ಫುಲ್ ಟೈಯರ್ಡ್ ಆಗಿದೆ, ಸ್ವಲ್ಪ ದೇಹ ದಂಡನೆ ಮಾಡ್ಬೇಕು, ಎಲ್ಲಾದ್ರೂ ಸ್ವಲ್ಪ ಬೆಟ್ಟ ಹತ್ತಬೇಕು, ನೀವು ಅಂದುಕೊಂಡಿದ್ದು ಆಗುತ್ತೋ ಇಲ್ವೋ ಅನ್ನೋದನ್ನೂ ತಿಳ್ಕೋಬೇಕು, ಶಿವರಾತ್ರಿ ಇರುವುದರಿಂದ ಶಿವನ ಧ್ಯಾನ ಮಾಡಬೇಕು, ಗಂಗಾ ಮಾತೆಯ ನೀರನ್ನೂ ಸ್ಪರ್ಷಿಸಬೇಕು, ಒಂದಿಷ್ಟು ಟ್ರೆಕ್ಕಿಂಗ್ ಮಾಡಬೇಕು, ಹದ್ದಿನ ಕಣ್ಣಿನಂತೆ ಆಕಾಶದಿಂದ ಭೂಮಿಯನ್ನ ನೋಡಬೇಕು, ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ಆಸೆಗಳು ಬೆಂಗಳೂರಿನಲ್ಲಿ ಕೆಲಸ ಮಾಡೋರಿಗೆ ಇದ್ದೆ ಇರುತ್ತೆ. ಆದ್ರೆ, ಇಷ್ಟೆಲ್ಲ ಒಂದೇ ಕಡೆ ಸಿಕ್ರೇ ಹೇಗಿರುತ್ತೆ? ಅಯ್ಯೋ ಸ್ವರ್ಗಕ್ಕೆ ಮೂರೇ ಗೇಣು ಅಂತಾ ನಿಮ್ಮ ಮನಸ್ಸಲ್ಲಿ ಈಗಾಗಲೇ ಬಂದಿರುತ್ತೆ. ಇವತ್ತು ನಿಮಗಿಷ್ಟವಾಗೋ ಜಾಗಕ್ಕೆನೆ ಕರೆದುಕೊಂಡು ಹೋಗ್ತಿದ್ದೀನಿ. ಮೇಲೆ ಹೇಳಿದ ನಿಮ್ಮೆಲ್ಲ ಆಸೆಗಳನ್ನ ಒಂದೇ ಜಾಗ ಈಡೇರಿಸುತ್ತೆ. ಅಂತಹ ಜಾಗಕ್ಕೆ ಕರೆದೊಯ್ಯುತ್ತೇನೆ. ಬನ್ನಿ ನನ್ನೊಂದಿಗೆ.
ಯೆಸ್.. ಬೆಂಗಳೂರಿನಿಂದ ಕೇವಲ 54 ಕಿಮೀ ಅಷ್ಟೇ. ಆರಾಮಾಗಿ ಬೈಕ್‍ನಲ್ಲೇ ಹೋಗಬಹುದು. ಅಂತಹ ಜಾಗಕ್ಕೆ ನಿಮ್ಮ ಕರೆದುಕೊಂಡು ಹೋಗ್ತಿದ್ದೀನಿ. ಬೈಕ್ ತಗೊಂಡು ನೇರವಾಗಿ ತುಮಕೂರು ಹೈವೇಗೆ ಬನ್ನಿ. ತುಮಕೂರಿನ ಕಡೆ ಬೈಕ್ ಶುರು ಮಾಡಿ ಹೊರಟೇ ಬಿಡಿ. ಹೀಗೆ ಒಂದ್ ಮುಕ್ಕಾಲು ಗಂಟೆ ಆಗ್ತಿದ್ದ ಹಾಗೆ, ನಿಮಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಾಬಸ್ ಪೇಟೆ ಅಂತಾ ಜಾಗ ಬರುತ್ತೆ. ಅಲ್ಲಿ ನಿಮ್ಮ ಬೈಕ್‍ನ್ನ ಎಡಕ್ಕೆ ತಿರುಗಿಸಿ, 6 ಕಿಮೀ ದೂರ ಚಲಿಸಿ. ಅಲ್ಲಿಗೆ ನಾನು ಹೇಳಿದ ಜಾಗ ಬಂದೆ ಬಿಡುತ್ತೆ. ಅದುವೇ ಶಿವಗಂಗೆ ಬೆಟ್ಟ.
