ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣವಾಗಿ ಐದು ಮಂದಿ ಕೃತ್ಯ ಎಸಗಿರುವುದು ಸಾಬೀತಾಗಿದ್ದು, ಅವರಲ್ಲಿ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಯು ಶಿವಮೊಗ್ಗದ ಕ್ಲಾರ್ಕ್ ಪೇಟೆ ಮೂಲದ ಆರೋಪಿಯಾಗಿದ್ದಾನೆ. ದೊಡ್ಡಪೇಟೆ ಪೊಲೀಸರಿಂದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಆರೋಪಿಯು ಹಳೆಯ ವೈಷ್ಯಮದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದ್ದು, ಐದು ಮಂದಿ ಮಚ್ಚು ಲಾಂಗುಗಳಿಂದ ಹರ್ಷನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಉಳಿದ ನಾಲ್ವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಘಟನೆಯೇನು?: ಹರ್ಷ ಎಂಬಾತ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿದೆ. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿದೆ. ಇದನ್ನೂ ಓದಿ: ಯುವಕನ ಬರ್ಬರ ಹತ್ಯೆ – ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ
ಈ ವೇಳೆ ದಾಳಿಗೆ ಒಳಗಾದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ನಂತರ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಎರಡು ಕೋಮಿನ ಯುವಕರ ಗುಂಪು ಮೆಗ್ಗಾನ್ ಆಸ್ಪತ್ರೆ ಬಳಿ ಜಮಾಯಿಸಿತು. ಹೀಗಾಗಿ ಮೆಗ್ಗಾನ್ ಆಸ್ಪತ್ರೆ ಬಳಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಪರಿಸ್ಥಿತಿ ನಿಯಂತ್ರಿಸಲು ಗುಂಪುಗೂಡಿದ್ದ ಯುವಕರನ್ನು ಪೊಲೀಸರು ಮನೆಯತ್ತ ವಾಪಸ್ ಕಳುಹಿಸಿದ್ದಾರೆ ಮತ್ತು ಮುಂಜಾಗ್ರತಾ ಕ್ರಮವಾಗಿ ತಕ್ಷಣದಿಂದಲೇ ಶಿವಮೊಗ್ಗ ಜಿಲ್ಲೆಯಾದ್ಯಂತ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದನ್ನೂ ಓದಿ: ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ, ಶೀಘ್ರವೇ ಬಂಧನ: ಆರಗ ಜ್ಞಾನೇಂದ್ರ