ಬೆಂಗಳೂರು: “ಮನೆಯಲ್ಲಿ ಅಪ್ಪ ಮಕ್ಕಳು ಸಿಟ್ಟಾಗುವುದು ಸಹಜ. ಹಾಗೆಂದ ಮಾತ್ರಕ್ಕೆ ಮನೆ ಬಿಟ್ಟು ಹೋಗಲು ಸಾಧ್ಯವೇ” – ಇದು ಯಲ್ಲಾಪುರದ ಕಾಂಗ್ರೆಸ್ ಶಾಸಕ ಶಿವರಾಂ ಹೆಬ್ಬಾರ್ ಆಪರೇಷನ್ ಕಮಲದ ಬಗ್ಗೆ ಕೇಳಲಾದ ಪ್ರಶ್ನೆಗೆ ನೀಡಿದ ಉತ್ತರ.
ಕೆಲವು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೇ ಇದ್ದ ಶಿವರಾಂ ಹೆಬ್ಬಾರ್ ಗುರುವಾರ ಮಧ್ಯಾಹ್ನ ಕೆಪಿಸಿಸಿ ಕಚೇರಿಗೆ ಆಗಮಿಸಿದರು. ಈ ವೇಳೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಮನೆಯಲ್ಲಿ ಅಪ್ಪ ಮಕ್ಕಳು ಜಗಳವಾಡುತ್ತಾರೆ. ಮನೆಯಲ್ಲಿ ಏನು ಆಗಬೇಕು ಎನ್ನುವುದನ್ನು ಕೇಳುವುದು ನಮ್ಮ ಹಕ್ಕು. ಅದನ್ನು ನಾವು ಕೇಳುತ್ತೇವೆ ಎಂದು ತಿಳಿಸಿದರು.
Advertisement
Advertisement
ಈ ವೇಳೆ ಆಪರೇಷನ್ ಕಮಲದ ಆಫರ್ ಬಂದಿತ್ತಾ ಎಂದು ಕೇಳಿದ್ದಕ್ಕೆ ಕಾರ್ಯಕರ್ತರ ಮೂಲಕ ಆಫರ್ ಬಂದಿತ್ತು ಎಂದಾಗ ಮಾಧ್ಯಮದವರು ಏನು ಆಫರ್ ನೀಡಲಾಗಿತ್ತು ಎಂದು ಮರು ಪ್ರಶ್ನೆ ಹಾಕಿದರು. ಇದಕ್ಕೆ ನಾನು ಆಫರ್ ತೆಗೆದುಕೊಂಡೇ ಇಲ್ಲ. ಹೀಗಾಗಿ ಏನು ಆಫರ್ ಎನ್ನುವುದು ನನಗೆ ಗೊತ್ತಿಲ್ಲ ಎಂದು ಉತ್ತರಿಸಿದರು.
Advertisement
ಪಕ್ಷದಲ್ಲೇ ಅಸಮಾಧಾನ ಇದೆಯೇ ಎಂದಿದ್ದಕ್ಕೆ, ಬೇಸರ ಇಲ್ಲ ಎಂದು ನಾನು ಹೇಳಲ್ಲ. ಮನೆ ಅಂದ ಮೇಲೆ ಬೇಸರ, ಸಂತೋಷ ಇರಬೇಕಲ್ಲವೇ? ನಮಗೆ ಆಗಿರುವ ನೋವನ್ನು ಪಕ್ಷದ ವೇದಿಕೆಯಲ್ಲೇ ತೋಡಿಕೊಳ್ಳುತ್ತೇವೆ. ನಾನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ. 2008 ರಿಂದ 2018ರ ವರೆಗೆ ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಏನು ಬೇಕೋ ಅದನ್ನು ಕೇಳುವ ಹಕ್ಕು ನನಗೆ ಇದೆ. ಹಿಂದೆಯೂ ಕೇಳಿದ್ದೆ. ಈಗಲೂ ಕೇಳುತ್ತೇನೆ. ಮುಂದೆಯೂ ಕೇಳಿಯೇ ಕೇಳುತ್ತೇನೆ. ನಮ್ಮ ಹಕ್ಕನ್ನು ಕೇಳುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.
Advertisement
ಆಪರೇಷನ್ ಕಮಲ ನಡೆಯುವ ವೇಳೆ ನೀವು ರಾಜ್ಯದಲ್ಲಿ ಇರಲಿಲ್ಲವಲ್ಲ ಎನ್ನುವ ಪ್ರಶ್ನೆಗೆ, ನೋಡಿ ಒಂದು ತಿಂಗಳ ಹಿಂದೆಯೇ ಕುಟುಂಬ ಸಮೇತವಾಗಿ ನಾವು ಅಂಡಮಾನ್ ಗೆ ಹೋಗಲು ತೀರ್ಮಾನ ತೆಗೆದುಕೊಂಡಿದ್ದೇವು. ಈ ಸಮಯದಲ್ಲಿ ಈ ಆಪರೇಷನ್ ಕಮಲ ನಡೆದಿದೆ. ನಾವು ಹೋಗಿದ್ದ ಸ್ಥಳದಲ್ಲಿ ಮೊಬೈಲ್ ಸಂಪರ್ಕ ಇರಲಿಲ್ಲ. ಈ ಕಾರಣಕ್ಕಾಗಿ ನನಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕಾಕತಾಳೀಯ ಎಂಬಂತೆ ಈ ಎಲ್ಲ ಘಟನೆಗಳು ನಡೆದಿದೆ ಎಂದು ತಿಳಿಸಿದರು.
ನಿಮಗೂ ಆಪರೇಷನ್ ನಡೆದಿತ್ತು ಅಲ್ಲವೇ ಎಂದು ಕೊನೆಯಲ್ಲಿ ಕೇಳಿದ್ದಕ್ಕೆ, ನಾನು ಪೇಶೆಂಟ್ ಅಲ್ಲವಲ್ಲ. ಮತ್ತೆ ಹೇಗೆ ಆಪರೇಷನ್ ನಡೆಯುತ್ತದೆ ಎಂದು ನಗುಮುಖದಿಂದ ಉತ್ತರಿಸಿ ತೆರಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv