ಶಿವಮೊಗ್ಗ: ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ನಡೆದುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.
ಜಿಲ್ಲೆಯ ಶಿಕಾರಿಪುರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಾಧನೆ ಮಾತಾಗಬಾರದು. ಮಾತು ಸಾಧನೆ ಆಗಬೇಕು ಎಂದರು. ಆದರೆ ಮಾತಿನ ಭರಾಟೆಯಲ್ಲಿ ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ನಡೆದುಕೊಳ್ಳುತ್ತೇನೆ ಎಂದು ಹೇಳಿದರು. ತಕ್ಷಣೆ ಎಚ್ಚೆತ್ತುಕೊಂಡ ಅವರು, ನಾನು ಸಣ್ಣವನು, ರಾಜಕಾರಣದಲ್ಲಿ ಬೆಳೆಯಬೇಕಿದೆ. ಹಾಗಾಗಿ ಸಿಎಂ ಯಡಿಯೂರಪ್ಪ ಅವರಿಗೆ ಮುಜುಗರ ಉಂಟು ಮಾಡುವ ರೀತಿಯಲ್ಲಿ ಮಾತನಾಡುವುದಿಲ್ಲ ಎಂದರು.
ಸಚಿವ ಸ್ಥಾನ ನೀಡುವುದು ಬಿಡುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರಮಾಧಿಕಾರ. ಸಚಿವ ಸ್ಥಾನ ಬೇಕು ಅಂತಾ ಮಾಧ್ಯಮದ ಮುಂದೆ ಬಾಯಿ ಬಾಯಿ ಬಡಿದುಕೊಂಡರೆ ನಾವು ಸಚಿವರಾಗಲು ಸಾಧ್ಯವೇ? ಅದಕ್ಕೆ ಇನ್ನು ಮುಂದೆ ಆದಷ್ಟು ಮೌನವಾಗಿ ಇರಬೇಕು ಅಂದುಕೊಂಡಿದ್ದೇನೆ ಎಂದರು.
ಹೆಚ್ಚು ಮಾತನಾಡಿದರೆ ಖಾಲಿ ಮತನಾಡುತ್ತಾನೆ. ಬೀದಿ ಬಸವ ಅನ್ನುತ್ತಾರೆ. ಅದಕ್ಕಾಗಿ ಮೌನವಾಗಿ ಇದ್ದು ಬಿಡಲು ತೀರ್ಮಾನಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಅಷ್ಟೇ ನನ್ನ ಆದ್ಯತೆ ಎಂದು ತಿಳಿಸಿದರು.
ರೇಣುಕಾಚಾರ್ಯ ಸಚಿವರು ಆಗಬೇಕು ಅಂದಾಗಲಿ ಅಥವಾ ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಯಾರು ಕೇಳಿರಲಿಲ್ಲ. ಆದರೆ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಿಂದ ಯಾರಾದರೂ ಒಬ್ಬರು ಸಚಿವರಾಗಬೇಕು ಎಂಬುದು ಜಿಲ್ಲೆಯ ಜನರ ಅಭಿಪ್ರಾಯ, ತೀರ್ಮಾನ ಆಗಿತ್ತು ಎಂದು ರೇಣುಕಾಚಾರ್ಯ ಹೇಳಿದರು.