Advertisement
Advertisement
ದಾಬಸ್‍ಪೇಟೆಗೆ ಬರ್ತಾ ಇದ್ದಂತೆ ನಿಮಗೆ ದೂರದಿಂದ ಶಿವಗಂಗೆ ಬೆಟ್ಟ ಕಾಣಿಸುತ್ತೆ. ತುಂಬ ಜನರಿಗೆ ಅಯ್ಯೋ ಇದಾ ಗೊತ್ತು ಬಿಡಿ ಅನ್ನಬೇಡಿ. ನಿಮಗೆ ಶಿವಗಂಗೆ ಬೆಟ್ಟದ ಬಗ್ಗೆ ಗೊತ್ತಿರಬಹುದು. ಈ ಜಾಗಕ್ಕೆ ಹೋಗಿರಲೂಬಹುದು. ಆದ್ರೆ, ಈ ಜಾಗಕ್ಕಿರುವ ಪೌರಾಣಿಕೆ ಹಿನ್ನೆಲೆ ಗೊತ್ತಾ? ನಿಮಗೆ ಗೊತ್ತಿರಲಾರದ ಒಂದಿಷ್ಟು ವಿಷ್ಯಗಳನ್ನ ಇವತ್ತು ನಿಮಗೆ ತಿಳಿಸುತ್ತೇನೆ.
Advertisement
ದಕ್ಷಿಣ ಕಾಶಿ:
ಶಿವಗಂಗೆ ಕ್ಷೇತ್ರವನ್ನು ‘ದಕ್ಷಿಣ ಕಾಶಿ’ ಅಂತಾನೂ ಕರೆಯುತ್ತಾರೆ. ಒಂದೊಂದು ದಿಕ್ಕಿನಿಂದ ಒಂದೊಂದು ಆಕಾರದಲ್ಲಿ ಶಿವಗಂಗೆ ಬೆಟ್ಟ ಕಾಣಿಸುತ್ತೆ. ಶಿವಗಂಗೆ ಬೆಟ್ಟವನ್ನು ಉತ್ತರದಿಂದ ನೋಡಿದರೆ ಸರ್ಪದಂತೆಯೂ, ದಕ್ಷಿಣದಿಂದ ಗಣೇಶನಂತೆಯೂ, ಪೂರ್ವದಿಂದ ನಂದಿಯಂತೆಯೂ, ಪಶ್ಚಿಮದಿಂದ ಲಿಂಗದಂತೆಯೂ ಕಾಣುವುದೆ ಈ ಕ್ಷೇತ್ರದ ವಿಶೇಷ.
Advertisement
ಹೀಗೆ ಶಿವಗಂಗೆಗೆ ಹೋಗಿ ತಲುಪಿದ ತಕ್ಷಣ ನಿಮಗೆ ಪಾರ್ಕಿಂಗ್ ಮಾಡಲು ಒಂದು ಜಾಗವಿದೆ. ಅಲ್ಲಿ ನಿಮ್ಮ ವಾಹನ ಪಾರ್ಕ್ ಮಾಡಿ, ಅಲ್ಲೆ ಸಾಲಾಗಿ ಅಂಗಡಿಗಳಿವೆ, ಅಲ್ಲಿ ಒಂದಿಷ್ಟು ಪೂಜೆಗಾಗಿ ಹೂವು ಹಣ್ಣು ಸಿಗುತ್ತೆ. ಅದನ್ನ ತಗೊಳ್ಳಿ. ಅಲ್ಲೆ ಹತ್ತಿರದಲ್ಲೇ ಒಂದು ಹೊಂಡ ಇದೆ. ಆ ಹೊಂಡವನ್ನ ನೋಡಿ ಆಮೇಲೆ ಬೆಟ್ಟದ ಕಡೆದ ಬನ್ನಿ.
ತುಪ್ಪವೇ ಬೆಣ್ಣೆಯಾಗುವ ಪವಾಡ.
