ಮಂಡ್ಯ: ಜೆಡಿಎಸ್ ಅಂದರೆ ಎಚ್.ಡಿ.ದೇವೇಗೌಡ ಕೃಪಾಪೋಷಿತ ನಾಟಕ ಮಂಡಳಿ, ನಾವು ಅದರ ಸದಸ್ಯರು ಎಂದು ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಹೇಳಿದ್ದಾರೆ.
ನಾಗಮಂಗಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ನನ್ನು ಮಂಡ್ಯ ಕ್ಷೇತ್ರ ಆಯ್ಕೆ ಮಾಡುತ್ತಿದ್ದಾರೆ. ಹೀಗಾಗಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಕುಟುಂಬದವರು ಮಂಡ್ಯದಿಂದ ಸ್ಪರ್ಧೆಗೆ ಇಳಿದರೆ ನಾನು ಸ್ಥಾನ ಬಿಟ್ಟುಕೊಟ್ಟು, ಸ್ವಾಗತಿಸುತ್ತೇನೆ. ಆದರೆ ಮಂಡ್ಯ ಲೋಕಸಭೆ ಕ್ಷೇತ್ರದಿಂದ ನಾನು ಜೆಡಿಎಸ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವೆ ಎಂದು ಟಾಂಗ್ ಕೊಟ್ಟಿದ್ದಾರೆ.
ಪ್ರಜ್ವಲ್ ರೇವಣ್ಣ ಮಂಡ್ಯ ಕ್ಷೇತ್ರದಿಂದ ಕಣಕ್ಕೆ ಇಳಿಯದಿದ್ದರೆ ನನಗೆ ಅವಕಾಶ ಕೊಡಲಿ ಎಂದು ಕೇಳಿದ್ದೇನೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಎಲ್ಲವನ್ನು ತ್ಯಾಗ ಮಾಡಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಪಕ್ಷದಲ್ಲಿ ಈಗಾಗಲೇ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಸಮ್ಮಿಶ್ರ ಸರ್ಕಾರ ನಡೆಸುತ್ತಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಹೊಂದಾಣಿಕೆ ಸಾಧ್ಯವೋ ಅಲ್ಲಿ ಎರಡು ಪಕ್ಷಗಳ ನಾಯಕರು ಸೇರಿ ಚರ್ಚೆ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಎಂದರು.