ಜನ್ಮದಾತರ ಪಾದಪೂಜೆ ಮಾಡಿ ವಿದ್ಯಾರ್ಥಿಗಳಿಂದ ವಿಶೇಷವಾಗಿ ಹೊಸ ವರ್ಷಾಚರಣೆ

Public TV
2 Min Read
smg paada pooja copy

ಶಿವಮೊಗ್ಗ: ಕುಡಿದು, ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಆಚರಿಸುವುದು ಸಾಮಾನ್ಯ. ಆದರೆ ಶಿವಮೊಗ್ಗದ ಶಾಲೆಯೊಂದರಲ್ಲಿ ಹೊಸವರ್ಷದ ದಿನದಂದು ಪೋಷಕರ ಪಾದಪೂಜೆ ಮಾಡುವ ಮೂಲಕ ಮಕ್ಕಳು ಹೊಸ ವರ್ಷಾಚರಣೆ ಮಾಡಿದ್ದಾರೆ.

smg paada pooja 3

ಶಿವಮೊಗ್ಗ ತಾಲೂಕು ಅನುಪಿನಕಟ್ಟೆಯಲ್ಲಿನ ರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಹೊಸವರ್ಷದ ದಿನದಂದು ರೀತಿ ಕೇಕ್ ಕಟ್ ಮಾಡಿ, ಡ್ಯಾನ್ಸ್ ಮಾಡಿ ಆಚರಣೆ ಮಾಡುವುದಿಲ್ಲ. ಬದಲಿಗೆ ವಿದ್ಯಾರ್ಥಿಗಳು ಸತ್ಯನಾರಾಯಣ ಪೂಜೆ ಹಾಗೂ ತಮ್ಮ ಜನ್ಮದಾತರ ಪಾದಪೂಜೆ ಮಾಡುವ ಮೂಲಕ ಹೊಸ ವರ್ಷಾಚರಣೆ ಮಾಡುತ್ತಾರೆ.

ಹೊಸ ವರ್ಷದ ದಿನದಂದು ಪೋಷಕರು ಎಲ್ಲರೂ ಸಾಂಪ್ರದಾಯಿಕ ಉಡುಪು ಧರಿಸಿ ಶಾಲೆಗೆ ಬರುತ್ತಾರೆ. ಪುರುಷರು ಪಂಚೆ, ಅಂಗಿ ಧರಿಸಿದರೆ, ಮಹಿಳೆಯರು ಸೀರೆಯಲ್ಲಿ ಬರುತ್ತಾರೆ. ಈ ವೇಳೆ ವಿದ್ಯಾರ್ಥಿಗಳು ತಮ್ಮ ತಂದೆ, ತಾಯಿಯರ ಪಾದ ತೊಳೆದು, ಸಂಪ್ರದಾಯ ಬದ್ಧ, ಶಾಸ್ತ್ರೋತ್ರವಾಗಿ ಪಾದ ಪೂಜೆ ಮಾಡುತ್ತಾರೆ. ಪೋಷಕರ ಪಾದ ತೊಳೆದು, ಒರೆಯಿಸಿ, ವಿಭೂತಿ, ಅರಿಶಿನ, ಕುಂಕುಮ ಹಚ್ಚಿ, ಹೂವು ಇಟ್ಟು ಗಂಧದ ಕಡ್ಡಿ ಬೆಳಗಿ ಮಂಗಳಾರತಿ ಮಾಡಿ ಪಾದಪೂಜೆ ಮಾಡುತ್ತಾರೆ.

smg paada pooja

ವಿದ್ಯಾರ್ಥಿಗಳಿಗೆ ಶಾಲೆಯ ಹಿರಿಯರೊಬ್ಬರು ಪೂಜೆಯನ್ನು ಹೇಗೆ ಮಾಡುವುದು ಎಂದು ಮಾರ್ಗದರ್ಶನ ನೀಡುತ್ತಾರೆ. ಅದರಂತೆ ವಿದ್ಯಾರ್ಥಿಗಳು ಪೂಜೆ ಮಾಡುತ್ತಾರೆ. ವಿದ್ಯಾರ್ಥಿಗಳು ಈ ರೀತಿ ಪಾದಪೂಜೆ ಮಾಡುವುದರಿಂದ ಪೋಷಕರ ಬಗ್ಗೆ ಪ್ರೀತಿ, ಗೌರವ ಹೆಚ್ಚಾಗುತ್ತದೆ. ಇಬ್ಬರ ನಡುವೆ ಆತ್ಮೀಯತೆ ಬೆಳೆಯುತ್ತದೆ. ಇದು ವಸತಿ ಶಾಲೆಯಾದ ಕಾರಣ ವಿದ್ಯಾರ್ಥಿಗಳು ತಮ್ಮ ಪೋಷಕರನ್ನು ಬಿಟ್ಟು ದೂರ ಇರುತ್ತಾರೆ. ಈ ರೀತಿಯ ಕಾರ್ಯಕ್ರಮದಿಂದ ಅವರು ಹತ್ತಿರವಾಗುತ್ತಾರೆ. ಅಲ್ಲದೆ ವಿದ್ಯಾರ್ಥಿ ಹಾಗೂ ತಂದೆ- ತಾಯಿಗಳಿಬ್ಬರ ನಡುವೆ ಆತ್ಮೀಯತೆ ಬೆಳೆಯುತ್ತದೆ ಎಂಬ ಉದ್ದೇಶದಿಂದ ಈ ಪೂಜೆ ಮಾಡಿಸಲಾಗುತ್ತದೆ.

ರಾಮಕೃಷ್ಣ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಪಾದಪೂಜೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷದ ಕಾರ್ಯಕ್ರಮಕ್ಕೆ ಪೋಷಕರು ತಮ್ಮ ಮಕ್ಕಳು ಶಾಲೆಯಲ್ಲಿ ಇರುವಷ್ಟು ವರ್ಷ ತಪ್ಪದೆ ಬರುತ್ತಾರೆ.

smg paada pooja 2 copy

ಈ ಬಾರಿಯ ಕಾರ್ಯಕ್ರಮದ ಸಾನಿಧ್ಯವನ್ನು ಕೊಡಲಿ ಮಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ವಹಿಸಿದ್ದರು. ಮಕ್ಕಳು ತಮ್ಮ ತಂದೆ-ತಾಯಿಗಳಿಂದ ದೂರವಿದ್ದು ಅವರಿಬ್ಬರ ನಡುವೆ ಆತ್ಮೀಯತೆ ಕಡಿಮೆಯಾಗಿ, ಮುಂದೆ ವಯಸ್ಸಾದ ತಂದೆ ತಾಯಿಯರನ್ನು ನೋಡಿ ಕೊಳ್ಳದೆ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಹೀಗಾಗಿ ಮಕ್ಕಳು ಹಾಗೂ ಪೋಷಕರ ನಡುವೆ ಕೊಂಡಿಯಾಗಿ ಶಾಲೆಯು ಪಾದಪೂಜೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂದು ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಶೋಭಾ ವೆಂಟಕರಮಣ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಸಹ ಪಾದಪೂಜೆಯಿಂದ ನಮ್ಮಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

smg pada pooje 3

Share This Article
Leave a Comment

Leave a Reply

Your email address will not be published. Required fields are marked *