ಯೆಸ್, ಈಗ ಬೆಟ್ಟ ಹತ್ತುವ ಕೆಲಸ ಮಾಡೋಣ, ಆದ್ರೆ ನಿಮ್ಮ ಕೈಯಲ್ಲಿ ಚೀಲಗಳಿದ್ದರೆ ಹುಷಾರು. ಇಲ್ಲಿ ಮಂಗಗಳು ನಿಮ್ಮ ಬ್ಯಾಗ್‍ಗಳನ್ನ ಕಿತ್ತುಕೊಳ್ಳುತ್ತದೆ. ಹಾಗಾಗಿ ಬೆನ್ನಿಗೆ ಹಾಕಿಕೊಳ್ಳುವ ಬ್ಯಾಗ್‍ಗಳಿದ್ದರೆ ಉತ್ತಮ. ಈಗ ಬೆಟ್ಟ ಹತ್ತಲು ಶುರು ಮಾಡಿದಾಗ ಮೊದಲು ನಿಮಗೆ ಗಂಗಾಧರೇಶ್ವರನ ದೇವಾಲಯ ಸಿಗುತ್ತೆ. ಈ ದೇವಸ್ಥಾನಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಗಣೇಶನ ದೇಗುಲವೂ ಇದೆ. ಗಂಗಾಧರೇಶ್ವರ ದೇವಾಲಯ ಬೆಟ್ಟದ ಆರಂಭದಲ್ಲೇ ಇದೆ. ಇಲ್ಲಿ ಉದ್ಭವ ಶಿವಲಿಂಗವಿದೆ. ಇಲ್ಲಿ ಪ್ರಪಂಚದ ಅದ್ಭುತವೊಂದು ನಡೆಯುತ್ತೆ. ನಾವೆಲ್ಲ ನೋಡಿರೋದು ಬೆಣ್ಣೆಯಿಂದ ತುಪ್ಪ ಬರುತ್ತೆ ಅಂತಾ. ಆದ್ರೆ, ಇಲ್ಲಿ ಶಿವ ಲಿಂಗದ ಮೇಲೆ ತುಪ್ಪವನ್ನ ಹಾಕಿದರೆ ಅದು ಬೆಣ್ಣೆಯಾಗಿ ಪರಿವರ್ತನೆ ಆಗುತ್ತೆ. ಇದೊಂದು ನಿಜಕ್ಕೂ ಅಸಕ್ತಿದಾಯಕ ಪವಾಡ. ಅದರಲ್ಲೂ ಅಭಿಷೇಕದ ಸಮಯದಲ್ಲಿ ಭಕ್ತರು ಈ ಪವಾಡವನ್ನು ನೋಡಬಹುದು. ಅಷ್ಟೇ ಅಲ್ಲ ಬೆಣ್ಣೆಯಾಗುವ ಈ ತುಪ್ಪಕ್ಕೆ ಔಷಧೀಯ ಶಕ್ತಿ ಇದೆ ಮತ್ತು ಅನೇಕ ಖಾಯಿಲೆಗಳನ್ನು ಗುಣಪಡಿಸಬಹುದು ಎಂಬುದು ಇಲ್ಲಿ ನಂಬಿಕೆ.
ದೇವಸ್ಥಾನದೊಳಗೆ ಸುರಂಗ:
ಗಂಗಾಧರೇಶ್ವರ ದೇಗುಲದಲ್ಲೇ ಒಂದು ಸುರಂಗವಿದೆ. ಈಗಲೂ ಅದನ್ನ ಕಾಣಬಹುದು. ಈ ಸುರಂಗದಲ್ಲಿ ಮುಂದುವರಿದರೆ ಅದು ಬೆಂಗಳೂರಿನಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಬಂದು ತಲುಪುತ್ತಂತೆ. ಆದ್ರೆ, ಈಗ ಈ ಸುರಂಗದಲ್ಲಿ ಹೋಗಲು ಸಾಧ್ಯವಿಲ್ಲ. ಕಾರಣ ಉಸಿರಾಟದ ಸಮಸ್ಯೆಯಾಗುತ್ತೆ ಮತ್ತು ಸುರಂಗದ ಮಧ್ಯದಲ್ಲಿ ಹಾವುಗಳ ಇರುವ ಸಾಧ್ಯತೆ ಇರುತ್ತೆ. ಅಷ್ಟೇ ಅಲ್ಲ ಈಗ ಕೇವಲ ಸುರಂಗ ನೋಡಬಹುದಷ್ಟೇ ಹೋಗಲು ಮಾತ್ರ ಬಿಡೋದಿಲ್ಲ.
ಅಂದುಕೊಂಡಿದ್ದು ಆಗುತ್ತೋ ಇಲ್ವೋ ಅನ್ನೋದರ ಪರೀಕ್ಷೆ.
