– ಅಂಬಿ, ಸುಮಲತಾ ಬಗ್ಗೆ ಗೌರವವಿದೆ
– ರಮ್ಯಾ ವಿರುದ್ಧವೂ ಗರಂ
– ನಿಖಿಲ್ಗೂ ಎಚ್ಚರಿಕೆ
ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮಂಡ್ಯ ಗೌಡ್ತಿ ಅಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಸಂಸದ ಎಲ್.ಆರ್ ಶಿವರಾಮೇ ಗೌಡರು ಸುಮಲತಾಳ ಗಂಡನನ್ನು ನಂಬಿ ನಾನು ಕೆಟ್ಟಿದ್ದೇನೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸ್ಪಷ್ಟನೆ ಕೂಡ ನೀಡಿದ್ದಾರೆ.
ತನ್ನ ಹೇಳಿಕೆ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಯಾರ ಮೇಲೂ ಪರ್ಸನಲ್ ಆಗಿ ಮಾತನಾಡುವುದಿಲ್ಲ. ನನಗೆ ಸುಮಲತಾ ಅವರ ಬಗ್ಗೆ ಸಹೋದರತ್ವ ಸಂಬಂಧದ ಭಾವನೆಯಿದೆ. ಅಂಬರೀಶ್ ಅವರನ್ನು ನಮ್ಮಣ್ಣ, ನಾನು ಅಂಬಿ ಅಣ್ಣನ ಅಭಿಮಾನಿ ಎಂದು ಹೇಳುತ್ತಾರೆ. ಆದರೆ ಅಂಬರೀಶ್ ಅವರನ್ನು ರಾಜಕೀಯಕ್ಕೆ ಕರೆದುಕೊಂಡು ಬಂದು ಎಲೆಕ್ಷನ್ನಲ್ಲಿ ನಿಲ್ಲಿಸುವವರೆಗೂ ಅವರನ್ನು ನಾವು ಚೆನ್ನಾಗಿ ನೋಡಿಕೊಂಡಿದ್ದೇವೆ. ಹೀಗಾಗಿ ನಾವು ಕೂಡ ಅಂಬರೀಶ್ ಅವರ ಸ್ನೇಹಿತರೇ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ಅಂಬರೀಶ್ ಅವರನ್ನು ಚಿತ್ರರಂಗದಲ್ಲಿ ನಟನಾಗಿ ಇಷ್ಟಪಡುತ್ತೇನೆಯೇ ಹೊರತು ರಾಜಕೀಯವಾಗಿ ಒಪ್ಪುತ್ತಿಲ್ಲ. ಅವರು ಒಳ್ಳೆಯ ಮನಸ್ಸಿನ ವ್ಯಕ್ತಿ. ರಾಜಕೀಯವಾಗಿ 20 ವರ್ಷ ಹಿಂದಿನ ಕಥೆ ಮಂಡ್ಯದಲ್ಲಿ ಚರ್ಚೆ ಆಗಬೇಕು. 20 ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ಸುಮಲತಾ ಅವರು ಅಂಬರೀಶ್ ಅವರ ಧರ್ಮಪತ್ನಿ ಆಗಿದ್ದರು. ಅವರು ರಾಜಕೀಯಕ್ಕೆ ಬರುವುದಾದರೆ ಆಗಲೇ ಬರಬಹುದಿತ್ತು. ಈಗ ಏಕೆ ಬಂದಿದ್ದಾರೆ ಎಂದು ಪ್ರಶ್ನಿಸಿದ್ರು.
