– ಟೀಸರ್ ನೋಡಿ ಅತ್ತು ಬಿಟ್ಟೆ
– ಇದೊಂದು ದೊಡ್ಡ ಹೆಜ್ಜೆ
ಬೆಂಗಳೂರು: ಗಂಧದ ಗುಡಿ ಟೀಸರ್ ನೋಡಿ ರೋಮಾಂಚನವಾಯಿತು, ನಿಜಕ್ಕೂ ಅಪ್ಪು ಅಂತಹ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ ಎಂದು ಕರುನಾಡ ಚಕ್ರವರ್ತಿ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಡಾಕ್ಯುಮೆಂಟರಿ ಸಿನಿಮಾ ಗಂಧದ ಗುಡಿ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಇನ್ನೂ ಟೀಸರ್‍ನಲ್ಲು ಸುಂದರವಾದ ಕಾಡಿನ ಮಧ್ಯೆ ಅಪ್ಪು ಜರ್ನಿ ಅದ್ಭುತವಾಗಿ ಮೂಡಿ ಬಂದಿದ್ದು, ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.
ಗಂಧದ ಗುಡಿ ಟೀಸರ್ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಟೀಸರ್ ನೋಡಿದ ತಕ್ಷಣ ನನಗೆ ಬಹಳ ಖುಷಿ ಆಯ್ತು ಜೊತೆಗೆ ರೋಮಾಂಚನವಾಯಿತು. ಈಗಿನ ಕಾಲದಲ್ಲಿ ಈ ರೀತಿ ಸಿನಿಮಾ ತೆರೆಯುವ ಬಗ್ಗೆ ಎಲ್ಲರಿಗೂ ಆಲೋಚನೆ ಬರುವುದು ಬಹಳ ಕಡಿಮೆ. ಆದರೆ ಅಂತಹ ಯೋಚನೆ ನನ್ನ ತಮ್ಮನಿಗೆ ಬಂದಿದೆ. ಟೀಸರ್ ಕೊನೆಯಲ್ಲಿ ಅಪ್ಪು ಅವರು ಸ್ಮೈಲ್ ಮಾಡುವ ದೃಶ್ಯ ನೋಡಿ ಕರುಳಿಗೆ ಸಂಕಟವಾದಂತೆ ಆಯಿತು. ಟೀಸರ್ ನೋಡುತ್ತಾ ನಾನು ಅತ್ತಿದ್ದೇನೆ. ಅವನು ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ. ನಮ್ಮೊಂದಿಗೆ ಇದ್ದಾನೆ. ಅವನ ಆಲೋಚನೆಗಳು, ವಿಚಾರಗಳು, ಪ್ರಯತ್ನಗಳು ಇನ್ನೂ ಜೀವಂತವಾಗಿದೆ. ಎಲ್ಲರೂ ಯಾವ ರೀತಿ ಪ್ರಯತ್ನ ಮಾಡಬೇಕೆಂದು ತೋರಿಸಿಕೊಟ್ಟಿದ್ದಾನೆ. ಇದೊಂದು ದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಿದರು.
ಇದೇ ವೇಳೆ ಟೀಸರ್ ಕೊನೆಯಲ್ಲಿ ಅರಣ್ಯವನ್ನು ಉಳಿಸಿ, ಪ್ರಾಣಿಗಳನ್ನು ಉಳಿಸಿ ಎಂಬ ಅಪ್ಪಾಜಿ ಅವರ ಧ್ವನಿ ಕೇಳಿ ನನ್ನ ಮೈ ರೋಮಾಂಚನವಾಯಿತು. ನಾನು ಎಂ.ಪಿ ಶಂಕರ್ ಅವರಿಗೆ ಧನ್ಯವಾದ ತಿಳಿಸಬೇಕು, ಏಕೆಂದರೆ ನಾನು ಸಹ ಗಂಧದ ಗುಡಿ-2 ಸಿನಿಮಾದ ಮೂಲಕ ಪ್ರಕೃತಿ ಮಧ್ಯೆ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತ್ತು. ಅದು ನನ್ನ ಪುಣ್ಯ. ನಾನು ಹಳ್ಳಿಗಾಡಿನ ಮಧ್ಯೆಯೇ ಹಲವಾರು ಸಿನಿಮಾಗಳನ್ನು ಅಭಿನಯಿಸಿದ್ದೇನೆ ಎಂದರು.
ನಿಜಕ್ಕೂ ಅಪ್ಪು ಅಂತಹ ತಮ್ಮ ಪಡೆಯಲು ನಾನು ಬಹಳ ಪುಣ್ಯ ಮಾಡಿದ್ದೇನೆ, ಎಲ್ಲರೂ ಅಪ್ಪು ನಿನ್ನ ರೀತಿ ಎಂದು ಹೇಳುತ್ತಾರೆ. ಆದರೆ ನಾನು ಅಪ್ಪು ರೀತಿ ಇದ್ದೇನೆ. ನಾನು ಕೇವಲ ನೊದಲು ಹುಟ್ಟಿದೆ. ಆದರೆ ಮೊದಲು ಅಪ್ಪು ಹುಟ್ಟಿದ್ದರೆ ನಾನು ಅವನಂತೆ ಕಾಣಿಸುತ್ತಿದ್ದೆ ಅನಿಸುತ್ತದೆ. ಅಪ್ಪು ಅಭಿನಯದ ಎಲ್ಲಾ ಸಿನಿಮಾವನ್ನು ನಾನು ಫಸ್ಟ್ ಡೇ ನೋಡುತ್ತಿದ್ದೆ. ಈಗ ಗಂಧದ ಗುಡಿ ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ತಿಳಿಸಿದರು.