– ಗೆಳತಿಯ ಮೃತದೇಹವನ್ನು ಓಮ್ನಿಯಲ್ಲಿ ಇಟ್ಟಿದ್ದ ಪಾಪಿ
ಶಿವಮೊಗ್ಗ: ಪತ್ನಿಗೆ ತಲಾಖ್ ನೀಡಿ ನನ್ನನ್ನು ಮದುವೆಯಾಗು ಎಂದವಳನ್ನು ಕೊಲೆಗೈದಿದ್ದ ಪ್ರಿಯಕರನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಸೋಮಿನಕೊಪ್ಪದ ನಿವಾಸಿ ಅಬುಸಲೇಹ್ (31) ಕೊಲೆಗೈದ ಆರೋಪಿ. ಸೂಳೆಬೈಲು ನಿವಾಸಿ ತಸೀನಾ (26) ಕೊಲೆಯಾದ ಮಹಿಳೆ. ಆರೋಪಿ ಅಬುಸಲೇಹ್‍ನನ್ನು ಪೊಲೀಸರು ಇಂದು ವಿನೋಬನಗರದ ರೈಲ್ವೆ ಟ್ರ್ಯಾಕ್ ಬಳಿ ಬಂಧಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?:
ನಗರದ ವಿದ್ಯಾನಗರ ರೈಲ್ವೆ ನಿಲ್ದಾಣದ ಬಳಿ ಜನವರಿ 2ರಂದು ಓಮ್ನಿ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವವೊಂದು ಪತ್ತೆಯಾಗಿತ್ತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಕೋಟೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಇದೊಂದು ಪಕ್ಕಾ ಮರ್ಡರ್ ಎಂದು ನಿರ್ಧರಿಸಿದ್ದರು. ಅಷ್ಟೇ ಅಲ್ಲದೆ ಆರೋಪಿಗಳ ಪತ್ತೆಗಾಗಿ ತನಿಖೆ ಆರಂಭಿಸಿ, ಕೊಲೆಯಾದ ಮಹಿಳೆ ಸೂಳೆಬೈಲು ನಿವಾಸಿ ತಸೀನಾ ಎಂದು ಗುರುತಿಸಿದ್ದರು. ಬಳಿಕ ತನಿಖೆಯನ್ನು ತೀವ್ರಗೊಳಿಸಿದಾಗ ಅಬುಸಲೇಹ್ ಮೇಲೆ ಅನುಮಾನ ವ್ಯಕ್ತಪಡಿಸಿ ಬಂಧಿಸಿದಾಗ ಪ್ರಕರಣ ಸತ್ಯ ಬೆಳಕಿಗೆ ಬಂದಿದೆ.
Advertisement
ವಿವಾಹಿತೆ ತಸೀನಾ ಹಾಗೂ ಅಬುಸಲೇಹ್ ಮಧ್ಯೆ ಕಳೆದ ಹಲವಾರು ವರ್ಷಗಳಿಂದ ಅನೈತಿಕ ಸಂಬಂಧವಿತ್ತು. ಅಷ್ಟೇ ಅಲ್ಲದೆ ಪ್ರಿಯಕರ ಅಬುಸಲೇಹ್‍ಗೆ ಈಗಾಗಲೇ ವಿವಾಹ ಸಹ ಆಗಿದೆ. ಆದರೆ ತಸೀನಾ ಮಾತ್ರ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದಳು. ನನ್ನ ಪತಿ ಹಾಗೂ ಮಗುವನ್ನು ಬಿಟ್ಟು ನಿನ್ನ ಜೊತೆಗೆ ಬರುತ್ತೇನೆ. ನೀನು ಕೂಡ ನಿನ್ನ ಪತ್ನಿಗೆ ತಲಾಖ್ ನೀಡಿ ನನ್ನನ್ನು ಮದುವೆಯಾಗು ಎಂದು ತಸೀನಾ ಅಬುಸಲೇಹ್‍ಗೆ ಒತ್ತಾಯಿಸುತ್ತಿದ್ದಳು. ಆರೋಪಿ ಅಬುಸಲೇಹ್ ತನ್ನ ಪತ್ನಿಗೆ ತಲಾಖ್ ನೀಡಲು ಒಪ್ಪದಿದ್ದಾಗ ಇಬ್ಬರ ನಡುವೆ ಗಲಾಟೆ ಆರಂಭವಾಗಿತ್ತು ಎನ್ನುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
Advertisement
ಮದುವೆಯಾಗುವಂತೆ ತಸೀನಾಳಿಂದ ಒತ್ತಡ ಹೆಚ್ಚಾಗಿದ್ದರಿಂದ ಅಬುಸಲೇಹ್ ಅಸಮಾಧಾನ ವ್ಯಕ್ತಪಡಿಸಿದ್ದ. ಹೀಗಾಗಿ ಅಬುಸಲೇಹ್ 2019ರ ಡಿಸೆಂಬರ್ 22ರಂದು ತಸೀನಾಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ಬಳಿಕ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಕೊಲೆಗೈದಿದ್ದ. ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು ಮೃತದೇಹವನ್ನು ಪ್ಲಾಸ್ಟಿಕ್‍ನಲ್ಲಿ ಸುತ್ತಿ ಮಾರುತಿ ಓಮ್ನಿಯಲ್ಲಿ ಹಾಕಿದ್ದ ಎನ್ನುವುದನ್ನು ಆರೋಪಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಆರೋಪಿ ಸಿಕ್ಕಿಬಿದ್ದಿದ್ದ ಹೇಗೆ?:
ಡಿಸೆಂಬರ್ 22ರಂದು ಮನೆಯಿಂದ ಹೊರಗೆ ಹೋಗಿದ್ದ ತಸೀನಾ ಮತ್ತೆ ಮನೆಗೆ ವಾಪಸ್ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಎಲ್ಲ ಕಡೆ ಹುಡುಕಾಡಿದ್ದರು. ಆದರೆ ತಸೀನಾ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಡಿಸೆಂಬರ್ 23ರಂದು ತುಂಗಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತಸೀನಾ ಮೃತದೇಹ ಪತ್ತೆಯಾದ ನಂತರ ಆಕೆಯ ಕುಟುಂಬಸ್ಥರು, ಕೊಲೆಯ ಹಿಂದೆ ನಾಲ್ವರ ಕೈವಾಡವಿದೆ ಎಂದು ಎಸ್‍ಪಿಗೆ ದೂರು ನೀಡಿದ್ದರು. ತಸೀನಾ ಮೊಬೈಲ್‍ಗೆ ಬಂದಿದ್ದ ಮತ್ತು ಕರೆ ಮಾಡಿದ್ದ ನಂಬರ್ ಗಳ ಜಾಡು ಹಿಡಿದ ಪೊಲೀಸರಿಗೆ ಕೊಲೆಯ ಹಿಂದೆ ಆಕೆಯ ಪ್ರಿಯಕರನೇ ಇರುವುದು ಪತ್ತೆಯಾಯಿತು. ತಕ್ಷಣವೇ ಕಾರ್ಯಾಚರಣೆ ಚುರುಕುಗೊಳಿಸಿ ವಿನೋಬನಗರದ ರೈಲ್ವೆ ಟ್ರ್ಯಾಕ್ ಬಳಿ ಬಂಧಿಸಿದ್ದಾರೆ.