-ಗುಹೆಯ ಸೆಟ್ ಬೆಂಕಿಗಾಹುತಿ
-ನಿರ್ಮಾಪಕರಿಗೆ ನಷ್ಟ ಆಗಿದೆ: ಶಿವಣ್ಣ ಬೇಸರ
ಬೆಂಗಳೂರು: ಸಿನಿಮಾ ಶೂಟಿಂಗ್ ಸೆಟ್‍ನಲ್ಲಿ ನಡೆದಿದ್ದು ಬೆಂಕಿ ಅವಘಡ, ಯಾವುದೇ ಅಗೋಚರ ಶಕ್ತಿ ಅಲ್ಲ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಅಗ್ನಿಅವಘಡದ ಕುರಿತು ಪ್ರತಿಕ್ರಿಯಿಸಿರುವ ಶಿವಣ್ಣ, ಅದು ಹೇಗೆ ಆಯ್ತು ನಮಗೆ ಗೊತ್ತಾಗುತ್ತಿಲ್ಲ. ಎಲೆಕ್ಟ್ರಿಕ್ ವೈರ್ ಹೀಟ್ ಆಗಿ ಕಿಡಿ ಬಿದ್ದು ಆಗಿದೆ. ಎರಡು ದಿನಗಳ ಹಿಂದೆ ಬಸ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಇವತ್ತು ಕಿಡಿ ಬಿದ್ದಿದೆ. ಯಾರಿಗೂ ಏನು ಆಗಿಲ್ಲ ಅದು ಪುಣ್ಯ. ಬೆಂಕಿ ಅವಘಡದಿಂದಾಗಿ ನಿರ್ಮಾಪಕರಿಗೆ ನಷ್ಟವಾಗಿದೆ. ಆದರೆ ನಿರ್ಮಾಪಕರು ಯಾರಿಗೂ ಏನು ಆಗಿಲ್ಲವಲ್ಲ ಅಷ್ಟೇ ಸಾಕು ಎಂದು ಹೇಳುತ್ತಾರೆ ಎಂದರು.
ಆಯುಷ್ಮಾನ್‍ಭವ ಸಂದರ್ಭದಲ್ಲಿ ಯಾವುದೇ ಅನಾಹುತ ನಡೆದಿರಲಿಲ್ಲ. ಎಲ್ಲ ಚಿತ್ರೀಕರಣವನ್ನು ವಾಸು ಅವರು ಪರ್ಮಿಷನ್ ತೆಗೆದುಕೊಂಡು ಮಾಡಿದ್ದರು. ಮಂಗಳೂರಲ್ಲಿ ನಡೆದಿದ್ದಕ್ಕೂ ಇದಕ್ಕೂ ಏನು ಸಂಬಂದ ಇಲ್ಲ. ಒಂದು ಅಪಘಾತ, ಅವಘಡ ಅಷ್ಟೇ ಅದು ಬೇರೆ ಏನಿಲ್ಲ ಅಗೋಚರ ಶಕ್ತಿ ಅಲ್ಲ. ನಾವು ಹೋಮ, ಹವನ, ದೇವರು ಪೂಜೆ ಮಾಡಿಕೊಂಡು ಬಂದಿರೋರು. ಆ ರೀತಿ ಏನಾದ್ರು ಇದ್ರೆ ನಾವು ದೇವರಿಗಿಂತ ದೊಡ್ಡವರಲ್ಲ. ಪೂಜೆ ಮಾಡಿ, ದೇವರಿಗೆ ಪ್ರಾರ್ಥನೆ ಮಾಡಿ ಕ್ಷಮೆ ಕೇಳೋಣ ಎಂದು ತಿಳಿಸಿದರು.
ಶಿವಣ್ಣನ ಭಾವಚಿತ್ರಕ್ಕೆ ಚಾಣಕ್ಯ ಆರತಿ ಮಾಡುತ್ತಿರುವ ಮಾಸ್ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳಲ್ಲಿ ಸಂಕ್ರಾಂತಿ ಕಿಚ್ಚು ಹಚ್ಚಿದ್ದ ಭಜರಂಗಿ-2 ಸಿನಿಮಾಗೆ ಮೇಲಿಂದ ಮೇಲೆ ಅವಘಡಗಳು ಸಂಭವಿಸುತ್ತಲೇ ಇವೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶ್ರೀನಿವಾಸಪುರ ಗ್ರಾಮದ ಬಳಿಯ ಮೋಹನ್ ಬಿಕೆರೆ ಸ್ಟುಡಿಯೋದಲ್ಲಿ ಕಳೆದ 10 ದಿನಗಳಿಂದ ಶೂಟಿಂಗ್ ಅದ್ಧೂರಿಯಾಗಿ ನಡೆಯುತ್ತಿದೆ. ಗುರುವಾರ ಬೆಳಗ್ಗೆ ಸಿನಿಮಾಗೆ ಹಾಕಿದ್ದ ಅದ್ಧೂರಿ ಗುಹೆಯ ಸೆಟ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಭಾಗಶಃ ಸುಟ್ಟು ಹೋಗಿತ್ತು. ಆದಾದ ಬಳಿಕ ಭಜರಂಗಿ -2 ಸಿನಿಮಾದ ಕಲಾವಿದರು ಚಿತ್ರೀಕರಣಕ್ಕಾಗಿ ಸ್ಟುಡಿಯೋದತ್ತ ತೆರಳುತ್ತಿದ್ದ ವೇಳೆ ಬಸ್ ಅಪಘಾತವಾಗಿತ್ತು. ಇದೀಗ ಇಂದು ಕೂಡ ಮತ್ತೊಂದು ವಿಘ್ನ ಎದುರಾಗಿದ್ದು ಕೋಟಿ ವೆಚ್ಚದಲ್ಲಿ ತಯಾರು ಮಾಡಿರುವ ಗುಹೆಯ ಸೆಟ್ ಬೆಂಕಿಗೆ ಸುಟ್ಟು ಸಂಪೂರ್ಣ ಕರಕಲಾಗಿದೆ.
ಮಧ್ಯಾಹ್ನ 2 ಗಂಟೆಯಲ್ಲಿ ಕಾಣಿಸಿಕೊಂಡ ಬೆಂಕಿ ಎರಡು ಗಂಟೆಗಳ ಕಾಲ ಹೆಚ್ಚು ಹೊತ್ತು ಉರಿದಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಂದಿಸಲು ಯಶಸ್ವಿಯಾಗಿವೆ. ಇನ್ನೂ ಸೆಟ್ ನಲ್ಲಿದ್ದ 400ಕ್ಕೂ ಹೆಚ್ಚು ಜ್ಯೂನಿಯರ್ ಅರ್ಟಿಸ್ಟ್ ಗಳು ಯಾವುದೇ ಅಪಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.