ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಸ್ವಾಭಿಮಾನದ ಹೆಸರಿನಲ್ಲಿ ನನಗೆ ಮತ ನೀಡಿ ಎಂದು ಸೆರಗೊಡ್ಡಿ ಜೆಡಿಎಸ್‌ನ್ನು (JDS) ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಮಣಿಸಿದ್ದರು. ಇದೀಗ ಇದೇ ಸ್ವಾಭಿಮಾನದ ಹೆಸರಿನಲ್ಲಿ ಜೆಡಿಎಸ್ ಮೇಲೆ ಸೇಡು ತೀರಿಸಿಕೊಳ್ಳಲು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ (Shivarame Gowda) ಮುಂದಾಗಿದ್ದಾರೆ. ಈ ಮೂಲಕ ಮಂಡ್ಯ (Mandya) ಜಿಲ್ಲೆಯಲ್ಲಿ ಮತ್ತೊಂದು ಸ್ವಾಭಿಮಾನದ ಕದನಕ್ಕೆ ರಂಗ ಸಿದ್ಧವಾಗುತ್ತಿದೆ.
ಕಳೆದ ಲೋಕಸಭಾ ಚುನಾವಣೆಯ ವೇಳೆ ಇಡೀ ದೇಶದ ಕಣ್ಣು ಮಂಡ್ಯ ಜಿಲ್ಲೆಯ ಮೇಲೆ ಇತ್ತು. ಇದಕ್ಕೆ ಕಾರಣವಾಗಿದ್ದು ಜೆಡಿಎಸ್ ಹಾಗೂ ಸುಮಲತಾ ಅಂಬರೀಶ್ ಅಂಬರೀಶ್ ನಡುವಿನ ಫೈಟ್ ಆಗಿತ್ತು. ಈ ವೇಳೆ ಸ್ವಾಭಿಮಾನಿ ಕಹಳೆ ಊದಿದ್ದ ಸುಮಲತಾ ಅಂಬರೀಶ್ ಬಹಿರಂಗ ಸಭೆಯಲ್ಲಿ ಸ್ವಾಭಿಮಾನಿ ಮತದಾರರೇ ನನಗೆ ಮತ ನೀಡಿ ಗೆಲ್ಲಿಸಿ ಎಂದು ಭಾವುಕರಾಗಿ ಹೇಳಿದ್ದರು. ಇದಾದ ನಂತರ ಮಂಡ್ಯ ಜಿಲ್ಲೆಯ ಜನರು ಸುಮಲತಾ ಅಂಬರೀಶ್ ಅವರ ಸ್ವಾಭಿಮಾನದ ಕಹಳೆಗೆ ಉಘೇ ಉಘೇ ಎಂದು ಗೆಲ್ಲಿಸುವ ಮೂಲಕ ಜೆಡಿಎಸ್‌ಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ದರು. ಇದೀಗ ಸುಮಲತಾ ಅಂಬರೀಶ್ ಅವರ ಹಾದಿಯನ್ನು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತುಳಿದಿದ್ದಾರೆ.
Advertisement
Advertisement
ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮಂಡ್ಯದ 7 ಕ್ಷೇತ್ರಗಳ ಪೈಕಿ ನಾಗಮಂಗಲ ಕ್ಷೇತ್ರ ಹೈವೊಲ್ಟೇಜ್ ಕ್ಷೇತ್ರವಾಗಲಿದೆ. ಈ ಕ್ಷೇತ್ರದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಮೂಲಕ ಜೆಡಿಎಸ್ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿದ ಬಳಿಕ ನಾಗಮಂಗಲ ಕ್ಷೇತ್ರದಲ್ಲಿ ಫುಲ್ ಆಕ್ಟೀವ್ ಆಗಿರುವ ಶಿವರಾಮೇಗೌಡ, ಇದೀಗ ಸ್ವಾಭಿಮಾನದ ಹೆಸರ ಮೂಲಕ ಜನರ ಮುಂದೆ ಹೊಗುತ್ತಿದ್ದಾರೆ.
Advertisement
ನಾಗಮಂಗಲ ಕ್ಷೇತ್ರದ ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲಿ ಎಲ್.ಆರ್.ಎಸ್ ಸ್ವಾಭಿಮಾನಿ ಪರ್ವ ಎಂಬ ಕಾರ್ಯಕ್ರಮದ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯ ನಾಗಮಂಗಲದ ರಣಕಣದಲ್ಲಿ ಜೆಡಿಎಸ್ ವಿರುದ್ಧ ಶಿವರಾಮೇಗೌಡ ಕಹಳೆ ಊದಿದ್ದಾರೆ. ಕಳೆದ ಎಂಪಿ ಚುನಾವಣೆಯಲ್ಲಿ ಅಂಬರೀಶ್ ಅಣ್ಣನ ಪತ್ನಿ ಸ್ವಾಭಿಮಾನದಿಂದ ನಿಮ್ಮ ಬಳಿ ಮತ ಕೇಳಿದರು. ಆಗ ಯಾರನ್ನು ನೋಡದೇ ಸುಮಲತಾ ಅವರಿಗೆ ಮತ ಹಾಕಿ ಗೆಲ್ಲಿಸಿದ್ದೀರಾ. ಈಗ ನಾನು ಸಹ ನಿಮ್ಮ ಮುಂದೆ ಟವಲ್‌ವೊಡ್ಡಿ ಭಿಕ್ಷೆ ಬೇಡುತ್ತಿದ್ದೇನೆ, ನನ್ನ ಗೆಲ್ಲಿಸಿ ಎಂದು ನಾಗಮಂಗಲದ ಕದಬಹಳ್ಳಿಯ ಸ್ವಾಭಿಮಾನಿ ಪರ್ವ ಕಾರ್ಯಕ್ರಮದಲ್ಲಿ ಶಿವರಾಮೇಗೌಡ ಭಾವುಕರಾಗಿ ಹೇಳಿದ್ದಾರೆ.
Advertisement
ಇದೇ ಸ್ವಾಭಿಮಾನಿ ಪರ್ವದಲ್ಲಿ ಒಂದು ಕಡೆ ನನ್ನ ಕೈ ಹಿಡಿಯಿರಿ ಎಂದು ಜನರ ಬಳಿ ಮನವಿ ಮಾಡಿರುವ ಶಿವರಾಮೇಗೌಡ ಇನ್ನೊಂದು ಕಡೆ ನನಗೆ ಜೆಡಿಎಸ್ ಹಾಗೂ ಕುಮಾರಸ್ವಾಮಿ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ 2018ರ ಮಂಡ್ಯ ಲೋಕಸಭಾ ಉಪಚುನಾವಣೆಗಾಗಿ ನನ್ನಿಂದ 32 ಕೋಟಿ ರೂ. ಖರ್ಚು ಮಾಡಿಸಿದ್ದಾರೆ. ಆದರೆ ನನಗೆ 5 ತಿಂಗಳು ಮಾತ್ರ ಸಂಸದರನ್ನಾಗಿ ಮಾಡಿದರು. 5 ತಿಂಗಳಿಗೆ 32 ಕೋಟಿ ಖರ್ಚು ಮಾಡಿಸಿ ನನ್ನ ಸಾಲಗಾರನನ್ನಾಗಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ತಮ್ಮ ಮಗನನ್ನು ಸಂಸದನನಾಗಿ ಮಾಡವುದಾಗಿ ಹೇಳಿ ನನಗೆ ಮೋಸ ಮಾಡಿದರು. ನಾನು ಏನು ದ್ರೋಹ ಮಾಡಿದ್ದೆ ಕುಮಾರಸ್ವಾಮಿ ಅವರೇ ನಿಮಗೆ ಎಂದು ಜೆಡಿಎಸ್‌ನಲ್ಲಿ ತಮಗೆ ಅನ್ಯಾಯವಾಗಿದೆ. ನಾನು ಈ ಚುನಾವಣೆಯಲ್ಲಿ ಗೆದ್ದು ಅವರಿಗೆ ನಾನ್ಯಾರು ಎಂದು ತೋರಿಸುತ್ತೇನೆ ಎಂದು ಶಿವರಾಮೇಗೌಡ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನೆರೆಯ ನೇಪಾಳದಲ್ಲಿ 5.3 ತೀವ್ರತೆಯ ಭೂಕಂಪ – ಉತ್ತರಾಖಂಡದಲ್ಲೂ ಕಂಪಿಸಿದ ಅನುಭವ
ಒಟ್ಟಾರೆ ಎಂಪಿ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸ್ವಾಭಿಮಾನದ ಮೂಲಕ ಜೆಡಿಎಸ್‌ಗೆ ಪಾಠ ಕಲಿಸಿದರು. ಇದೀಗ ನಾಗಮಂಗಲದಲ್ಲಿ ಶಿವರಾಮೇಗೌಡ ಸ್ವಾಭಿಮಾನದ ಮೂಲಕ ದಳಪತಿಳಿಗೆ ಟಕ್ಕರ್ ನೀಲು ಮುಂದಾಗಿದ್ದು, ಜೆಡಿಎಸ್‌ಗೆ ಮತ್ತೊಂದು ಸ್ವಾಭಿಮಾನದ ಕಹಳೆ ಮುಳುವಾಗುತ್ತಾ ಎಂದು ಕಾದುನೋಡಬೇಕಿದೆ. ಇದನ್ನೂ ಓದಿ: ಮಿನಿ ಬಸ್, ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ – 12 ವಿದ್ಯಾರ್ಥಿಗಳಿಗೆ ಗಾಯ