– ಶಿವಮೊಗ್ಗದಲ್ಲಿ ಸ್ಪರ್ಧಿಸಲು ಕೈ ನಾಯಕರ ಹಿಂದೇಟು
ಬೆಂಗಳೂರು: ರಾಜ್ಯ ಲೋಕಸಭಾ ಉಪಚುನಾವಣೆಯಾದ ಬಳಿಕ ಮೊದಲು ಅಭ್ಯರ್ಥಿ ಘೋಷಿಸಿದ್ದ ಬಿಜೆಪಿ ಭರ್ಜರಿ ಪ್ರಚಾರ ಆರಂಭಿಸಿದ್ದರೆ, ಇತ್ತ ಕಾಂಗ್ರೆಸ್ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ. ಇದರ ನಡುವೆಯೇ ಶಿವಮೊಗ್ಗ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಜೆಡಿಎಸ್‍ಗೆ ಕಾಂಗ್ರೆಸ್ ಬೆಂಬಲ ಸಿಕ್ಕಿದರೆ ಮಧು ಬಂಗಾರಪ್ಪ ಅಭ್ಯರ್ಥಿಯಾಗುವ ಸಾಧ್ಯತೆ ಇದ್ದು, ರಾಜ್ಯ ಕೈ ನಾಯಕರು ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಜೊತೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಮೂಲಕ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಶಸ್ತ್ರ ತ್ಯಾಗ ಮಾಡಲು ಮುಂದಾಗಿದೆ ಎಂಬ ಮಾಹಿತಿ ಲಭಿಸಿದೆ.
Advertisement
Advertisement
ಶಿವಮೊಗ್ಗದಲ್ಲಿ ಮೂರು ಪಕ್ಷಗಳು ಸಮಾನ ಪೈಪೋಟಿ ಹೊಂದಿದ್ದು, ಕಳೆದ ಬಾರಿ ಕಾಂಗ್ರೆಸ್ಸಿನಿಂದ ಸ್ಪರ್ಧೆ ಮಾಡಿದ್ದ ಮಂಜುನಾಥ ಭಂಡಾರಿ ಮೂರು ತಿಂಗಳ ಹಿಂದೆಯೇ ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಖಚಿತ ಪಡಿಸಿದ್ದಾರೆ. ಸದ್ಯ ಕಿಮ್ಮನೆ ರತ್ನಕರ್ ಅವರ ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ ಅವರಿಗೆ ಚುನಾವಣೆ ಸ್ಪರ್ಧೆ ಮಾಡಲು ಸಂಪನ್ಮೂಲ ಕ್ರೋಢಿಕರಣದ ಸಮಸ್ಯೆ ಕಾಣಿಸಿಕೊಂಡಿದೆ. ಉಳಿದಂತೆ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರು ರಾಜಕೀಯ ನಿವೃತ್ತಿ ತೆಗೆದುಕೊಂಡಿದ್ದು, ಸೂಕ್ತ ಅಭ್ಯರ್ಥಿ ಇಲ್ಲದ ಕಾರಣ ಚುನಾವಣೆಯಲ್ಲಿ ಹೀನಾಯವಾಗಿ ಸೋಲುವ ಬದಲು ಜೆಡಿಎಸ್‍ಗೆ ಯಾಕೆ ಬಿಟ್ಟು ಕೊಡಬಾರದು ಎನ್ನುವ ಚರ್ಚೆ ಆರಂಭವಾಗಿದೆ.
Advertisement
ಇತ್ತ ಜೆಡಿಎಸ್ ನಲ್ಲೂ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ನಡೆಯುತ್ತಿದ್ದು, ಮಧು ಬಂಗಾರಪ್ಪ ಅವರು ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ಸ್ಪಷ್ಟ ತೀರ್ಮಾನ ಮಾಡಿಲ್ಲ ಎನ್ನಲಾಗಿದೆ. ಇದರ ನಡುವೇ ಕಳೆದ ಬಾರಿ ಸ್ಪರ್ಧೆ ಮಾಡಿದ್ದ ಗೀತಾ ಶಿವರಾಜ್ ಕುಮಾರ್ ಅವರು ಈ ಬಾರಿ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಒಂದೊಮ್ಮೆ ಕಾಂಗ್ರೆಸ್ ಜೆಡಿಎಸ್‍ಗೆ ಬೆಂಬಲ ನೀಡಿದರೆ ಮಧು ಬಂಗಾರಪ್ಪ ಅವರು ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ.
Advertisement
ಶಿವಮೊಗ್ಗ ರಾಜಕಾರಣ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಇಂದು ಚರ್ಚೆ ನಡೆಯಲಿದೆ. ಒಂದು ವೇಳೆ ರಾಹುಲ್ ಗಾಂಧಿ ಜೆಡಿಎಸ್‍ಗೆ ಬೆಂಬಲ ನೀಡಿದರೆ ಶಿವಮೊಗ್ಗದಲ್ಲಿ ಮೈತ್ರಿ ಆಗುವ ಸಾಧ್ಯತೆ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv