ಬೆಂಗಳೂರು : ಈಗ ಕನ್ನಡ ಚಿತ್ರರಂಗದಲ್ಲಿ ಸಿದ್ಧಸೂತ್ರಗಳ ಚಿತ್ರಗಳ ಭರಾಟೆಯ ನಡುವೆಯೂ ಹೊಸಾ ಅಲೆಯ ಸಿನಿಮಾಗಳು ಸದ್ದು ಮಾಡುತ್ತಿವೆ. ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿಯೇ ಇಂಥಾ ವಿಶೇಷವಾದ ಕಥೆ ಹೇಳೋ ಕಲೆಗಾರಿಕೆಯೂ ಆಗಾಗ ಪ್ರದರ್ಶನವಾಗುತ್ತಲೇ ಬಂದಿದೆ. ಇದೀಗ ಅದೇ ರೀತಿಯ ವಿಶೇಷತೆ ಹೊಂದಿರೋ ಕಥೆ, ಪ್ರಯೋಗಾತ್ಮಕ ಅಂಶಗಳೊಂದಿಗೆ ಮೂಡಿ ಬಂದಿರೋ ಚಿತ್ರ ನಾನು ಮತ್ತು ಗುಂಡ. ಈ ಹಿಂದೆ ಮೊದಲ ಟೀಸರ್ ಮೂಲಕ ಗಮನ ಸೆಳೆದಿದ್ದ ಈ ಚಿತ್ರದ ಮತ್ತೊಂದು ಟೀಸರ್ ಬಿಡುಗಡೆಯಾಗಿದೆ.
ಇದು ಆಟೋ ಶಂಕ್ರ ಮತ್ತು ಮುದ್ದಾದ ನಾಯಿಯ ಸುತ್ತ ಸುತ್ತೋ ಭಾವನಾತ್ಮಕ ಕಥೆಯ ಚಿತ್ರ. ಸಿನಿಮಾ ಅಂದಾಕ್ಷಣ ಸಿದ್ಧ ಸೂತ್ರದ ಕಲ್ಪನೆ ಸುಳಿದಾಡೋ ಹೊತ್ತಿನಲ್ಲಿಯೇ ನಾನು ಮತ್ತು ಗುಂಡ ಟೀಸರ್ ಬೇರೆಯದ್ದೇ ಹೊಳಹು ನೀಡುವ ಮೂಲಕ ಬಹು ನಿರೀಕ್ಷಿತ ಚಿತ್ರವಾಗಿ ಅನಾವರಣಗೊಂಡಿದೆ. ಮೊದಲ ಟೀಸರ್‍ನಲ್ಲಿಯೇ ಇದು ನಾಯಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಕಥನದ ಚಿತ್ರವೆಂಬುದು ಜಾಹೀರಾಗಿತ್ತು. ಈ ಎರಡನೇ ಟೀಸರ್‍ನಲ್ಲಿ ಅದು ಮತ್ತಷ್ಟು ತೀವ್ರವಾಗಿ ಅನಾವರಣಗೊಂಡು ಕಥೆಯ ಒಂದಷ್ಟು ಬೇರೆ ಆಯಾಮಗಳನ್ನೂ ಕಾಣಿಸಿದೆ.
ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆಆರ್ ಪೇಟೆ ನಟಿಸಿದ್ದಾರೆ. ಅವರು ಮತ್ತು ಮುದ್ದಾದ ನಾಯಿ ಈ ಸಿನಿಮಾ ಕೇಂದ್ರಬಿಂದುಗಳು. ಸಂಯುಕ್ತಾ ಹೊರನಾಡು ನಾಯಕಿಯಾಗಿ ನಟಿಸಿದ್ದಾರೆ. ಇಲ್ಲಿ ಇನ್ನೂ ಒಂದಷ್ಟು ಪಾತ್ರಗಳು ಶಿವರಾಜ್‍ಗೆ ಸಾಥ್ ಕೊಟ್ಟಿವೆ. ಕಾಮಿಡಿ ಕಿಲಾಡಿಗಳು ಶೋ ವಿನ್ನರ್ ಆದ ನಂತರ ಶಿವರಾಜ್ ಬಹು ಬೇಡಿಕೆಯ ಕಾಮಿಡಿ ನಟನಾಗಿ ಬ್ಯುಸಿಯಾಗಿದ್ದಾರೆ. ಆದರೆ ಆ ಶೋನ ಮುಕ್ತಾಯದ ಕ್ಷಣಗಳಲ್ಲಿಯೇ ಶುರುವಾಗಿದ್ದ ಚಿತ್ರ ನಾನು ಮತ್ತು ಗುಂಡ. ಇನ್ನೇನು ಶೀಘ್ರದಲ್ಲಿಯೇ ತೆರೆಗಾಣಲಿರೋ ಈ ಚಿತ್ರವೀಗ ಎರಡನೇ ಟೀಸರ್ ಮೂಲಕ ಮತ್ತಷ್ಟು ಜನರನ್ನು ತಲುಪಿಕೊಂಡಿದೆ.