ಶಿವಮೊಗ್ಗ: 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಕೊರೊನಾ ಎಂಬ ಸಂಕಷ್ಟದ ಕಾಲದಲ್ಲಿ ತಮ್ಮ ಕಷ್ಟದ ದಿನಗಳನ್ನು ಕೂಡ ಲೆಕ್ಕಿಸದೇ, ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಕೆಲಸ ಮಾಡುವ ಇವರ ಹೆರಸು ರೂಪಾ, ಕೊರೊನಾದಂತಹ ವಿಷಮ ಪರಿಸ್ಥಿತಿಯಲ್ಲಿಯೂ ಕೂಡ ಸೇವೆಯಿಂದ ವಿಮುಖರಾಗದೇ, ಮಾತೃತ್ವದ ರಜೆ ಕೂಡ ತೆಗೆದುಕೊಳ್ಳದೇ ಕೊರೊನಾ ವಾರಿಯರ್ ಅಂದ್ರೆ ಏನು ಎಂಬುದು ತೋರಿಸಿಕೊಟ್ಟಿದ್ದಾರೆ.
ಇಡೀ ವಿಶ್ವವೇ ಕೊರೊನಾ ಎಂಬ ಮಹಾಮಾರಿಯಿಂದ ತತ್ತರಿಸಿ ಹೋಗಿದೆ. ಕಣ್ಣಿಗೆ ಕಾಣದ ಒಂದು ವೈರಸ್ ನಿಂದ ಜನರು ಬಳಲುವಂತಾಗಿದ್ದು, ಯಾವಾಗಪ್ಪ ಇದು ಮುಗಿಯುತ್ತೇ ಎಂದು ಚಾತಕ ಪಕ್ಷಿಯಂತೆ ಜನರು ಕಾಯುತ್ತಿದ್ದಾರೆ. ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಕೊರೊನಾ ಸೋಂಕಿನಿಂದ ದೂರವಿರಬೇಕೆಂದು ಲಾಕ್‍ಡೌನ್ ಘೋಷಿಸಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಜೀವದ ಹಂಗನ್ನು ತೊರೆದು ಕೊರೊನಾ ವಾರಿಯರ್ಸ್ ಹೆಸರಿನಲ್ಲಿ ಆಶಾ ಮತ್ತು ಅಂಗನವಾಡಿ ಹಾಗೂ ವೈದ್ಯಕೀಯ ಸಿಬ್ಬಂದಿ ಹಗಲಿರುಳು ಜನರ ಸೇವೆ ಮಾಡುತ್ತಿದ್ದಾರೆ.
ಅಂತಹದರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಶ್ರೀ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯೊಬ್ಬರು ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ಇದರಲ್ಲೇನು ವಿಶೇಷತೆ ಅಂತಿರಾ? ವಿಶೇಷವಿದೆ. ಇವರು ಕೇವಲ ಒಬ್ಬ ವೈದ್ಯಕೀಯ ಸಿಬ್ಬಂದಿಯಾಗಿದ್ರೆ ಬೇರೆ ಮಾತು. ಆದರೆ ಈ ಮಹಿಳೆ ನಿಜವಾಗಿಯೂ ಗಟ್ಟಿಗಿತ್ತಿ. ಯಾಕೆಂದರೆ ಇವರು 9 ತಿಂಗಳ ತುಂಬು ಗರ್ಭಿಣಿ. ಈ ಕೊರೊನಾ ಎಂಬ ಸಂಕಷ್ಟದ ಸಮಯದಲ್ಲಿ ತಮ್ಮ ಸಂಕಷ್ಟವನ್ನೆಲ್ಲ ಮರೆತು ರೋಗಿಗಳ ಸೇವೆ ಮತ್ತು ಅವರ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.
ಜನರು ರಸ್ತೆಗಿಳಿಯಲು ಅದರಲ್ಲೂ ವಿನಾಕಾರಣ ಆಸ್ಪತ್ರೆ ಒಳಗಡೆ ಅಲ್ಲ ಅದರ ಆವರಣಕ್ಕೂ ಹೋಗಲು ಹಿಂಜರಿಯುತ್ತಿರುವ ವೇಳೆಯಲ್ಲಿ ಈ ಕೊರೊನಾ ವಾರಿಯರ್ ರೂಪರವರು, ತಾವು ತುಂಬು ಗರ್ಭಿಣಿ ಎಂಬುದನ್ನು ಮರೆತು ತಮಗಾಗುವ ಆಯಾಸವನ್ನೆಲ್ಲಾ ಬದಿಗಿಟ್ಟು, ಸೇವೆಗೆ ಮುಂದಾಗಿದ್ದಾರೆ. ಪ್ರತಿದಿನ ಇಲ್ಲಿನ ತಾಲೂಕು ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ಪ್ರಸೂತಿ ವಿಭಾಗದಲ್ಲಿ ದಾಖಲಾದವರ ಆರೈಕೆಯಲ್ಲಿ ತೊಡಗಿಕೊಂಡು ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ರೆಸ್ಟ್ ಎಂಬ ಹೆಸರಿನಲ್ಲಿ ಮನೆಯಲ್ಲಿರಲು ಇವರಿಗೆ ಇಷ್ಟವಾಗುವುದಿಲ್ಲವಂತೆ. ಕಳೆದ 8-9 ವರ್ಷಗಳಿಂದ ನಿರಂತರವಾಗಿ ಆಸ್ಪತ್ರೆಯಲ್ಲಿ ಸೇವೆ ಮಾಡಿಕೊಂಡು ಬಂದಿರುವ ವೈದ್ಯಕೀಯ ಸಿಬ್ಬಂದಿ ರೂಪಾರವರು ಇತರೇ ಸಿಬ್ಬಂದಿಗೆ ಮಾದರಿಯಾಗಿದ್ದಾರೆ.
