ಶಿವಮೊಗ್ಗ: ಮಿಲಿಟರಿ ಅಧಿಕಾರಿ ಹೆಸರಿನಲ್ಲಿ 1.17 ಲಕ್ಷ ರೂ. ಆನ್‍ಲೈನ್ ದೋಖಾ ಮಾಡಿರುವ ಪ್ರತ್ಯೇಕ ಎರಡು ಘಟನೆಗಳು ವರದಿಯಾಗಿವೆ.
ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಗರದ ಬೊಮ್ಮನಕಟ್ಟೆ ನಿವಾಸಿಯವರು ಮೋಸ ಹೋಗಿದ್ದು, 92 ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ. ಹಳೆಯ ಕಾರು ಖರೀದಿಸುವ ಉದ್ದೇಶದಿಂದ ಓಎಲ್‍ಎಕ್ಸ್ ನಲ್ಲಿ ಕಾರು ಮಾರಾಟಕ್ಕಿದೆ ಎಂಬ ಜಾಹೀರಾತು ಗಮನಿಸಿ ಕರೆ ಮಾಡಿದ್ದಾರೆ. ಆರೋಪಿ ತಾನು ಮಿಲಿಟರಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೇ ಆತ ತಾನು ಮೈಸೂರಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ. ಆನ್‍ಲೈನ್‍ನಲ್ಲಿ 92 ಸಾವಿರ ರೂ. ಪಾವತಿ ಮಾಡಿದ್ದಲ್ಲಿ ಕಾರನ್ನು ತಮ್ಮ ವಿಳಾಸಕ್ಕೆ ಕಳುಹಿಸುವ ಭರವಸೆ ನೀಡಿದ್ದ. ಆತನ ಮಾತನನ್ನು ನಂಬಿದ ಗ್ರಾಹಕ ಗೂಗಲ್ ಪೇ ಮೂಲಕ 92 ಸಾವಿರ ರೂ. ಹಾಕಿ ಟೋಪಿ ಹಾಕಿಸಿಕೊಂಡಿದ್ದಾರೆ.
Advertisement
Advertisement
ಮತ್ತೊಂದು ಪ್ರಕರಣ ನಗರದ ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಹೊಸಮನೆ ಬಡಾವಣೆ ನಿವಾಸಿಯೊಬ್ಬರು ಬೈಕ್ ಕೊಳ್ಳುವ ಉದ್ದೇಶದಿಂದ ಓಎಲ್‍ಎಕ್ಸ್ ನಲ್ಲಿ ಹುಡುಕಾಟ ನಡೆಸಿದ್ದರು. ಅದೇ ವೇಳೆ 25 ಸಾವಿರಕ್ಕೆ ಡಿಯೋ ಬೈಕ್ ಮಾರಾಟಕ್ಕೆ ಇದೆ ಎಂಬ ಜಾಹೀರಾತು ನೋಡಿದ್ದರು. ಆ ಬೈಕ್ ಇಷ್ಟವಾಗಿದ್ದಕ್ಕೆ ಜಾಹೀರಾತಿನಲ್ಲಿದ್ದ ಬೈಕಿನ ಮಾಲೀಕರಿಗೆ ಕರೆ ಮಾಡಿದ್ದರು.
Advertisement
ಈತ ಕೂಡ ತಾನು ಮಿಲಿಟರಿ ಅಧಿಕಾರಿ ಎಂದು ಗ್ರಾಹಕರ ಜೊತೆ ಪರಿಚಯ ಮಾಡಿಕೊಂಡಿದ್ದ. ಮಿಲಿಟರಿ ಅಧಿಕಾರಿ ಮೋಸ ಮಾಡುವುದಿಲ್ಲ ಎಂಬ ನಂಬಿಕೆಯಿಂದ ಗ್ರಾಹಕ ಗೂಗಲ್ ಪೇ ಮೂಲಕ 25 ಸಾವಿರ ರೂ. ಹಣ ಹಾಕಿದ್ದಾರೆ. ಆದರೆ ಬೈಕ್ ಬೇಕಾದರೆ ಮತ್ತೊಮ್ಮೆ ಹಣ ಪಾವತಿಸುವಂತೆ ಡಿಮ್ಯಾಂಡ್ ಮಾಡಿದ್ದಾನೆ. ಹೀಗಾಗಿ ತಾನು ಮೋಸ ಹೋಗಿರುವುದಾಗಿ ಅರಿತ ಗ್ರಾಹಕ ಪೊಲೀಸರಿಗೆ ದೂರು ನೀಡಿದ್ದಾನೆ.
Advertisement
ಮಿಲಿಟರಿ ಅಧಿಕಾರಿ ಹೆಸರಿನಲ್ಲಿ ಕೆಲವರು ಆನ್‍ಲೈನ್‍ನಲ್ಲಿ ಮೋಸ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಹಕರು ಆನ್‍ಲೈನ್‍ನಲ್ಲಿ ವಸ್ತುಗಳನ್ನು ಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು ಹಾಗೂ ಮೋಸ ಹೋಗಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.