ಶಿವಮೊಗ್ಗ: ಭಾರತ್ ಬಂದ್ ಹಿನ್ನೆಲೆಯಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಹಿರಿಯ ಪೊಲೀಸ್ ಪೇದೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗದ ವಿದ್ಯಾನಗರದ ನಿವಾಸಿಯಾಗಿದ್ದ ರವಿಶೇಟ್ (38) ಹೃದಯಾಘಾತದಿಂದ ಸಾವನ್ನಪ್ಪಿದ ಪೇದೆ. ರವಿಶೇಟ್ ಅವರು ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಕಳೆದ ಮೂರು ವರ್ಷಗಳಿಂದ ಹಿರಿಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಭಾರತ್ ಬಂದ್‍ನಿಂದಾಗಿ ಅವರನ್ನು ಹೊಳೆಹೊನ್ನೂರಿನಲ್ಲಿ ಭದ್ರತೆಗೆ ನಿಯೋಜಿಸಲಾಗಿತ್ತು.
ಕರ್ತವ್ಯದಲ್ಲಿದ್ದಾಗ ರವಿಶೇಟ್ ಅವರಿಗೆ ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಶಿವಮೊಗ್ಗ ನಗರದ ಸುಬ್ಬಯ್ಯ ಆಸ್ಪತ್ರೆಗೆ ಕರೆತರುವಾಗ ತೀವ್ರ ಹೃದಯಾಘಾತವಾಗಿ ರವಿಶೇಟ್ ಸಾವನ್ನಪ್ಪಿದ್ದಾರೆ. ರವಿಶೇಟ್ ಅವರಿಗೆ ಪತ್ನಿ ಹಾಗೂ ಓರ್ವ ಪುತ್ರಿ ಇದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರವಿಶೇಟ್ ಅವರ ನಿಧನಕ್ಕೆ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ.