ಹೀಗಾಗಿ ನಾಯಿಯೇ ಪ್ರಮುಖ ಪಾತ್ರ ಮಾಡಿರುವ ಕಾರಣ ಸಿನಿಮಾದ ಬಗ್ಗೆ ವಿಶೇಷ ಕುತೂಹಲ ಎಲ್ಲರಲ್ಲೂ ಕೆರಳಿದೆ.
ಎಲ್ಲಾ ವರ್ಗದ ಜನರು ನೋಡುವಂತಹ ಮನುಷ್ಯ ಹಾಗು ಪ್ರಾಣಿಗಳ ನಡುವಿನ ಭಾವನಾತ್ಮಕ ಸಂಬಂಧ ಬೆಸೆಯುವ ಅದ್ಭುತ ಚಿತ್ರವೆಂದು ಅದು ಬಣ್ಣಿಸಿದೆ. ಅಪರೂಪದ ಪ್ರಯೋಗಗಳನ್ನು ಬೆಂಬಲಿಸುವ ಅಂತಹ ಚಿತ್ರಗಳನ್ನು ವಿತರಿಸಿ ಯಶಸ್ಸು ಕಂಡಿರುವ ಮೈಸೂರು ಟಾಕೀಸ್‍ನ ಜಾಕ್ ಮಂಜು ಅವರು ‘ನಾನು ಮತ್ತು ಗುಂಡ’ ಚಿತ್ರವನ್ನು ನೋಡಿ ಮೆಚ್ಚಿ ವಿತರಣೆಗೆ ಮುಂದಾಗಿದ್ದಾರೆ.
ಈ ಹಿಂದೆ ಯು ಟರ್ನ್, ಒಂದು ಮೊಟ್ಟೆಯ ಕಥೆ, ಗಂಟು ಮೂಟೆ ಸೇರಿದಂತೆ ಹಲವು ವಿಶಿಷ್ಠ ಬಗೆ ಸಿನಿಮಾಗಳನ್ನ ವಿತರಿಸಿ, ಯಶಸ್ಸು ಕಂಡಿರುವ ಜಾಕ್ ಮಂಜು, ಈ ವರ್ಷದ ಆರಂಭದಲ್ಲೇ ನಾನು ಮತ್ತು ಗುಂಡ ಚಿತ್ರವನ್ನು ವಿತರಣೆಗೆ ತೆಗೆದುಕೊಂಡು, ಈ ಚಿತ್ರದ ಮೇಲೆ ತುಂಬಾ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ನಾನು ಮತ್ತು ಗುಂಡ ಚಿತ್ರತಂಡ ಈ ಮೂಲಕ ಭರ್ಜರಿ ಪ್ರಚಾರವನ್ನು ಆರಂಭಿಸಿದ್ದು, ಸದ್ಯದಲ್ಲೇ ಚಿತ್ರದ ಕುರಿತಂತೆ ಮತ್ತಷ್ಟು ವಿಶೇಷ ವಿಚಾರಗಳನ್ನು ಹಿಂಚಿಕೊಳ್ಳುವ ಧಾವಂತದಲ್ಲಿದೆ. ಇದೀಗ ನಾನು ಮತ್ತು ಗುಂಡ ಚಿತ್ರದ ಟ್ರೈಲರ್ ಬಿಡುಗಡೆಗೆ ದಿನಾಂಕ ಪ್ರಕಟಿಸುವ ಸನ್ನಾಹದಲ್ಲಿದೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ, ಸಂಯುಕ್ತ ಹೊರನಾಡು ಹಾಗು ಸಿಂಬಾ ಅನ್ನುವ ಶ್ವಾನ ಅಭಿಯನದ ಚಿತ್ರ ಇದಾಗಿದೆ. ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದಲ್ಲಿ ಪೊಯಂ ಪಿಕ್ಚರ್ಸ್ ಬ್ಯಾನರ್ಸ್ ನಡಿ ಗಾಂಧಿಗಿರಿ ಚಿತ್ರದ ನಿರ್ದೇಶಕ ರಘು ಹಾಸನ್ ಅವರು ನಿರ್ಮಿಸಿರುವ ಚಿತ್ರ ಇದಾಗಿದೆ. ಚಿತ್ರಕ್ಕೆ ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದರೆ, ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.