ಶಿವಮೊಗ್ಗದ ಗಾಜನೂರು ಗ್ರಾಮದಿಂದ ಸುಮಾರು 60 ಕಿ.ಮೀ. ದೂರವಿರುವ ತೀರ್ಥಹಳ್ಳಿ ಪಟ್ಟಣಕ್ಕೆ ಪ್ರತಿದಿನ ಬಸ್ಸಿನಲ್ಲೇ ಪಯಾಣಿಸಿ, ಸೇವೆ ಮಾಡುತ್ತಿದ್ದಾರೆ. ಪ್ರತಿದಿನ ಸುಮಾರು 120 ಕಿ.ಮೀ. ಪ್ರಯಾಣ ಮಾಡುವ ಇವರು ಬಳಲದೇ ಲವಲವಿಕೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತೀರ್ಥಹಳ್ಳಿಯ ಜನರು ಸುತ್ತಮುತ್ತಲ ಗ್ರಾಮಸ್ಥರು ಆರೋಗ್ಯ ಸೇವೆಗೆ ನಮ್ಮನ್ನು ನಂಬಿಕೊಂಡು ಬರುತ್ತಾರೆ. ಕೊರೊನಾ ಲಾಕ್‍ಡೌನ್ ಮಧ್ಯೆ ಜನರ ಸೇವೆ ಮಾಡುವುದು ಮುಖ್ಯ ಎಂದು ಭಾವಿಸಿ ಆಸ್ಪತ್ರೆಗೆ ಬರುತ್ತಿದ್ದಾರೆ.
ಅಷ್ಟಕ್ಕೂ ತಮ್ಮ ಚೊಚ್ಚಲ ಹೆರಿಗೆಯ ಬೆರಳೆಣಿಕೆ ದಿನಗಳನ್ನು ಎಣಿಸುತ್ತಿರುವ ವಾರಿಯರ್ ರೂಪಾರವರು ಈ ರೀತಿ ನಿಸ್ವಾರ್ಥ ಸೇವೆಗೆ ಮುಂದಾಗಿರುವುದು ಆಸ್ಪತ್ರೆಯ ಇತರೇ ಸಿಬ್ಬಂದಿ ಮತ್ತು ಇಲ್ಲಿನ ವೈದ್ಯಾಧಿಕಾರಿಗಳಿಗೆ ಹೆಮ್ಮೆಯ ವಿಷಯವಾಗಿದೆ. ಅಲ್ಲದೇ ಆಸ್ಪತ್ರೆಯವರು 7 ತಿಂಗಳಾಗುತ್ತಿದ್ದಂತೆ ರಜೆ ತಗೆದುಕೊಳ್ಳಿ ಎಂದಿದ್ದರು ಕೂಡ ರೂಪಾರವರು ಇಲ್ಲ ನಾನು ಇಲ್ಲಿಯೇ ಕರ್ತವ್ಯ ನಿರ್ವಹಿಸುತ್ತೇನೆ. ನನಗೆ ರಜೆ ಬೇಡ ಎಂದಿದ್ದಾರಂತೆ. 9 ತಿಂಗಳ ನೋವು ಸಂಕಟವನ್ನೇಲ್ಲಾ ಅಸ್ಪತ್ರೆಯಲ್ಲಿ ಬರುವ ರೋಗಿಗಳ ಸೇವೆ ಮಾಡುತ್ತಾ ಮರೆತು ಆಸ್ಪತ್ರೆಯಲ್ಲಿ ಖುಷಿ, ಖುಷಿಯಾಗಿ, ಲವಲವಿಕೆಯಿಂದ ಓಡಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೊದಮೊದಲು ತಮ್ಮ ಕುಟುಂಬದವರಿಗೆ ಇದು ಇಷ್ಟವಿಲ್ಲದೇ ಇದ್ದರೂ ಕೂಡ ಅವರ ಮನವೊಲಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರಿಗೆ ಮಾತೃತ್ವ ರಜೆ ತೆಗೆದುಕೊಳ್ಳುವ ಅವಕಾಶವಿದ್ದರೂ ಕೂಡ ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಮನೆಯಲ್ಲಿ ಸುಮ್ಮನೇ ಕುಳಿತುಕೊಳ್ಳದೇ ಜನರ ಸೇವೆಗೆ ಮುಂದಾಗಿರುವುದಕ್ಕೆ ರೂಪಾರನ್ನು ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯಾಧಿಕಾರಿಗಳು ಶ್ಲಾಘಿಸಿದ್ದಾರೆ.
ಒಟ್ಟಾರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಆರೈಕೆ ಮಾಡುವ ವೈದ್ಯಕೀಯ ಸಿಬ್ಬಂದಿಯನ್ನು ದೇವರು ಎಂದು ಜನರು ಭಾವಿಸಿ ಬರುತ್ತಾರೆ. ಹೀಗಾಗಿ ಇಂತಹ ಸಂಕಷ್ಟದ ಸಮಯದಲ್ಲೂ ವಿರಮಿಸದೇ ಅವರ ಸೇವೆ ಮಾಡುವುದೇ ಮುಖ್ಯ ಎಂಬದು ರೂಪಾರವರ ತೀರ್ಮಾನ. ಏನೇ ಆಗಲಿ ಕೊರೊನಾ ವಾರಿಯರ್ ಆಗಿ ಇಂತಹ ಸಮಯದಲ್ಲಿಯೂ ಸೇವೆ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ರೂಪಾರವರಿಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.