– ಕೂಚಿಪುಡಿ, ಭರತನಾಟ್ಯ ಕಲಾವಿದೆ, ʻವಸಂತ ಸೇನೆʼ ಪಾತ್ರದಲ್ಲಿ ಮಿಂಚಿದ್ದ ಲಕ್ಷ್ಮಿ
ಶಿವಮೊಗ್ಗ: ಪತಿಯನ್ನು ಕೊಲೆಗೈದು ಮರಣದಂಡನೆ ಶಿಕ್ಷೆಗೆ (Death Penalty) ಗುರಿಯಾಗಿರುವ ಭದ್ರಾವತಿಯ (Bhadravathi) ಶಿಕ್ಷಕಿ (Teacher) ಲಕ್ಷ್ಮಿ ಬಿಎಡ್‌ನಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್ ಪಡೆದಿದ್ದಳು. ಅಲ್ಲದೇ ಆಕೆ ಕೂಚಿಪುಡಿ, ಭರತನಾಟ್ಯ ಕಲಾವಿದೆಯಾಗಿದ್ದು, ರಂಗನಟಿಯೂ ಆಗಿದ್ದಳು. ‘ಮೃಚ್ಛಕಟಿಕಂ’ ನಾಟಕದಲ್ಲಿ ʻವಸಂತ ಸೇನೆʼ ಪಾತ್ರದಲ್ಲಿ ಮಿಂಚಿದ್ದಳು.
‘ಮಾತೆ ಮಂಡೋದರಿ’, ಚಿಮ್ಮವುಗೆ’, ‘ಉಡುತಡಿ’ ನಾಟಕಗಳಲ್ಲಿ ಗಮನಾರ್ಹ ಪಾತ್ರಗಳಲ್ಲಿ ನಟಿಸಿದ್ದಳು. ಇನ್ನೂ, 2024ರಲ್ಲಿ ಬೆಂಗಳೂರಿನ ಸಂಸ್ಥೆಯೊಂದರಿಂದ ಆಯೋಜಿಸಿದ್ದ ‘ಸೌಥ್ ಏಷ್ಯನ್ ವುಮೆನ್ ಅಚೀವರ್ಸ್ ಅವಾರ್ಡ್’ನ ಅಂತಿಮ ಸುತ್ತಿಗೆ ಪ್ರವೇಶಪಡೆದಿದ್ದಳು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಶಿವಮೊಗ್ಗ | ಪ್ರಿಯಕರನೊಂದಿಗೆ ಸೇರಿ ಪತಿ ಕೊಂದ ಶಿಕ್ಷಕಿಗೆ ಮರಣದಂಡನೆ
2011ರಲ್ಲಿ ಕಲಬುರಗಿಯಲ್ಲಿ ಸರ್ಕಾರಿ ಶಾಲೆ ಶಿಕ್ಷಕಿಯಾಗಿ ನೇಮಕಗೊಂಡಿದ್ದ ಲಕ್ಷ್ಮಿ, ಅಲ್ಲಿಯೇ ಕೆಲಸ ಮಾಡುತ್ತಿದ್ದ ಆನವಟ್ಟಿಯ ಶಿಕ್ಷಕ ಇಮ್ಮಿಯಾಜ್ ಅಹಮದ್ ಖಾನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಳು. ನಂತರ ದಂಪತಿ ವಾಪಸ್ ಶಿವಮೊಗ್ಗ ಜಿಲ್ಲೆಯ ಬೇರೆ ಬೇರೆ ಶಾಲೆಗಳಿಗೆ ವರ್ಗಾವಣೆ ಪಡೆದಿದ್ದರು. ದಂಪತಿಗೆ ಪುತ್ರ ಇದ್ದಾನೆ.
ಭದ್ರಾವತಿಯ ಜನ್ನಾಪುರದಲ್ಲಿ ವಾಸವಿದ್ದ ಲಕ್ಷ್ಮಿಗೆ ಬಾಲ್ಯದ ಸ್ನೇಹಿತ ವೃತ್ತಿಯಲ್ಲಿ ಚಾಲಕನಾಗಿದ್ದ ಕೃಷ್ಣಮೂರ್ತಿ ಜತೆ ಆತ್ಮೀಯತೆ ಬೆಳೆದಿತ್ತು. ಅದಕ್ಕೆ `ಆಕ್ಷೇಪಿಸಿದ್ದ ಪತಿ ಇಮ್ಮಿಯಾಜ್ ಅವರನ್ನು ಲಕ್ಷ್ಮಿ, ಕೃಷ್ಣಮೂರ್ತಿ ಹಾಗೂ ಆತನ ಸಂಬಂಧಿ ಶಿವರಾಜ್ 2016ರ ಜುಲೈ 7ರಂದು ಕೊಲೆ ಮಾಡಿದ್ದರು. ಬಳಿಕ ಮೃತದೇಹವನ್ನು ಭದ್ರಾನದಿಗೆ ಎಸೆದಿದ್ದರು.
ಈ ಸಂಬಂಧ ಇಮ್ತಿಯಾಜ್ ಸಹೋದರ ಎಜಾಜ್ ಅಹಮದ್ ದಾಖಲಿಸಿದ್ದ ದೂರು ಆಧರಿಸಿ ತನಿಖೆ ನಡೆಸಿದ್ದ ಭದ್ರಾವತಿಯ ನ್ಯೂಟೌನ್ ಪೊಲೀಸರು, ಮೂವರನ್ನು ಬಂಧಿಸಿ ವಿಚಾರಣೆ ನಡೆಸಿ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಶನಿವಾರ (ಆ.23) ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಿಚಾರಣೆ ನಡೆಸಿ ಪ್ರಕರಣದ ಇಬ್ಬರು ಆರೋಪಿಗಳಿಗೆ ಮರಣದಂಡನೆ ಹಾಗೂ ಮತ್ತೋರ್ವನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಇದಕ್ಕೂ ಮುನ್ನ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದ ಲಕ್ಷ್ಮಿ, ಶಿವಮೊಗ್ಗದ (Shivamogga) ಸರ್ಕಾರಿ ಉರ್ದು ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಇದೇ ಫೆಬ್ರುವರಿಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನಡೆಸಿದ ಬಿ.ಇಡಿ ಪರೀಕ್ಷೆಯಲ್ಲಿ ಮೂರನೇ ರ‍್ಯಾಂಕ್ ಪಡೆದಿದ್ದಳು. ಇದನ್ನೂ ಓದಿ: ಮಂಗಳೂರು | ಕುಡುಪುವಿನಲ್ಲಿ ಅಶ್ರಫ್ ಕೊಲೆ ಪ್ರಕರಣ – 10 ಆರೋಪಿಗಳ ಜಾಮೀನು ಅರ್ಜಿ ವಜಾ