ಗಂಗಾಧರೇಶ್ವರ ದೇಗುಲದಲ್ಲಿ ಶಿವನ ದರ್ಶನ ಪಡೆದ ನಂತರ, ಮುಂದೆ ಹಾಗೆ ಬೆಟ್ಟ ಹತ್ತಲು ಆರಂಭ ಮಾಡಿದರೆ, ನಿಮಗೆ ಅಲ್ಲೊಂದು ಕಡಿದಾದ ಕಲ್ಲು ಬಂಡೆ ಸಿಗುತ್ತೆ. ಅದನ್ನ ಏರುವುದಕ್ಕೆ ಮೆಟ್ಟಿಲುಗಳಿವೆ. ಹಿಡಿದುಕೊಳ್ಳಲು ಕಬ್ಬಿಣದ ಸರಳುಗಳನ್ನೂ ಈಗ ಮಾಡಿದ್ದಾರೆ. ಹಾಗೆ ಮೇಲತ್ತಿದಾಗ, ನಿಮ್ಮ ದಣಿವಾರಿಸಿಕೊಳ್ಳೋಕೆ ಅಲ್ಲೊಂದಿಷ್ಟು ಕಬ್ಬಿನ ಹಾಲು, ಸೌತೆಕಾಯಿ, ಚಹಾ, ಕೋಲ್ಡ್ರಿಂಕ್ಸ್ ಹೀಗೆ ನಿಮಗೆ ಬೇಕಾಗಿರುವ ವಸ್ತುಗಳು ಸಿಗುತ್ತೆ. ಸ್ವಲ್ಪ ಸುಧಾರಿಸಿಕೊಂಡು ಮತ್ತೆ ಬೆಟ್ಟ ಏರಲು ಶುರು ಮಾಡಿದರೆ, ಅಲ್ಲೊಂದು ಒಳಕಲ್ಲು ತೀರ್ಥ ಎನ್ನುವ ಮತ್ತೊಂದು ಸ್ಥಳ ಸಿಗುತ್ತೆ. ಇಲ್ಲಿರುವ ಒಳಕಲ್ಲಿನಲ್ಲಿ ವರ್ಷದ 365 ದಿನಗಳೂ ನೀರು ದೊರೆಯುತ್ತೆ. ಆದ್ರೆ, ಇಲ್ಲಿ ನೀವು ಅಂದುಕೊಂಡಿದ್ದು ಈಡೇರುತ್ತೋ ಇಲ್ವೋ ಅನ್ನೋದರ ಅಗ್ನಿ ಪರೀಕ್ಷೆ ಮಾಡಿಕೊಳ್ಳಬಹುದು. ಅದೇನಂದ್ರೆ, ನೀವು ಏನಾದ್ರು ಅಂದುಕೊಂಡು ಅದು ಆಗುತ್ತೋ ಇಲ್ವೋ ಅಂತಾ ತಿಳಿದುಕೊಳ್ಳಲು ಈ ಒಳಕಲ್ಲು ತೀರ್ಥದಲ್ಲಿ ಕೈ ಹಾಕಿದರೆ, ನಿಮ್ಮ ಕೆಲಸ ಆಗುತ್ತೆ ಅನ್ನೋದಾದ್ರೆ ನಿಮ್ಮ ಕೈಗೆ ನೀರು ಸಿಗುತ್ತೆ. ಕೆಲಸ ಆಗೋದಿಲ್ಲ ಅನ್ನೋದಾದ್ರೆ, ನಿಮಗೆ ನೀರು ಸಿಗೋದೆ ಇಲ್ಲ. ಇದು ಇಲ್ಲಿನ ನಂಬಿಕೆ. ತುಂಬ ಜನರ ಅನುಭವದ ಪ್ರಕಾರ ಇದು ಸತ್ಯ ಅಂತಾನೆ ಹೇಳ್ತಾರೆ. ಎಲ್ಲವೂ ಅವರವರ ನಂಬಿಕೆ ಮೇಲೆ ಬಿಟ್ಟದ್ದು. ಈ ಒಳಕಲ್ಲಿನಲ್ಲಿ ವರ್ಷದ 365 ದಿನಗಳೂ ನೀರು ದೊರೆಯುವುದೇ ಒಂದು ಪವಾಡ.
ಬೆಟ್ಟದ ತುದಿಯಲ್ಲಿ ಬೆಳ್ಳಿ ಗಂಟೆಗಳು..
