Districts
ಜನ ನಮ್ಮನ್ನು ಮಾನ್ಯ ಮಾಡಿ ಸಿದ್ದರಾಮಯ್ಯರನ್ನ ಅಮಾನ್ಯ ಮಾಡಿದ್ದಾರೆ: ಶಿವರಾಮ್ ಹೆಬ್ಬಾರ್

ಕಾರವಾರ: ಪಕ್ಷಾಂತರ ಮಾಡಿದ ಶಾಸಕರಿಗೆ ಸಚಿವ ಸ್ಥಾನ ನೀಡಬಾರದು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ತಿರುಗೇಟು ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತನಾಡಿದ ಅವರು, ನಮ್ಮನ್ನು ಮಂತ್ರಿ ಮಾಡುವುದಿಲ್ಲ ಎಂಬ ಕಾಲ ಬಂದಾಗ ನಮಗೆ ಮೋಸ ಮಾಡಿದರು ಎಂದು ಸಿದ್ದರಾಮಯ್ಯನವರೇ ಮಾತನಾಡಿದ್ದರು. ಇಂದು ಅವರಿಗೆ ಯಾವ ಬೇಸರವಾಗಿದೆಯೋ ಗೊತ್ತಿಲ್ಲ. ಅವರು ಬೇಸರ ಮಾಡಿಕೊಳ್ಳುವುದು ಬೇಡ, ಜನ ನಮ್ಮನ್ನು ಮಾನ್ಯ ಮಾಡಿದ್ದಾರೆ. ಅವರನ್ನು ಅಮಾನ್ಯ ಮಾಡಿದ್ದಾರೆ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತೆ ಎಂದು ಟಾಂಗ್ ಕೊಟ್ಟರು.
ಉಪ ಚುನಾವಣೆಯಲ್ಲಿ ಸೋತವರಿಗೆ ಮಂತ್ರಿ ಸ್ಥಾನ ನೀಡುವ ಕುರಿತು ಮುಖ್ಯಮಂತ್ರಿಗಳನ್ನೇ ಕೇಳಿ ಎಂದು ಶಿವರಾಮ್ ಹೆಬ್ಬಾರ್ ಉಪಚುನಾವಣೆಯಲ್ಲಿ ಸೋತವರ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಸಚಿವ ಸಂಪುಟ ವಿಸ್ತರಣೆ ಫೆ. 6ರಂದು ಆಗಲಿದೆ ಎಂದು ಸಿಎಂ ಘೋಷಣೆ ಮಾಡಿದ್ದಾರೆ. ಅದರಂತೆ ಆಗುತ್ತದೆ, ಯಾವುದೇ ವಿಷಯವಾದರೂ ಸಿಎಂಗೆ ಕೇಳಿ ಎಂದು ಪ್ರತಿಕ್ರಿಯಿಸಿದರು.
