ಶಿವಮೊಗ್ಗ : ಜಿಲ್ಲೆಯ ಸಾಗರದ ಅರಣ್ಯ ಕಚೇರಿಯ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ 45 ಕೆ.ಜಿ ಶ್ರೀಗಂಧ ದೋಚಿ, ಅರಣ್ಯ ಸಿಬ್ಬಂದಿಯನ್ನು ಹತ್ಯೆಗೈದಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಸಾಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಫೆ.7 ರಂದು ಅರಣ್ಯ ಕಚೇರಿಯ ಗೋದಾಮಿನಲ್ಲಿ ಇರಿಸಲಾಗಿದ್ದ ಶ್ರೀಗಂಧ ದೋಚಿ ಪರಾರಿಯಾಗಿದ್ದರು. ಈ ವೇಳೆ ರಾತ್ರಿ ಪಾಳಿಯಲ್ಲಿದ್ದ ನಾಗರಾಜ್ ಎಂಬ ಅರಣ್ಯ ಸಿಬ್ಬಂದಿ ನಾಪತ್ತೆಯಾಗಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಪೊಲೀಸರು ಶ್ರೀಗಂಧ ಕಳ್ಳತನದ ಹಿಂದೆ ಅರಣ್ಯ ಸಿಬ್ಬಂದಿ ಕೈವಾಡವಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಅರಣ್ಯ ಕಚೇರಿಯಿಂದ ಅನತಿ ದೂರದಲ್ಲಿ ಅರಣ್ಯ ಸಿಬ್ಬಂದಿ ನಾಗರಾಜ್ ಮೃತದೇಹ ಪತ್ತೆಯಾಗಿತ್ತು.
Advertisement
ಹೀಗಾಗಿ ಪೊಲೀಸರು ಶ್ರೀಗಂಧ ದೋಚಿದ್ದ ಕಳ್ಳರೇ ನಾಗರಾಜ್ ಅವರನ್ನು ಹತ್ಯೆ ಮಾಡಿದ್ದಾರೆ ಎಂಬುದು ಪೊಲೀಸರಿಗೆ ಖಾತ್ರಿ ಆಗಿತ್ತು. ಘಟನೆ ನಂತರ ತಂಡ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು ಒಂದು ವಾರದಲ್ಲಿಯೇ ಆರೋಪಿಗಳನ್ನು ಪತ್ತೆ ಹಚ್ಚಿ ಭದ್ರಾವತಿಯ ಹೊನ್ನಟ್ಟಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಮೈಸೂರಿನ ಸದ್ದಾಂ, ಜಬ್ಬಾರ್, ತಮಿಳುನಾಡಿನ ಚೆಲುವ, ಭದ್ರಾವತಿಯ ಇಮ್ರಾನ್, ಅಜೀಜ್ ಬಂಧಿತ ಆರೋಪಿಗಳು. ಬಂಧಿತರಿಂದ ಮೂರು ಕಾರು ಹಾಗೂ 45 ಕೆಜಿ ಶ್ರೀಗಂಧ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
Advertisement