ಹೀಗೆ ಒಳಕಲ್ಲು ತೀರ್ಥ ನೋಡಿ ಮತ್ತೆ ಬೆಟ್ಟ ಏರಲು ಪ್ರಾರಂಭ ಮಾಡಿದರೆ, ಒಂದು ಶಿವಪಾರ್ವತಿಯ ದೇವಸ್ಥಾನವಿದೆ ಅಲ್ಲಿ ದ್ವಾದಶ ಜ್ಯೊತಿರ್ಲಿಂಗವು ಇದೆ. ಕಡಿದಾದ ಬೆಟ್ಟ ಏರಿದ ಬಳಿಕ ಸ್ವಲ್ಪ ಸುಧಾರಿಸಿಕೊಳ್ಳಲು ಅವಕಾಶವಿದೆ. ಇಲ್ಲೂ ಸಹ ನಿಮಗೆ ತಿನ್ನಲು, ಕುಡಿಯಲು ಒಂದಿಷ್ಟು ಸಾಮಗ್ರಿಗಳು ಸಿಗುತ್ವೆ. ಸ್ವಲ್ಪ ಸುಧಾರಿಸಿಕೊಂಡು ಮತ್ತೆ ಕಡಿದಾದ ಬೆಟ್ಟವನ್ನು ಏರುತ್ತಾ ಹೋದರೆ ಎತ್ತರವಾದ ಬಂಡೆಯ ಮೇಲೆ ನಂದಿ ವಿಗ್ರಹ ಕಾಣಿಸುತ್ತೆ. ಈ ನಂದಿವಿಗ್ರಹ ಪ್ರದಕ್ಷಿಣೆ ಹಾಕುವುದೇ ಒಂದು ಸಾಹಸದ ಕೆಲಸ. ಯಾಕಂದ್ರೆ, ಕಾಲು ಇಡಲು ಕೂಡ ಜಾಗ ಚಿಕ್ಕದು ಹಾಗು ಮತ್ತೊಂದು ಕಡೆ ಆಳವಾದ ಪ್ರಪಾತವಿದೆ. ಇಷ್ಟೆಲ್ಲ ಸಾಹ ಮಾಡಿದ ನಂತರ ನೀವು ಬೆಟ್ಟದ ತುತ್ತ ತುದಿ ತಲುಪುವುದಕ್ಕೆ 20 ಹೆಜ್ಜೆಗಳಷ್ಟೇ ಬೇಕು. ಕೊನೆಗೆ ದೇಹ ದಂಡಿಸಿ, ಅಯ್ಯಪ್ಪ ಸಾಕಪ್ಪ ಅಂತಾ ಬೆಟ್ಟದ ತುದಿ ತಲುಪಿದಾಗ ನಿಮ್ಮೆಲ್ಲ ದಣಿವು ಮರೆತು ಹೋಗುತ್ತೆ. ಕಾರಣ ಬೆಟ್ಟದ ಮೇಲಿಂದ ಕಾಣುವ ದೃಶ್ಯವೇ ಹಾಗಿದೆ. ಬೆಟ್ಟದ ಮೇಲೂ ಸಹ ಗಂಗಾಧರೇಶ್ವರ ದೇವಾಲಯವಿದೆ. ಆದ್ರೆ, ಇಲ್ಲಿ ಎಲ್ಲದಕ್ಕಿಂತ ಮತ್ತೊಂದು ಆಕರ್ಷಣೆ ಮತ್ತು ಶಾಕ್ ಕೊಡೋ ದೃಶ್ಯವೆಂದರೆ ಬೆಟ್ಟದ ತುದಿಯಲ್ಲಿ ಕಟ್ಟಿರುವ ಬೆಳ್ಳೀ ಗಂಟೆಗಳು. ಅಯ್ಯೋ ಯಾರಪ್ಪ ಇದನ್ನ ಇಲ್ಲಿ ಕಟ್ಟಿದವರು ಅಂತಾ ಗ್ಯಾರಂಟಿ ನಿಮಗೆ ಅನ್ನಿಸಿರುತ್ತೆ. ಈ ಗಂಟೆಗಳನ್ನು ಕಟ್ಟಿದೋರ್ ಗುಂಡಿಗೆ ಮಾತ್ರ ಸಖತ್ ಆಗಿಯೇ ಗಟ್ಟಿಯಾಗಿರಬೇಕು.
ಶಾಂತಲಾ ಡ್ರಾಪ್..
