ಕೊಪ್ಪಳ: ಪಕ್ಷೇತರನಾಗಿ ಗೆದ್ದ ಕೂಡಲೇ ನಿನ್ನ ಕಾವಲುಗಾರರು ನನ್ನ ಮನೆ ಮುಂದೆ ನಿಂತು ಕಾಯುತ್ತಿದ್ದದ್ದು ಮರೆತು ಹೋಯಿತೆ? ಎಂದು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಶಾಸಕ ಜನಾರ್ದನ ರೆಡ್ಡಿ (Janardhana Reddy) ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಕಾರಟಗಿಯಲ್ಲಿ ಕಾಂಗ್ರೆಸ್‍ನ (Congress) ಪ್ರಚಾರ ಸಭೆಯಲ್ಲಿ ಅವರು ಮಾತಾಡಿದ್ದಾರೆ. ಈ ವೇಳೆ, ಟಗರು ಬೆಂಗಳೂರಿಂದ ಬಳ್ಳಾರಿಗೆ ಬಂದು ಗುದ್ದಿದ್ದು ನೆನಪಿದೆಯಾ? ರಾಜ್ಯಸಭಾ ಚುನಾವಣೆಗೂ ಮುನ್ನ ನನ್ನ ಮನೆ ಸುತ್ತಾ ಓಡಾಡಿದ್ದನ್ನು ಬಹಿರಂಗಪಡಿಸಬೇಕಾ? ಸಂಸ್ಕಾರವುಳ್ಳ ಕುಟುಂಬದಿಂದ ಬಂದಿದ್ದಕ್ಕೆ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: 40ಕ್ಕೂ ಹೆಚ್ಚು ಪೊಲೀಸರು ಬಂದು ಹೊಡೆದಿದ್ದಾರೆ – ಏಟಿನ ಭಯಕ್ಕೆ ಸುಳ್ಳು ಹೇಳಿದ್ದೇವೆ
ನನ್ನನ್ನು ಸೇರಿ ಐವರು ಶಾಸಕರ ಬೆಂಬಲದಿಂದ ನೀನು, ನಿನ್ನ ಸರ್ಕಾರ ಅಂದು ಅಧಿಕಾರಕ್ಕೆ ಬಂದಿತ್ತು. ನಿನ್ನ ಹಣೆಬರಹ ನನಗೆ ಚೆನ್ನಾಗಿ ಗೊತ್ತು. ನಿನ್ನಿಂದ ತಂಗಡಗಿ ಮಂತ್ರಿಯಾಗಿರಲಿಲ್ಲ. ಕನಕಗಿರಿ ಕ್ಷೇತ್ರದ ಜನರ ಆಶೀರ್ವಾದದಿಂದ ಮಂತ್ರಿಯಾಗಿದ್ದೆ. ಇನ್ನೂ ಎರಡು ಹೆಜ್ಜೆ ಮುಂದೆ ಹೋಗಿ ಮಾತನಾಡಬೇಕಾದಿತು ಹುಷಾರ್ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ನೀನು ಹೇಳಿದ ಪದ ನಾನು ಬಳಸಬಲ್ಲೇ, ಆ ತಾಕತ್ತು ನನಗೂ ಇದೆ. ನನಗೂ ನಾಲಿಗೆ ಇದೆ. ನಿನ್ನ ಸಂಸ್ಕಾರ ನನ್ನದ್ದಲ್ಲ ಎಂದು ಅವರು ಕುಟುಕಿದ್ದಾರೆ. ಇದನ್ನೂ ಓದಿ: Exclusive: ರೇವಣ್ಣ ಕಿಡ್ನ್ಯಾಪ್ ಕೇಸ್ – ಅಪಹರಿಸಿ ಸಂತ್ರಸ್ತೆಯನ್ನಿರಿಸಿದ್ದ ತೋಟದ ಮನೆ ಪತ್ತೆ; ಕೂಲಿ ಕಾರ್ಮಿಕರಿಂದ ಸ್ಫೋಟಕ ಮಾಹಿತಿ!