Advertisement
Advertisement
ಅಂಬರೀಶ್ ಅವರನ್ನು ಕಾಂಗ್ರೆಸ್ಗೆ ಕರೆದುಕೊಂಡು ಬಂದಿದ್ದು ನಾನೇ. ನಾನು ಆಗ ಚುನಾವಣೆಯಲ್ಲಿ ನಿಂತಿಲ್ಲ ಅಂದರೆ ಅಂಬರೀಶ್ ಅವರು ಗೆಲ್ಲುತ್ತಿದ್ದರು. ನಾನು ಆಗ ಚುನಾವಣೆಯಲ್ಲಿ ನಿಂತಿದ್ದರಿಂದ ಅಂಬರೀಶ್ ಸೋತಿದ್ದರು. ಚುನಾವಣೆಯಲ್ಲಿ ನಿಂತ ಬಳಿಕವೂ ನಾವು ಚೆನ್ನಾಗಿಯೇ ಇದ್ದೆವು. ಆಗ ಅವರ ಆಶೀರ್ವಾದ ತೆಗೆದುಕೋ ಎಂದು ಯಾರೋ ಹೇಳಿದ್ದರು. ಅಂಬರೀಶ್ ಅವರು ನಿಧನ ಹೊಂದುವ 2 ದಿನದ ಹಿಂದೆ ಅವರ ಅಣ್ಣನ ಮಗ ಮಧು, ನಾನು ಅಂಬರೀಶ್ ರನ್ನು ಭೇಟಿ ಮಾಡಿದೆ ಎಂದರು.
Advertisement
ನನಗೆ ಅಂಬರೀಶ್ ಅವರ ಬಗ್ಗೆ ವೈಯಕ್ತಕವಾಗಿ ಗೌರವವಿದೆ. ಅವರು ಬಹಳ ದೊಡ್ಡ ಮನುಷ್ಯ. ಮಂಡ್ಯ ಜಿಲ್ಲೆಯಲ್ಲಿ ಅವರು ರಾಜಕೀಯವಾಗಿ ಏನೂ ಮಾಡಿಲ್ಲ. ಚಿತ್ರನಟರಾದ ದರ್ಶನ್, ಯಶ್ ಹಾಗೂ ಬೇರೆಯವರು ಚುನಾವಣೆ ಸಮಯದಲ್ಲಿ ಬರುತ್ತಾರೆ. ಆಗ ಜನರು ಅವರ ಮಾತು ಕೇಳಿ ಮತ ಹಾಕುತ್ತಾರೆ. ಸುಮಲತಾ ಮಂಡ್ಯದಲ್ಲಿ ಮನೆ ಮಾಡಿದ್ದರು. ಅದು ಅವರ ಲಕ್ಕಿ ಮನೆ. ಆದರೆ ಸುಮಲತಾ ಅವರು ಇದುವರೆಗೂ ಆ ಮನೆಯಲ್ಲಿ ವಾಸವಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ರು.
ನನಗೂ ಸುಮಲತಾ ಅವರ ಬಗ್ಗೆ ಗೌರವವಿದೆ. ಸುಮಲತಾ ಅವರು ಮಂಡ್ಯದಲ್ಲಿ ಬದಲಾವಣೆ ಬಯಸಿದ್ದು, ಚುನಾವಣೆಗೆ ಅಲ್ಲ. ಅಂಬರೀಶ್ ನಿಧನರಾದಾಗ ಸುಮಲತಾ ಜನರನ್ನು ನೋಡಿದ್ದಾರೆ. ಕುಮಾರಸ್ವಾಮಿ ಮೆರವಣಿಗೆ ಮಾಡುವಾಗ ಜನರನ್ನು ನೋಡಿದ್ದಾರೆ. ಇದನ್ನೆಲ್ಲಾ ಮನದಲ್ಲಿಟ್ಟುಕೊಂಡು ಇಂದು ಈ ಪ್ಲಾನ್ ಹಾಕಿದ್ದಾರೆ. ಈ ಚುನಾವಣೆ ನಡೆದ ನಂತರ ಯಾರೂ ಬರುವುದಿಲ್ಲ. ರಮ್ಯಾಗೆ ಕೊಡೋಣ ಎಂದು ನಾನು ಹೇಳಿದೆ. ಆದರೆ ರಮ್ಯಾ ಕೂಡ ಹೀಗೆ ಮನೆ ಮಾಡಿ ಬಳಿಕ ರಾತ್ರೋರಾತ್ರಿ ಮನೆ ಖಾಲಿ ಮಾಡಿ ಹೋಗಿದ್ದಾರೆ ಎಂದು ರಮ್ಯಾ ವಿರುದ್ಧವೂ ಸಂಸದರು ಗರಂ ಆದ್ರು.
ಅಂಬರೀಶ್ ಅವರನ್ನು ಚಲನಚಿತ್ರರಂಗದ ವ್ಯಕ್ತಿ ಹಾಗೂ ಆತ್ಮೀಯ ವ್ಯಕ್ತಿಯಾಗಿ ನನಗೆ ಗೌರವವಿದೆ. ಸುಮಲತಾಗು ರಾಜಕೀಯಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ ಅವರು, ಸುಮಲತಾ ಇಷ್ಟು ದಿನ ಏನು ಮಾಡುತ್ತಿದ್ದರು. ಮಂಡ್ಯ ಜಿಲ್ಲೆಯಲ್ಲಿ ನಾನು ಒಬ್ಬ ಪ್ರಜೆ. ವೈಯಕ್ತಿಕವಾಗಿ ನನಗೂ ಸಮಲತಾ ಅವರಿಗೂ ಯಾವ ಸಂಬಂಧನೂ ಇಲ್ಲ. ನನಗೆ ಈಗಲೂ ಅಂಬರೀಶ್ ಅವರ ಕುಟುಂಬದ ಬಗ್ಗೆ ಗೌರವವಿದೆ. ಅವರು ಚುನಾವಣೆಯಲ್ಲಿ ಗೆದ್ದರೆ ನಾನು ಏನೂ ಮಾತನಾಡಲ್ಲ. ಆದರೆ ಅವರು ಗೆಲ್ಲುವುದಕ್ಕೆ ಆಗಲ್ಲ. ಈ ಚುನಾವಣೆಯಲ್ಲಿ ಅವರು ಸೋತ ಬಳಿಕ ಅವರು ಮಂಡ್ಯದಲ್ಲಿ ಇರುತ್ತಾರಾ ಎಂಬುದನ್ನು ಕೇಳಿ ಎಂದು ಹೇಳಿದರು.
ಮಂಡ್ಯ ಜಿಲ್ಲೆ 20 ವರ್ಷ ನೆಲ ಕಚ್ಚಿದೆ. ಅಂಬರೀಶ್ ಅವರು ಚಲನಚಿತ್ರದಲ್ಲಿದ್ದರಿಂದ ಅವರಿಗೆ ಸುಮಾರು ಜನ ಅಭಿಮಾನಿಗಳಿದ್ದಾರೆ. ಕುಮಾರಸ್ವಾಮಿ ಅವರ ಮಗ ನಿಖಿಲ್ ಅವರು ಇನ್ಮುಂದೆ ಚಿತ್ರದಲ್ಲಿ ನಟಿಸಬಾರದು ಎಂದು ಈಗಾಗಲೇ ಕಂಡಿಷನ್ ಹಾಕಿದ್ದೇವೆ. ನಿಖಿಲ್ ತಪ್ಪು ಮಾಡುವ ರೀತಿ ನಟನೆ ಮಾಡಿದ್ದರೆ, ಅವರನ್ನು ಕೂಡ ವಿರುದ್ಧ ಮಾಡುತ್ತೇವೆ. 20 ವರ್ಷಗಳಿಂದ ಚಲನಚಿತ್ರ ನಟರ ಕೈಗಳಲ್ಲಿ ಸಿಕ್ಕಿ ಮಂಡ್ಯ ಜಿಲ್ಲೆಲ್ಲಿ ಅಭಿವೃದ್ಧಿ ಮಣ್ಣಾಗಿದೆ ಎಂದು ಕಿಡಿಕಾರಿದ್ರು.
ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಸೋಲಲಿ ಅಥವಾ ಗೆಲ್ಲಲಿ. ಅವರು ಮಂಡ್ಯದಲ್ಲಿ ಬಿದ್ದಿರಬೇಕು. ಸಿನಿಮಾ ಮಾಡಲು ಏನಾದರೂ ಹೋದರೆ ನಿಖಿಲ್ಗೂ ಕೂಡ ನಾವು ಕೊಕ್ ಕೊಡುತ್ತೇವೆ. ಇದರಲ್ಲಿ ಎರಡು ಮಾತಿಲ್ಲ ಎಂದು ಶಿವರಾಮೇಗೌಡರು ಜೆಡಿಎಸ್ ಅಭ್ಯರ್ಥಿ ನಿಖಿಲ್ ಗೂ ಎಚ್ಚರಿಕೆ ನೀಡಿದ್ದಾರೆ.