ಬೆಟ್ಟದ ಮೇಲೆ ನೋಡಬೇಕಾದ ಮತ್ತೊಂದು ಜಾಗ ನಾಟ್ಯ ರಾಣಿ ಶಾಂತಲೆಯು ಕೆಳಗೆ ಬಿದ್ದ ಜಾಗ. ಹಿಂದೆ ಈ ಸ್ಥಳವು ಹೊಯ್ಸಳ ರಾಜರ ನಿಯಂತ್ರಣದಲ್ಲಿತ್ತು ಮತ್ತು ವಿಷ್ಣುವರ್ಧನನ ಪತ್ನಿ ರಾಣಿ ಶಾಂತಲಾ, ಮಗನಿಗೆ ಜನ್ಮ ನೀಡಲಿಲ್ಲ ಎಂಬ ಖಿನ್ನತೆಯಿಂದ, ಈ ಬೆಟ್ಟದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡರು ಎಂಬ ನಂಬಿಕೆ ಇದೆ. ಹಾಗಾಗಿ ಶಾಂತಲಾ ಬಿದ್ದ ಆ ಸ್ಥಳವನ್ನು ಶಾಂತಲಾ ಡ್ರಾಪ್ ಅಂತಾನೆ ಕರೆಯುತ್ತಾರೆ. ಈ ಜಾಗ ಅಷ್ಟೇ ಭಯಾನಕವಾಗಿದೆ, ಹಾಗೂ ನೋಡಲು ಅದ್ಭುತವಾಗಿದೆ. ಈಗ ಕಂಬಿಗಳನ್ನ ಹಾಕಿದ್ದಾರೆ. ಆದ್ರೂ ಈ ಜಾಗಕ್ಕೆ ಹೋಗುವಾಗ ಸ್ವಲ್ಪ ಎಚ್ಚರಿಕೆವಹಿಸಿ.
ದೇವರುಗಳಿಗೆ ವಿವಾಹ ಮಹೋತ್ಸವ.
ಇನ್ನೂ ಬೆಟ್ಟದಿಂದ ಕೆಳಗಿಳಿಯುವಾಗ ನಿಮಗೆ ಇನ್ನೊಂದು ವಿಶೇಷ ದೇವಸ್ಥಾನದ ದರ್ಶನ ಪಡೆಯಬಹುದು. ಬೆಟ್ಟ ಹತ್ತುವಾಗಲೂ ಪಡೆಯಬಹುದು. ಶ್ರೀ ಹೊನ್ನಾದೇವಿ ದೇವಸ್ಥಾನ. ಈ ದೇವಸ್ಥಾನ ಗವಿಯಲ್ಲಿದೆ. ಇಲ್ಲೂ ಸಹ ಗಂಗಾಧರೇಶ್ವರನ ದೇಗುಲವೂ ಇದೆ. ಪ್ರತಿ ವರ್ಷ ಜನವರಿ ತಿಂಗಳಿನ ಸಂಕ್ರಾಂತಿ ಹಬ್ಬದ ದಿನ ಎರಡೂ ದೇವರುಗಳಿಗೆ ವಿವಾಹ ಮಹೋತ್ಸವವನ್ನು ಮಾಡಲಾಗುತ್ತದೆ. ಸಂಕ್ರಾಂತಿಯ ದಿನ ಮುಂಜಾನೆ, ಬೆಟ್ಟದ ಮೇಲಿನ ಕಲ್ಲಿನಿಂದ ಗಂಗಾ ಜಲ ಹೊರ ಹೊಮ್ಮುತ್ತದೆ. ಆದೇ ಜಲವನ್ನು ವಾದ್ಯಗೋಷ್ಠಿಗಳ ಸಹಿತದೊಂದಿಗೆ ತಂದು ಅದೇ ಪವಿತ್ರವಾದ ನೀರಿನಿಂದ ಶ್ರೀ ಹೊನ್ನಾದೇವಿಯನ್ನು ಶ್ರೀ ಗಂಗಾಧರೇಶ್ವರನಿಗೆ ಧಾರೆ ಎರೆದು ಕೊಡಲಾಗುತ್ತೆ.
ಪಾತಾಳ ಗಂಗೆ.
