ಕಾರವಾರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಶಿವ ತಾಣ ಗೋಕರ್ಣದಲ್ಲಿ ದುಡ್ಡು ಇದ್ದರೆ ಮಾತ್ರ ಮಹಾಬಲೇಶ್ವರನ ಆತ್ಮ ಲಿಂಗ ದರ್ಶನ ಬೇಗ ಸಿಗುತ್ತದೆ. ಹೀಗಾಗಿ ದುಡ್ಡಿಲ್ಲದ ಬಡವರು ಗೋಕರ್ಣದ ಕಡಲ ತೀರದಲ್ಲಿ ಮರಳಿನ ಆತ್ಮಲಿಂಗ ರಚಿಸಿ ಪೂಜೆ ಸಲ್ಲಿಸಿದ್ದಾರೆ.
ಶಿವರಾತ್ರಿ ದಿನ ಗೋಕರ್ಣದ ಮಹಾಬಲೇಶ್ವರ ದರ್ಶನ ಮಾಡುವುದು ಪ್ರಾಯಾಸದಾಯಕ. ದುಡ್ಡು ಇದ್ದರೆ, ಇಲ್ಲವೆ ವಿಐಪಿ ಆಗಿದ್ದರೆ ಎರಡು ನಿಮಿಷದಲ್ಲಿ ಆತ್ಮಲಿಂಗ ದರ್ಶನ ಮಾಡಬಹುದು. ಆದರೆ ಜನಸಾಮಾನ್ಯರಿಗೆ ದರ್ಶನ ಸಿಗುವುದು ತುಂಬಾ ಕಷ್ಟ. ದುಡ್ಡಿಲ್ಲದ ಬಡ ಭಕ್ತರು ಬೆಳಗಿನ ಜಾವದಿಂದಲೇ ಕಿಲೋಮೀಟರ್ ಗಟ್ಟಲೆ ಸರತಿಯಲ್ಲಿ ನಿಂತು ದೇವರ ದರ್ಶನ ಪಡೆಯಬೇಕು. ಹೀಗಾಗಿ ಹಲವು ಭಕ್ತರು ದೇವಸ್ಥಾನದ ಮುಖ್ಯದ್ವಾರದಲ್ಲಿ ನಮಸ್ಕರಿಸಿ ಇಲ್ಲಿನ ಕಡಲತೀರದಲ್ಲಿ ಈಶ್ವರನ ಲಿಂಗ ತಯಾರಿಸಿ ಪೂಜೆ ಸಲ್ಲಿಸುತ್ತಾರೆ. ಈ ಮೂಲಕ ತಾವೇ ರಚಿಸಿದ ಮರಳಿನ ಲಿಂಗದಲ್ಲಿ ದೇವರನ್ನು ಕಾಣುತ್ತಾರೆ.
Advertisement
Advertisement
ಸಾವಿರಾರು ಶಿವಭಕ್ತರು ಗೋಕರ್ಣದ ಮುಖ್ಯ ಕಡಲತೀರಕ್ಕೆ ಆಗಮಿಸಿ ಮರಳಿನಲ್ಲಿ ಶಿವಲಿಂಗ ನಿರ್ಮಿಸಿ ಬಿಲ್ಪತ್ರೆ, ಹೂವು, ಕುಂಕುಮಗಳ ಮೂಲಕ ಪೂಜೆ ಸಲ್ಲಿಸುತ್ತಾರೆ. ಪ್ರತಿ ಶಿವರಾತ್ರಿಯಂದು ಕೇವಲ ಕರ್ನಾಟಕದವರಲ್ಲದೇ ಮಹರಾಷ್ಟ್ರ, ಗೋವಾಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಈ ಮೂಲಕ ಮರಳಿನಲ್ಲಿ ಶಿವಲಿಂಗ ಮಾಡಿ ಅದರಲ್ಲಿ ಶಿವನ ಆತ್ಮಲಿಂಗವನ್ನು ಕಂಡು ಪುನೀತರಾಗುತ್ತಾರೆ.