– ಮಂಡ್ಯದಲ್ಲಿ ಅಣ್ಣನ ನೋಟು, ಅಕ್ಕನಿಗೆ ವೋಟ್
ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಇನ್ನೂ ಸಕ್ರಿಯ ರಾಜಕಾರಣದಲ್ಲಿರುತ್ತಾರೆ. ಯಡಿಯೂರಪ್ಪ ರಾಜಕೀಯ ನಿವೃತ್ತಿಯ ಮಾತೇ ಇಲ್ಲ ಎಂದು ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಅವರು ಸುಮಾರು 30-35 ವರ್ಷಗಳಿಂದ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ್ದಾರೆ. ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಬಡವರು-ದಲಿತರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ರಾಜ್ಯಾದ್ಯಂತ ಸಂಚರಿಸಿ ಪಕ್ಷ ಬೆಳೆಸಿದ್ದಾರೆ. ಹೀಗಾಗಿ ಅವರು ಇನ್ನೂ ಹತ್ತು- ಹದಿನೈದು ವರ್ಷ ಸಕ್ರಿಯ ರಾಜಕಾರಣದಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಮುಂದೆ ಸಾರ್ವಜನಿಕವಾಗಿ ಕಣ್ಣೀರು ಹಾಕೊಲ್ಲ ಎಂದಿದ್ದ ಸಿಎಂ ಕುಮಾರಸ್ವಾಮಿ ಸೋಮವಾರ ಸಾರ್ವಜನಿಕ ಸಭೆಯಲ್ಲಿ ಮತ್ತೆ ಕಣ್ಣೀರು ಹಾಕಿದ್ದಾರೆ. ಮಂಡ್ಯದಲ್ಲಿ ಎಷ್ಟು ಕೋಟಿ ಖರ್ಚು ಮಾಡಿದರೂ ಕುಮಾರಸ್ವಾಮಿ ಕಣ್ಣೀರು ಹಾಕುವ ಪರಿಸ್ಥಿತಿ ಇದೆ. ಅವರ ಜಾಗದಲ್ಲಿ ಯಾರೇ ಇದ್ರೆ ಕಣ್ಣೀರು ಹಾಕುವ ಪರಿಸ್ಥಿತಿ ಇದೆ. ಬಹುಶಃ ಕುಮಾರಸ್ವಾಮಿ ಅವರು ಪರ್ಮನೆಂಟಾಗಿ ಕಣ್ಣೀರು ಹಾಕೊಂಡು ಇರಬೇಕಾದ ಪರಿಸ್ಥಿತಿ ಇದೆ ಎಂದು ತಿಳಿಸಿದ್ರು.
ಅಣ್ಣನ ನೋಟು- ಅಕ್ಕನಿಗೆ ವೋಟು ಎಂಬ ಸ್ಲೋಗನ್ ಈಗ ಮಂಡ್ಯದಲ್ಲಿ ವ್ಯಾಪಕವಾಗಿದೆ. ಬಿಜೆಪಿ ಅಧಿಕೃತವಾಗಿ ಬೆಂಬಲ ಸೂಚಿಸಿದೆ. ಆದರೆ, ಜೆಡಿಎಸ್- ಕಾಂಗ್ರೆಸ್ ನಾಯಕರು ಅನಧಿಕೃತವಾಗಿ ಬೆಂಬಲ ನೀಡುತ್ತಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಕುಮಾರಸ್ವಾಮಿ, ರೇವಣ್ಣ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಜಾತಿ, ಪಕ್ಷ, ಧರ್ಮ ಆಧಾರದಲ್ಲಿ ಐಟಿ ದಾಳಿ ಆಗಲ್ಲ. ಹಾಸನ, ಮಂಡ್ಯದಲ್ಲಿ ರೈಡ್ ಆದಾಗ ಆಡಳಿತ ಪಕ್ಷ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಖಚಿತವಾಗಿದೆ. ಆಗದ ಕೆಲಸಗಳಿಗೆ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಗುತ್ತಿಗೆದಾರರು, ಉದ್ಯಮಿಗಳು ಅವರ ಸಂಬಂಧಿಗಳಾಗಿದ್ರೆ ಅದು ಕಾಕತಾಳಿಯ ಅಷ್ಟೇ ಅಂದ್ರು.