ಇನ್ನೂ ಇಲ್ಲಿ ಶಂಕರಾಚಾರ್ಯರ ಶಾಖಾ ಮಠವಿದೆ. ಅಷ್ಟೆ ಅಲ್ಲ ಶಾರದಾಂಬೆಯ ದೇವಸ್ಥಾನವೂ ಇದೆ. 108 ಲಿಂಗಗಳನ್ನುಳ್ಳ ಅಗಸ್ತ್ಯರ ದೇವಸ್ಥಾನವೂ ಇದೆ. ಇಲ್ಲೊಂದು ಪಾತಾಳ ಗಂಗೆ ಇದ್ದು ಸದಾ ನೀರಿನಿಂದ ತುಂಬಿರುತ್ತೆ. ವಿಚಿತ್ರವೆಂದರೆ ಇಲ್ಲಿ ಮಳೆಗಾಲದಲ್ಲಿ ನೀರು ಆಳಕ್ಕೆ ಹೋಗಿರುತ್ತೆ. ಬೇಸಿಗೆಯಲ್ಲಿ ನೀರು ಹೆಚ್ಚಾಗಿ ಮೇಲಕ್ಕೆ ಬರುತ್ತೆ. ಬೆಟ್ಟದ ಮೇಲಿದ್ದರು ಸಹ ಬೇಸಿಗೆಯಲ್ಲೂ ಸಹ ಇಲ್ಲಿ ನೀರು ಕಡಿಮೆ ಆಗುವುದೇ ಇಲ್ಲ.
ಇತಿಹಾಸ
16ನೇ ಶತಮಾನದಲ್ಲಿ ಈ ಗುಡ್ಡವು ಶಿವಪ್ಪ ನಾಯಕ ಕೋಟೆಯಾಯಿತು. ಮುಂದೆ ಬೆಂಗಳೂರಿನ ಸಂಸ್ಥಾಪಕ, ಮಾಗಡಿ ಕೆಂಪೇಗೌಡ ಕೋಟೆಯನ್ನು ಸುಧಾರಿಸಿದರು ಮತ್ತು ಈ ಕೋಟೆಯಲ್ಲಿ ತನ್ನ ನಿಧಿಯ ಭಾಗವನ್ನು ಉಳಿಸಿಕೊಂಡರು.
ಕುಮುದ್ವತಿ ನದಿಯ ಮೂಲ
ಶಿವಗಂಗೆ ಬೆಟ್ಟಗಳಲ್ಲಿ ಕುಮುದ್ವತಿ ನದಿಯ ಮೂಲವಿದೆ, ಇದು ಅರ್ಕಾವತಿ ನದಿಯ ಉಪನದಿಯಾಗಿದೆ. ಬೆಂಗಳೂರಿನ ಗ್ರಾಮೀಣ ಜಿಲ್ಲೆಯ ನೆಲಮಂಗಲ ತಾಲ್ಲೂಕು ಮತ್ತು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕೆಲವು ಭಾಗಗಳಲ್ಲಿ ಕುಮುದ್ವತಿ ನದಿ ಹರಿಯುತ್ತದೆ. ಕುಮುದ್ವತಿ ಹರಿಯುವ ಜಲಾನಯನ ಪ್ರದೇಶದ ಎಲ್ಲಾ ಹಳ್ಳಿಗಳಲ್ಲಿ ಕುಡಿಯುವ ನೀರಿನ ಮೂಲವಾಗಿದೆ.
ಶಿವಗಂಗೆ ಎಂದು ಹೆಸರು ಬಂದಿದ್ಹೇಗೆ..?
ಕಣಾದ ಎಂಬ ಋಷಿಮುನಿ, ಏಕಪಾದದಲ್ಲಿ (ಒಂದೆ ಕಾಲಿನಲ್ಲಿ) ನಿಂತು ನೀರಿಗಾಗಿ ತಪಸ್ಸು ಮಾಡಿದ. ಅವನ ತಪೋಶಕ್ತಿಯಿಂದ ಶಿವನ ಜಟೆಯಿಂದ ನೀರು ಹರಿದು ಭೂಮಿಗೆ ಬಂತು. ಅದನ್ನ ಕಂಡ ಮುನಿಗಳು ಶಿವನಗಂಗೆ ಅಂತಾ ಕರೆದರು. ಅದೇ ಮುಂದುವರೆದು ಈಗಿನ ಶಿವಗಂಗೆ ಕ್ಷೇತ್ರ ಆಗಿದೆ ಅನ್ನೋದು ಸ್ಥಳ ಪುರಾಣ.
– ಅರುಣ್ ಬಡಿಗೇರ್